ಪಾಸ್ವಾನ್ ಪದಾರ್ಪಣೆಯ ಕ್ಷೇತ್ರದಲ್ಲಿಯೇ ಎಲ್‌ಜೆಪಿ ಕಳಪೆ ಸಾಧನೆ
ಪಟ್ನಾ, ನವೆಂಬರ್ 11: ಬಿಹಾರ ವಿಧಾನಸಭೆ ಚುನಾವಣೆಗೂ ಮುನ್ನ ಜೆಡಿಯು ಮುಖಂಡ ನಿತೀಶ್ ಕುಮಾರ್ ಅವರ ಜತೆಗಿನ ಮುನಿಸಿನಿಂದ ಎನ್‌ಡಿಎದಿಂದ ಹೊರಬಂದಿದ್ದ ಎಲ್‌ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್, ಸರ್ಕಾರ ರಚನೆಯಲ್ಲಿ ಕಿಂಗ್ ಮೇಕರ್ ಆಗುವ ಕನಸು ಕಂಡಿದ್ದರು. ಆದರೆ 2015ರ ಚುನಾವಣೆಯಲ್ಲಿ ಕೇವಲ 2 ಸೀಟುಗಳನ್ನು ಗೆದ್ದಿದ್ದ ಪಕ್ಷ, ಈ ಬಾರಿ ಅದಕ್ಕಿಂತಲೂ ಹೀನಾಯ ಪ್ರದರ್ಶನ ತೋರಿಸಿದೆ. ಒಂದೇ ಒಂದು ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಎಲ್‌ಜೆಪಿಯ ನಿರೀಕ್ಷೆ ತಲೆಕೆಳಗಾಗಿದೆ.
ಹಾಗಿದ್ದೂ ಈ ಚುನಾವಣೆಯಲ್ಲಿ ಎಲ್‌ಜೆಪಿ ತನ್ನ ಬಹುತೇಕ ಗುರಿಯನ್ನು ಈಡೇರಿಸಿಕೊಂಡಿದೆ ಎನ್ನಲಾಗುತ್ತಿದೆ. ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷಕ್ಕೆ ಹೊಡೆತ ನೀಡುವುದು ಚಿರಾಗ್ ಉದ್ದೇಶವಾಗಿತ್ತು. ಅದಕ್ಕಾಗಿಯೇ ಜೆಡಿಯು ಅಭ್ಯರ್ಥಿಗಳಿದ್ದ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಈ ಮೂಲಕ ಜೆಡಿಯುದ ಮತಗಳನ್ನು ಕಸಿದುಕೊಳ್ಳುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ. ಈ ಬಾರಿ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರಿಂದ ಪಕ್ಷದ ಒಟ್ಟಾರೆ ಮತಗಳಿಕೆ ಪ್ರಮಾಣ ಹೆಚ್ಚಾಗಿದೆ.
ಎಲ್‌ಜೆಪಿ ಸಂಸ್ಥಾಪಕ ರಾಮ್ ವಿಲಾಸ್ ಪಾಸ್ವಾನ್ ಅವರು ತಮ್ಮ ಚುನಾವಣಾ ಸ್ಪರ್ಧೆಯ ಪದಾರ್ಪಣೆ ಮಾಡಿದ ಅಲೌಲಿ ಕ್ಷೇತ್ರದಲ್ಲಂತೂ ಎಲ್‌ಜೆಪಿ ಪ್ರದರ್ಶನ ಹೀನಾಯವಾಗಿದೆ. ಇಲ್ಲಿ ತಕ್ಕಮಟ್ಟಿನ ಸ್ಪರ್ಧೆ ನೀಡಲು ಸಹ ಅದು ವಿಫಲವಾಗಿದೆ. ಸಂಯುಕ್ತ ಸೋಷಿಯಲಿಸ್ಟ್ ಪಕ್ಷದ ಅಭ್ಯರ್ಥಿಯಾಗಿ 1969ರಲ್ಲಿ ಅಲೌಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಮ್ ವಿಲಾಸ್ ಪಾಸ್ವಾನ್ ತಮ್ಮ ಚೊಚ್ಚಲ ಚುನಾವಣೆಯ ಗೆಲುವು ಕಂಡಿದ್ದರು.

ಆದರೆ 51 ವರ್ಷಗಳ ಬಳಿಕ ಪಾಸ್ವಾನ್ ಅವರ ಎಲ್‌ಜೆಪಿ ಎರಡನೆಯ ಸ್ಥಾನಕ್ಕೆ ಸಹ ಬರಲು ಸಾಧ್ಯವಾಗಿಲ್ಲ. ಆರ್‌ಜೆಡಿಯ ರಾಮವೃಕ್ಷ್ ಸದಾ ಅವರು ಜೆಡಿಯುದ ಸಾಧನಾ ದೇವಿ ಅವರ ಎದುರು 2,773 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಆರ್‌ಜೆಡಿ ಶೇ 32.69 ಮತ ಪಡೆದರೆ, ಜೆಡಿಯು ಶೇ 30.77ರಷ್ಟು ಮತಗಳನ್ನು ಗಳಿಸಿದೆ. ಆದರೆ ಎಲ್‌ಜೆಪಿ ಇಲ್ಲಿ ಕೇವಲ ಶೇ 18.28ರಷ್ಟು ಮತಗಳನ್ನು ಪಡೆಯುವಲ್ಲಿ ಶಕ್ತವಾಗಿದೆ.
ಅಂದಹಾಗೆ ಅಲೌಲಿಯಲ್ಲಿ ಎಲ್‌ಜೆಪಿ ಈ ರೀತಿ ಕಳಪೆ ಸಾಧನೆ ಮಾಡಿರುವುದು ಇದು ಮೊದಲ ಸಲವೇನಲ್ಲ. ತನ್ನ ಪದಾರ್ಪಣೆಯ ಚುನಾವಣೆಯಲ್ಲಿ ಇಲ್ಲಿ ಜಯಗಳಿಸಿದ ಬಳಿಕ ರಾಮ್ ವಿಲಾಸ್ ಪಾಸ್ವಾನ್ ಅವರಿಗೂ ಮತ್ತೆ ಗೆಲ್ಲಲು ಸಾಧ್ಯವಾಗಿರಲಿಲ್ಲ. 2005ರಲ್ಲಿ ಕೊನೆಯ ಬಾರಿ ಇಲ್ಲಿ ಎಲ್‌ಜೆಪಿ ಗೆಲುವು ಕಂಡಿತ್ತು. ಆಗ ಜೆಡಿಯುದಿಂದ ನಾಲ್ಕು ಬಾರಿ ಶಾಸಕರಾಗಿದ್ದ ಪಶುಪತಿ ಕುಮಾರ್ ಪರಸ್, ಎಲ್‌ಜೆಪಿಯಿಂದ ಸ್ಪರ್ಧಿಸಿದ್ದರು. 2015ರ ಚುನಾವಣೆಯಲ್ಲಿ ಎಲ್‌ಜೆಪಿ ಎರಡನೆಯ ಸ್ಥಾನ ಪಡೆದು ಶೇ 33.67 ಮತಗಳನ್ನು ಗಳಿಸಿತ್ತು.












Click it and Unblock the Notifications