• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭೀಕರ ರಸ್ತೆ ಅಪಘಾತದಲ್ಲಿ ಸುಶಾಂತ್ ಸಿಂಗ್ ಅವರ ಐವರು ಸಂಬಂಧಿಕರು ಸಾವು

|
Google Oneindia Kannada News

ಪಾಟ್ನಾ, ನವೆಂಬರ್ 16: ಬಾಲಿವುಡ್ ನಟ ಸುಶಾಂತ್ ಸಿಂಗ್ ಅಕಾಲಿಕ ಮರಣ ಕಹಿ ನೆನಪು ಮಾಸುವ ಹೊತ್ತಿಗೆ ಅವರ ಐವರು ಸಂಬಂಧಿಕರು ರಸ್ತೆ ಅಪಘಾತದಲ್ಲಿ ಇಂದು ದುರಂತ ಅಂತ್ಯ ಕಂಡಿರುವ ಸುದ್ದಿ ಬಂದಿದೆ. ಬಿಹಾರದ ಲಖಿಸರಾಯ್ ಜಿಲ್ಲೆಯಲ್ಲಿ ಮಂಗಳವಾರ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ್ದು ನಾಲ್ವರು ಗಾಯಗೊಂಡಿದ್ದಾರೆ. ಮೃತ ಆರು ಮಂದಿಯಲ್ಲಿ ಐವರು ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ಸಂಬಂಧಿಕರು ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಮಂಗಳವಾರ ಬೆಳಗ್ಗೆ ಹಲ್ಸಿ ಪೊಲೀಸ್ ಠಾಣೆ ವ್ಯಾಪ್ತಿಯ ಪಿಪ್ರಾ ಗ್ರಾಮದ ಬಳಿ ಸಿಕಂದರಾ-ಶೇಖ್‌ಪುರ ರಾಷ್ಟ್ರೀಯ ಹೆದ್ದಾರಿ-333ರಲ್ಲಿ ಈ ಅಪಘಾತ ಸಂಭವಿಸಿದೆ. ಸಂತ್ರಸ್ತರು ಪಾಟ್ನಾದಿಂದ ಜಮುಯಿಗೆ ಹಿಂತಿರುಗುತ್ತಿದ್ದರು. ಅಲ್ಲಿ ಅವರು ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಹೋಗಿದ್ದರು ಎನ್ನಲಾಗಿದೆ.

ಇದ್ದಕ್ಕಿದ್ದಂತೆ ಅವರ ವಾಹನವು ಖಾಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ತುಂಬಿದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಚಾಲಕ ಸೇರಿದಂತೆ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದರೆ, ನಾಲ್ವರು ಗಾಯಗೊಂಡವರನ್ನು ಜಮುಯಿ ಸದರ್ ಆಸ್ಪತ್ರೆಗೆ ಸಾಗಿಸಲಾಯಿತು. ಮೃತರನ್ನು ಲಾಲ್ಜಿತ್ ಸಿಂಗ್, ಅವರ ಇಬ್ಬರು ಮಕ್ಕಳಾದ ಅಮಿತ್ ಶೇಖರ್ ಅಲಿಯಾಸ್ ನೆಮಾನಿ ಸಿಂಗ್ ಮತ್ತು ರಾಮ್ ಚಂದ್ರ ಸಿಂಗ್, ಮಗಳು ಬೇಬಿ ದೇವಿ, ಸೊಸೆ ಅನಿತಾ ದೇವಿ ಮತ್ತು ಚಾಲಕ ಪ್ರೀತಮ್ ಕುಮಾರ್ ಎಂದು ಗುರುತಿಸಲಾಗಿದೆ.

ಲಾಲ್ಜಿತ್ ಸಿಂಗ್ ಅವರು ಹರಿಯಾಣದ ಹಿರಿಯ ಪೊಲೀಸ್ ಅಧಿಕಾರಿ ಓಂ ಪ್ರಕಾಶ್ ಸಿಂಗ್ ಅವರ ಸೋದರ ಮಾವ. ಒಪಿ ಸಿಂಗ್ ಸುಶಾಂತ್ ಸಿಂಗ್ ರಜಪೂತ್ ಅವರ ಸೋದರ ಮಾವ. ಒಪಿ ಸಿಂಗ್ ಅವರ ಸಹೋದರಿ ಗೀತಾ ದೇವಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಸಂತ್ರಸ್ತರು ಜಮುಯಿಗೆ ಹಿಂತಿರುಗುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಹಿಂದಿ ಚಿತ್ರರಂಗದ ಸ್ಫುರದ್ರೂಪಿ ನಟ ಸುಶಾಂತ್ ಸಿಂಗ್ ರಜಪೂತ್ ಇನ್ನಿಲ್ಲವಾಗಿ ಒಂದುವರೆ ವರ್ಷ ಕಳೆದಿದೆ. ಸುಶಾಂತ್ ದೇಹ ನೇಣುಬಿಗಿದ ಸ್ಥಿತಿಯಲ್ಲಿ ಬಾಂದ್ರಾ ಅಪಾರ್ಟ್ಮೆಂಟ್‌ನಲ್ಲಿ ಪತ್ತೆಯಾಗಿತ್ತು. ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ಪರಿಗಣಿಸಿದ್ದರು. ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು? ಎಂಬುದು ಅಂದಿಗೆ ಮುಖ್ಯ ಪ್ರಶ್ನೆಯಾಗಿತ್ತು. ಲಾಕ್ಡೌನ್‌ನಿಂದಾಗಿ ಯಾವುದೇ ಹೊಸ ಪ್ರಾಜೆಕ್ಟ್ ಸಿಗದೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿರಬಹುದು ಎಂದು ಶಂಕಿಸಲಾಗಿತ್ತು.

ಆದರೆ, ಸುಶಾಂತ್ ಸಾವು ನಿಗೂಢವಾಗಿದ್ದು, ಅನೇಕ ಕಾರಣಗಳು ದಿನ ಕಳೆದಂತೆ ಕಾಣಿಸಿಕೊಳ್ಳತೊಡಗಿತು. ಬಾಲಿವುಡ್‌ನ ಅರ್ಧದಷ್ಟು ಮಂದಿ ವಿಚಾರಣೆಗೊಳಪಟ್ಟರು. ಸುಶಾಂತ್ ಆಪ್ತರು, ಮಾಜಿ, ಹಾಲಿ ಗೆಳತಿಯ ಮೇಲೆ ಅನುಮಾನ ವ್ಯಕ್ತವಾಯಿತು. ಮಾಜಿ ಮ್ಯಾನೇಜರ್ ಆತ್ಮಹತ್ಯೆ ಜೊತೆ ಹೋಲಿಸಲಾಯಿತು. ಸ್ಥಳೀಯ ಪೊಲೀಸರಿಂದ ಆರಂಭವಾದ ತನಿಖೆ ಸಿಬಿಐ ತನಕ ಬಂದು ನಿಂತಿದೆ. ಆದರೂ, ಇಂದಿಗೂ ಸಾವಿನ ನಿಗೂಢತೆ ಬಯಲಾಗಿಲ್ಲ. ಸುಶಾಂತ್ ಆತ್ಮಹತ್ಯೆ ಕೇಸ್ ಬದಲಿಗೆ ಬಾಲಿವುಡ್ ಗಾಂಜಾ ಕೇಸ್ ಹೆಚ್ಚು ಚರ್ಚಿತವಾಗುತ್ತಿದೆ.

34 ವರ್ಷ ವಯಸ್ಸಿಗೆ ಆತ್ಮಹತ್ಯೆಗೆ ಶರಣಾಗಿರುವ ಸುಶಾಂತ್ ಅವರು ಕಿರುತೆರೆಯಲ್ಲಿ ಮಿಂಚಿ ನಂತರ ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಮಾಡಿದವರು. ಪವಿತ್ರಾ ರಿಸ್ತಾ ಸೀರಿಯಲ್ ನಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡು ಮನೆ ಮಾತಾಗಿದ್ದರು. ಮೊದಲಿಗೆ ಅಭಿಶೇಕ್ ಕಪೂರ್ ಅವರ ಕಾಯ್ ಪೋ ಚೇ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಚೇತನ್ ಭಗತ್ ಕಾದಂಬರಿ ದಿ ತ್ರೀ ಮಿಸ್ಟೇಕ್ಸ್ ಆಫ್ ಮೈ ಲೈಫ್ ಆಧಾರಿತ ಚಿತ್ರ ಇದಾಗಿದೆ. ಝಲಕ್ ದಿಕ್ಲಾ ಜಾ ಡ್ಯಾನ್ಸ್ ರಿಯಾಲಿಟಿ ಶೋದಲ್ಲೂ ಮಿಂಚಿದ್ದ ಸುಶಾಂತ್ ತಮ್ಮದೇ ಅಭಿಮಾನಿ ವರ್ಗ ಹೊಂದಿದ್ದರು.

English summary
At least six people were killed and four injured in a road accident in Bihar's Lakhisarai district on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion