Breaking: ಮುಜಾಫರ್‌ಪುರ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ: 6 ಮಂದಿ ಸಾವು, 12ಕ್ಕೂ ಹೆಚ್ಚು ಮಂದಿಗೆ ಗಾಯ
ಮುಜಾಫರ್‌ಪುರ, ಡಿಸೆಂಬರ್ 26: ಬಿಹಾರದ ಮುಜಾಫರ್‌ಪುರದ ನೂಡಲ್ ತಯಾರಿಕಾ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಕನಿಷ್ಠ 6 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಹಾಗೆಯೇ ಒಂದು ಒಂದು ಡಜನ್‌ಗೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
"ಈ ಘಟನೆಯ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದ್ದು, ಈ ನಡುವೆ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ," ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನು ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.
ಈ ಸ್ಪೋಟದಿಂದಾಗಿ ಸಾವನ್ನಪ್ಪಿದವರ ಗುರುತು ಇನ್ನೂ ಕೂಡಾ ಪತ್ತೆಯಾಗಿಲ್ಲ. ಹಾಗೆಯೇ ಅಪಘಾತದ ವೇಳೆ ಕಾರ್ಖಾನೆಯಲ್ಲಿ ಎಷ್ಟು ಮಂದಿ ಕೆಲಸ ಮಾಡುತ್ತಿದ್ದರು ಎಂಬುದು ತಿಳಿದುಬಂದಿಲ್ಲ.

ಇನ್ನು ಈ ಸ್ಪೋಟವು ಭಾರೀ ಪ್ರಬಲವಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಈ ಹಿನ್ನೆಲೆಯಿಂದಾಗಿ ಸಾವಿನ ಸಂಖ್ಯೆ ಅಧಿಕವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟವು ಎಷ್ಟು ಪ್ರಬಲವಾಗಿದೆಯೆಂದರೆ ಸ್ಫೋಟದ ಸ್ಥಳದಿಂದ 5-ಕಿಮೀ ದೂರದವರೆಗೆ ಈ ಸ್ಪೋಟದ ಸದ್ದು ಕೇಳಿಸಿದೆ ಎಂಬ ಮಾಹಿತಿ ಕೂಡಾ ಲಭ್ಯವಾಗಿದೆ.
ಪ್ರಸ್ತುತ ಬೆಂಕಿಯನ್ನು ನಂದಿಸಲು ಕನಿಷ್ಠ 5 ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿವೆ. ಸ್ಫೋಟದಲ್ಲಿ ಪಕ್ಕದ ಸಂಸ್ಥೆಗಳಿಗೂ ಹಾನಿಯಾಗಿದೆ ಎಂದು ಕೂಡಾ ಮಾಧ್ಯಮಗಳು ವರದಿ ಮಾಡಿದೆ. ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದಾಗ ದೊಡ್ಡ ಶಬ್ದ ಕೇಳಿಸಿತು ಎಂದು ಸುತ್ತಮುತ್ತಲಿನ ನಿವಾಸಿಗಳು ಹೇಳಿದ್ದಾರೆ. ಘಟನೆಗೆ ನಿಖರ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ. ರಕ್ಷಣೆ ಕಾರ್ಯಾಚರಣೆ ನಡುವೆ ಈ ಕಾರ್ಖಾನೆಯ ಗೇಟ್‌ಗಳನ್ನು ಮುಚ್ಚಲಾಗಿದೆ.
"ರಕ್ಷಣೆ ಕಾರ್ಯಾಚರಣೆ ಮುಂದುವರಿದಿದೆ. ಈಗಾಗಲೇ ಐದು ಆರು ಮಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಲವು ಸಾವು ಪ್ರಕರಣಗಳು ವರದಿ ಆಗಿದೆ," ಎಂದು ಮುಜಾಫರ್‌ಪುರ ಎಸ್‌ಎಸ್‌ಪಿ ಜಯಂತರ್ ಕಾಂತ್ ಹೇಳಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications