ಪ್ರಧಾನಿ OK, ನಿತೀಶ್ Not OK: ಚಿರಾಗ್ ಪಾಸ್ವಾನ್ ಹೊಸ ವರಸೆ!
ಪಾಟ್ನಾ, ನವೆಂಬರ್.11: ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರಕ್ಕೆ ಯಾವುದೇ ಕಾರಣಕ್ಕೂ ಬೆಂಬಲ ನೀಡುವುದಿಲ್ಲ ಎಂದು ಲೋಕಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಪುನರುಚ್ಛರಿಸಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಗೆಲುವು ಸಾಧಿಸಿರಬಹುದು. ಆದರೆ ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಸುಶೀಲ್ ಮೋದಿ ಸರ್ಕಾರಕ್ಕೆ ನಮ್ಮ ಬೆಂಬಲ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ರಚನೆ ಆಗುತ್ತಿರುವ ಎನ್ ಡಿಎ ಮೈತ್ರಿಕೂಟದ ಸರ್ಕಾರಕ್ಕೆ ನಮ್ಮ ವಿರೋಧವಿದೆ. ರಾಷ್ಚ್ರೀಯ ಮಟ್ಟದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮೈತ್ರಿಕೂಟದ ಸರ್ಕಾರಕ್ಕೆ ಮೊದಲಿನಂತೆ ಬೆಂಬಲ ನೀಡುತ್ತೇವೆ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

ಬಿಹಾರ ಚುನಾವಣೆ ಹೊಸ್ತಿಲಿನಲ್ಲಿ ಎನ್ ಡಿಎ ನಂಟು ಕಡಿತ
ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಡಳಿತದ ವಿರುದ್ಧ ಎಲ್ ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ವಿರೋಧ ವ್ಯಕ್ತಪಡಿಸಿದ್ದರು. ಎನ್ ಡಿಎ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ನಿತೀಶ್ ಕುಮಾರ್ ಎಂದು ಘೋಷಣೆ ಆಗುತ್ತಿದ್ದಂತೆ ಮೈತ್ರಿಕೂಟದಿಂದಲೇ ಎಲ್ ಜೆಪಿ ಹೊರ ಬಂದಿತ್ತು. ವಿಧಾನಸಭಾ ಚುನಾವಣಾ ಪ್ರಚಾರದ ಹಂತದಲ್ಲಿ ಸಿಎಂ ನಿತೀಶ್ ಕುಮಾರ್ ವಿರುದ್ಧ ಪ್ರತಿಬಾರಿ ದಾಳಿ ನಡೆಸುತ್ತಿದ್ದ ಚಿರಾಗ್ ಪಾಸ್ವಾನ್, ಪ್ರಧಾನಮಂತ್ರಿ ಅವರನ್ನು ಹಾಡಿಹೊಗಳುತ್ತಿದ್ದರು.

ಬಿಹಾರದಲ್ಲಿ ಚಿರಾಗ್ ಪಾಸ್ವಾನ್ ಏಕಾಂಗಿ ಹೋರಾಟ
ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಿಂದ ಹೊರ ಬಂದ ಲೋಕಜನಶಕ್ತಿ ಪಕ್ಷವು ಬಿಹಾರ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸಿತು. ಒಂದು ಕಡೆ ಮಹಾಘಟಬಂಧನ್ ಮೈತ್ರಿಕೂಟ, ಇನ್ನೊಂದು ಕಡೆ ಎನ್ ಡಿಎ ಮೈತ್ರಿಕೂಟ ಒಬ್ಬರನ್ನು ಮತ್ತೊಬ್ಬರು ನೆಚ್ಚಿಕೊಂಡು ರಚನೆಯಾಗಿರುವ ಮೈತ್ರಿಪಕ್ಷಗಳ ಎದುರಿಗೆ ಎಲ್ ಜೆಪಿ ಏಕಾಂಗಿಯಾಗಿ ಚುನಾವಣಾ ಕಣಕ್ಕೆ ಇಳಿದಿತ್ತು. ಅಂಥದರಲ್ಲೂ ಶೇ.06ರಷ್ಟು ಮತಗಳನ್ನು ಪಡೆಯುವಲ್ಲಿ ಪಕ್ಷವು ಯಶಸ್ವಿಯಾಗಿದೆ.

25 ಲಕ್ಷ ಮತ ಪಡೆಯುವಲ್ಲಿ ಎಲ್ ಜೆಪಿ ಯಶಸ್ವಿ
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ ಲೋಕಜನಶಕ್ತಿ ಪಕ್ಷಕ್ಕೆ 25 ಲಕ್ಷ ಜನರು ಮತ ನೀಡಿದ್ದಾರೆ. ಬಿಹಾರ ಮೊದಲು, ಬಿಹಾರಿ ಮೊದಲು ಎಂಬ ಧ್ಯೇಯವಾಖ್ಯವನ್ನು ಅರ್ಥ ಮಾಡಿಕೊಂಡು ಪ್ರೀತಿ ತೋರಿದ ಮತದಾರರಿಗೆ ನಮ್ಮ ಪ್ರೀತಿಯ ಧನ್ಯವಾದಗಳು ಚಿರಾಗ್ ಪಾಸ್ವಾನ್ ತಿಳಿಸಿದ್ದಾರೆ. ಕಳೆದ ಬಾರಿ ನಡೆದ ಚುನಾವಣೆ 2 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದ ಲೋಕಜನಶಕ್ತಿ ಪಕ್ಷವು ಈ ಬಾರಿ ಒಂದೇ ಒಂದು ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದೆ.

2020ರ ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ
ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ನಡೆದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ರಾಜ್ಯದಲ್ಲಿ ಸ್ಪಷ್ಟ ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದ್ದು, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ ಡಿಎ) 125 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ. ಈ ಪೈಕಿ ಬಿಜೆಪಿ 74, ಜೆಡಿಯು 43, ವಿಐಪಿ 4 ಹಾಗೂ ಹಿಂದೂಸ್ಥಾನ್ ಅವಂ ಮೋರ್ಚಾ ಪಕ್ಷವು 4 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಮಹಾಘಟಬಂಧನ್ ಮೈತ್ರಿಕೂಟವು 110 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಅದರಲ್ಲಿ ರಾಷ್ಟ್ರೀಯ ಜನತಾ ದಳ 75, ಕಾಂಗ್ರೆಸ್ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಎಐಎಂಐಎಂ 5, ಲೋಕಜನಶಕ್ತಿ ಪಕ್ಷ 1 ಹಾಗೂ ಪಕ್ಷೇತರ ಅಭ್ಯರ್ಥಿಗಳು 2 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದಾರೆ.












Click it and Unblock the Notifications