ಬಿಹಾರ ವಿಧಾನಸಭೆ ಸಭಾಪತಿಯಾಗಿ ವಿಜಯ್ ಕುಮಾರ್ ಸಿನ್ಹಾ ಆಯ್ಕೆ
ಪಾಟ್ನಾ, ನವೆಂಬರ್.25: ಬಿಹಾರದ ವಿಧಾನಸಭಾ ಸಭಾಪತಿ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆದಿದ್ದು, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಅಭ್ಯರ್ಥಿ ಹಾಗೂ ಬಿಜೆಪಿ ಶಾಸಕ ವಿಜಯ್ ಕುಮಾರ್ ಸಿನ್ಹಾ ಸ್ಪೀಕರ್ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಬುಧವಾರ ವಿಧಾನಸಭಾ ಕಲಾಪ ಆರಂಭವಾಗುತ್ತಿದ್ದಂತೆ ಪರಿಷತ್ ಸದಸ್ಯರು ಕೆಳಮನೆಯಲ್ಲಿ ಹಾಜರಾಗಿರುವುದಕ್ಕೆ ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ತೇಜಸ್ವಿ ಯಾದವ್ ವಿರೋಧ ವ್ಯಕ್ತಪಡಿಸಿದ್ದರು. ಸದನದ ಬಾವಿಗಿಳಿದು ಹಂಗಾಮಿ ಸ್ಪೀಕರ್ ಜಿತನ್ ರಾಮ್ ಮಾಂಝಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಮಹಾಘಟಬಂಧನ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಆರ್ ಜೆಡಿ ಶಾಸಕ ಅವಧ್ ಬಿಹಾರಿ ಚೌಧರಿ ಸೋಲು ಅನುಭವಿಸಿದ್ದಾರೆ. ವಿಜಯ್ ಕುಮಾರ್ ಸಿನ್ಹಾ ಬಿಹಾರದ ವಿಧಾನಸಭೆಗೆ ಆಯ್ಕೆಯಾದ ಮೊದಲ ಬಿಜೆಪಿ ಶಾಸಕ ಎನಿಸಿದ್ದಾರೆ.
ಬಿಹಾರ ಅಧಿವೇಶನದಲ್ಲಿ ಗದ್ದಲ ಸೃಷ್ಟಿಸಿದ ಲಾಲೂ ಆಡಿಯೋ "ರೀಲು"!
ಹಂಗಾಮಿ ಸ್ಪೀಕರ್ ವಿರುದ್ಧ ಭುಗಿಲೆದ್ದ ಆಕ್ರೋಶ
ಬಿಹಾರದ ವಿಧಾನಸಭೆ ಸ್ಪೀಕರ್ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಪರಿಷತ್ ಸದಸ್ಯ ಅಶೋಕ್ ಚೌಧರಿ ಹಾಜರಾಗಿರುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಸ್ಪೀಕರ್ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಮೇಲ್ಮನೆ ಸದಸ್ಯರು ಕೆಳಮನೆ ಅಧಿವೇಶನದಲ್ಲಿ ಹಾಜರಾಗುವುದರಿಂದ ಯಾವುದೇ ತೊಂದರೆಯಿಲ್ಲ. ಸ್ಪೀಕರ್ ಆಯ್ಕೆಯಲ್ಲಿ ಯಾವುದೇ ರೀತಿ ಗೌಪ್ಯ ಮತದಾನ ಇರುವುದಿಲ್ಲ. ಈ ಹಿಂದೆ ರಾಬ್ರಿ ದೇವಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾಗಿದ್ದ ಲಾಲೂ ಪ್ರಸಾದ್ ಯಾದವ್ ಅವರೂ ಕೂಡಾ ವಿಧಾನಸಭೆಯಲ್ಲಿ ಹಾಜರಾಗಿದ್ದರು ಎಂದು ಹಂಗಾಮಿ ಸ್ಪೀಕರ್ ಜಿತನ್ ರಾಮ್ ಮಾಂಝಿ ಹೇಳಿದರು.
ಮೊದಲ ಬಾರಿ ಬಿಜೆಪಿಗೆ ಒಲಿದ ಸ್ಪೀಕರ್ ಸ್ಥಾನ:
ಬಿಹಾರ ವಿಧಾನಸಭಾ ಅಧಿವೇಶನದಲ್ಲಿ 2005ರಿಂದ ಈಚೆಗೆ ಪ್ರತಿಬಾರಿ ಜೆಡಿಯು ಶಾಸಕರೇ ಸಭಾಪತಿ ಸ್ಥಾನಕ್ಕೆ ಆಯ್ಕೆ ಆಗುತ್ತಿದ್ದರು. 2005 ರಿಂದ 2010 ಮತ್ತು 2010 ರಿಂದ 2015ರ ಎರಡು ಅವಧಿಗೂ ಉದಯ ನಾರಾಯಣ ಚೌಧರಿ ಸಭಾಪತಿಯಾಗಿ ಆಯ್ಕೆಯಾಗಿದ್ದರು. 2015 ರಿಂದ 2020ರವರೆಗೂ ವಿಜಯ ಕುಮಾರ್ ಚೌಧರಿ ಬಿಹಾರ ವಿಧಾನಸಭೆ ಸಭಾಪತಿಯಾಗಿ ಕಾರ್ಯ ನಿರ್ವಹಿಸಿದ್ದರು. ಇದೇ ಮೊದಲ ಬಾರಿಗೆ ಬಿಜೆಪಿಯ ವಿಜಯ ಕುಮಾರ್ ಸಿನ್ಹಾ ಈ ಸ್ಥಾನಕ್ಕೆ ಆಯ್ಕೆ ಆಗಿದ್ದಾರೆ.