ಬಿಜೆಪಿಗೆ ಕೈಕೊಟ್ಟು ಆರ್ ಜೆಡಿ ಜೊತೆಗೆ ಹೋಗುತ್ತಾರಾ ನಿತೀಶ್?
ಪಾಟ್ನಾ, ಅಕ್ಟೋಬರ್.28: ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎನ್ ಡಿಎ ಮೈತ್ರಿಕೂಟವನ್ನು ತೊರೆದು ಆರ್ ಜೆಡಿ ಜೊತೆಗೆ ಹೋಗುತ್ತಾರೆ ಎಂದು ಲೋಕಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಭವಿಷ್ಯ ನುಡಿದಿದ್ದಾರೆ.
"ಬಿಜೆಪಿ ಜೊತೆಗಿನ ಮೈತ್ರಿಕೂಟವನ್ನು ಕಡಿದುಕೊಳ್ಳಲು ನಿತೀಶ್ ಕುಮಾರ್ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸಿಎಂ ನಿತೀಶ್ ಕುಮಾರ್ ಅವರಿಗೆ ನೀಡುವ ಒಂದೊಂದು ಮತವೂ, ಬಿಹಾರದ ಆಡಳಿತವನ್ನು ಕುಗ್ಗಿಸುವುದಷ್ಟೇ ಅಲ್ಲ. ಆರ್ ಜೆಡಿ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟವನ್ನು ಶಕ್ತಿಯುತಗೊಳಿಸಿದಂತೆ" ಎಂದು ಚಿರಾಗ್ ಪಾಸ್ವಾನ್ ಟ್ವೀಟ್ ಮಾಡಿದ್ದಾರೆ.
ಬಿಹಾರ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಬಿಜೆಪಿ ಸಖ್ಯವನ್ನು ತೊರೆದು ನಿತೀಶ್ ಕುಮಾರ್ ಆರ್ ಜೆಡಿ ಜೊತೆಗೆ ತೆರಳುತ್ತಾರೆ. ಈ ಹಿಂದೆ ನಿತೀಶ್ ಕುಮಾರ್ ಆರ್ ಜೆಡಿ ಆಶೀರ್ವಾದದಿಂದಲೇ ಮುಖ್ಯಮಂತ್ರಿ ಆಗಿದ್ದರು ಎಂದು ಚಿರಾಗ್ ಪಾಸ್ವಾನ್ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

ನಿತೀಶ್ ಮುಕ್ತ ಸರ್ಕಾರ ರಚನೆಗೆ ಕರೆ:
"ಬಿಹಾರದಲ್ಲಿ ಮೊದಲ 15 ವರ್ಷಗಳ ಆಡಳಿತವು ಕುಖ್ಯಾತಿ ಪಡೆದುಕೊಂಡಿತ್ತು. ತದನಂತರದ 15 ವರ್ಷಗಳ ಆಡಳಿತದಲ್ಲಿ ಬಿಹಾರವು ತೀರಾ ಕೆಟ್ಟ ಪರಿಸ್ಥಿತಿಗೆ ದೂಡಲ್ಪಟ್ಟಿತು. ಆದರೆ ಇದೀಗ ನಿಮ್ಮೆಲ್ಲರ ಆಶೀರ್ವಾದವಿದ್ದಲ್ಲಿ ನಿತೀಶ್ ಕುಮಾರ್ ಮುಕ್ತ ಸರ್ಕಾರವನ್ನು ರಚಿಸಿ ಮತ್ತು ಬಿಹಾರವನ್ನು ಫಸ್ಟ್ ಮಾಡುತ್ತೇವೆ" ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
"ಲೋಕಜನಶಕ್ತಿ ಪಕ್ಷವು ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷಕ್ಕಿಂತ ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜೆಡಿಯುಗಿಂತ ಹೆಚ್ಚು ಅಭ್ಯರ್ಥಿಗಳು ಎಲ್ ಜೆಪಿಯಿಂದ ಆಯ್ಕೆಯಾಗಲಿದ್ದು, ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಮತ್ತು ಎಲ್ ಜೆಪಿ ಪಕ್ಷವು ಒಟ್ಟಾಗಿ ಸರ್ಕಾರ ರಚಿಸಲಿವೆ" ಎಂದು ಚಿರಾಗ್ ಪಾಸ್ವಾನ್ ಟ್ವೀಟ್ ಮಾಡಿದ್ದಾರೆ.












Click it and Unblock the Notifications