ಬಿಹಾರದಲ್ಲಿ ಮತಾಂತರ ನಿಷೇಧ ಕಾನೂನು ಅಗತ್ಯವಿಲ್ಲ: ಸಿಎಂ ನಿತೀಶ್ ಕುಮಾರ್
ಪಾಟ್ನಾ, ಜೂ. 8: ವಿವಿಧ ಸಮುದಾಯದ ಜನರು ವಾಸಿಸುವ ರಾಜ್ಯ ಬಿಹಾರದಲ್ಲಿ ಮತಾಂತರ ನಿಷೇಧ ಕಾನೂನು ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಬುಧವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ಮಾಡುವವರ ಆಮಿಷಗಳಿಗೆ ಒಳಗಾಗಿ ಹಿಂದೂಗಳು ತಮ್ಮ ನಂಬಿಕೆಯನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ ಎಂಬ ವರದಿಗಳು ಆಗಾಗ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಕಾನೂನಿನ ಅಗತ್ಯತೆಯ ಕುರಿತು ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿದರು. ಬಿಹಾರದಲ್ಲಿ ಸರ್ಕಾರ ಯಾವಾಗಲೂ ಜಾಗೃತವಾಗಿರುತ್ತದೆ. ಜನರು ಅವರು ಯಾವುದೇ ಧಾರ್ಮಿಕ ಗುಂಪಿನವರಾಗಿರಲಿ, ಶಾಂತಿಯಿಂದ ಬದುಕುತ್ತಾರೆ. ಹೀಗಾಗಿ ಅಂತಹ ಕಾನೂನು ಇಲ್ಲಿ ಅಗತ್ಯವಿಲ್ಲ ಎಂದು ಹೇಳಿದರು.
ಜೆಡಿಯು ಅನ್ನು ನಿಯಂತ್ರಿಸುವ ಮತ್ತು ಸಮಾಜವಾದಿ ಚಳವಳಿಗೆ ರಾಜಕೀಯದಲ್ಲಿ ಅಡ್ಡಿಯಂತೆ ಭಾವಿಸಲಾಗಿರುವ ಮಿತ್ರ ಪಕ್ಷವಾದ ಬಿಜೆಪಿಗೆ ನಿತೀಶ್ ಕುಮಾರ್ ಅವರ ಅಸಮಾಧಾನ ಬಲವಾದ ಸಂದೇಶದಂತೆಯೂ ಕಾಣಬಹುದಾಗಿದೆ. ಆದರೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರಂತಹ ನಾಯಕರು ಮತಾಂತರ ವಿರೋಧಿ ಕಾನೂನಿನ ಅಗತ್ಯವನ್ನು ಒತ್ತಿಹೇಳುತ್ತಿದ್ದಾರೆ. ಈಗ ಜಾತಿ ಗಣತಿ ವಿಚಾರದಲ್ಲಿ ನಿತಿಶ್ ಕುಮಾರ್ ಮತ್ತು ಬಿಜೆಪಿ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯವೂ ಮುನ್ನೆಲೆಗೆ ಬಂದಿದೆ.

ಅನೇಕ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿಗಳು ಬಿಹಾರಕ್ಕೆ ನುಸುಳಿದ್ದಾರೆ. ಅವರನ್ನು ರಾಜ್ಯ ಮಟ್ಟದ ಜಾತಿ ಪಟ್ಟಿಗೆ ಸೇರಿಸುವ ಮೂಲಕ ಅವರ ಅಸ್ತಿತ್ವವನ್ನು ಕಾನೂನುಬದ್ಧಗೊಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸಂಪುಟದ ಕೆಲವು ಸಚಿವರು ಸೇರಿದಂತೆ ಬಿಜೆಪಿ ನಾಯಕರು ಈ ಹಿನ್ನೆಲೆಯಲ್ಲಿ ಆರೋಪಿಸಿದ್ದಾರೆ.
ಬಿಹಾರ ಸರ್ಕಾರ ಶೀಘ್ರದಲ್ಲೇ ರಾಜ್ಯದಲ್ಲಿ ಜಾತಿ ಆಧಾರಿತ ಜನಗಣತಿ ನಡೆಸಲಿದೆ. ಜೂನ್ 1 ರಂದು ನಡೆದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ವಪಕ್ಷ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ. ಸರ್ವಪಕ್ಷ ಸಭೆಯ ನಂತರ ಮಾತನಾಡಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ಜಾತಿ ಗಣತಿ ಮಾಡಲಾಗುವ ಈ ಪ್ರಕ್ರಿಯೆಯನ್ನು "ಜಾತಿ ಆಧಾರ ಗಣನಾ" ಎಂದು ಕರೆಯಲಾಗುವುದು. ಇದನ್ನು ಮುಂದುವರಿಸುವ ನಿರ್ಧಾರವನ್ನು ಬಿಜೆಪಿ ಸೇರಿದಂತೆ ಸಭೆಯಲ್ಲಿದ್ದ ಎಲ್ಲ ರಾಜಕೀಯ ಪಕ್ಷಗಳು ಸರ್ವಾನುಮತದಿಂದ ಕೈಗೊಂಡವು. ರಾಜ್ಯ ಸರ್ಕಾರವು ಸಂಪೂರ್ಣ ಈ ಪ್ರಕ್ರಿಯೆಯನ್ನು ನಿರ್ದಿಷ್ಟ ಸಮಯದೊಳಗೆ ಪೂರ್ಣಗೊಳಿಸುತ್ತದೆ ಎಂದು ಅವರು ಹೇಳಿದ್ದರು.

1990 ರ ದಶಕದ ಹಿಂದಿನ ರಾಜಕೀಯ ಸಹಯೋಗದ ಹೊರತಾಗಿಯೂ, ಕುಮಾರ್ ಅವರು ಅಯೋಧ್ಯೆ, 370 ನೇ ವಿಧಿ, ಏಕರೂಪ ನಾಗರಿಕ ಸಂಹಿತೆ, ತ್ರಿವಳಿ ತಲಾಖ್, NRC ಮತ್ತು ಜನಸಂಖ್ಯೆ ನಿಯಂತ್ರಣಕ್ಕೆ ಶಾಸಕಾಂಗ ಕ್ರಮಗಳಂತಹ ವಿಷಯಗಳಲ್ಲಿ ಬಿಜೆಪಿಯೊಂದಿಗೆ ಒಟ್ಟಿಗೆ ಕಾಣಿಸಿಕೊಂಡಿಲ್ಲ.
(ಒನ್ಇಂಡಿಯಾ ಸುದ್ದಿ)












Click it and Unblock the Notifications