ಗೋವಾ; ಹೊಸ ವರ್ಷದ ಪಾರ್ಟಿಗೆ ಸರ್ಕಾರದ ಒಪ್ಪಿಗೆ!
ಪಣಜಿ, ಡಿಸೆಂಬರ್ 29; ಓಮಿಕ್ರಾನ್ ಹರಡುವಿಕೆ ಭೀತಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ವಿವಿಧ ರಾಜ್ಯ ಸರ್ಕಾರಗಳು ನಿಷೇಧ ಹೇರಿವೆ, ನೈಟ್ ಕರ್ಫ್ಯೂ ಜಾರಿಗೊಳಿಸಿವೆ. ಆದರೆ ಗೋವಾ ರಾಜ್ಯ ಪ್ರವಾಸಿಗರಿಗೆ ಸಿಹಿಸುದ್ದಿ ನೀಡಿದೆ.
ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, "ರಾಜ್ಯದಲ್ಲಿ ನೈಟ್ ಕರ್ಫ್ಯೂ ಸೇರಿದಂತೆ ಯಾವುದೇ ನಿಯಮಗಳನ್ನು ಜಾರಿಗೊಳಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದರು.
"ಡಿಸೆಂಬರ್ 31ರಂದು ರಾಜ್ಯದಲ್ಲಿ ಪಾರ್ಟಿ, ಕಾರ್ಯಕ್ರಮಗಳನ್ನು ಮಾಡಲು ಅವಕಾಶ ನೀಡಲಾಗಿದೆ. ಆದರೆ ಇದಕ್ಕೆ ಆಗಮಿಸುವ ಅತಿಥಿಗಳು ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ಅಥವ ಎರಡು ಡೋಸ್ ಲಸಿಕೆ ಪಡೆದ ಪ್ರಮಾಣ ಪತ್ರ ಹೊಂದಿರಬೇಕು" ಎಂದು ಪ್ರಮೋದ್ ಸಾವಂತ್ ಹೇಳಿದದರು.

"ಎರಡು ಡೋಸ್ ಲಸಿಕೆ ಪಡೆದ ದಾಖಲು, ನೆಗಟಿವ್ ರಿಪೋರ್ಟ್ ಅತಿಥಿಗಳಿಗೆ ಕಡ್ಡಾಯಗೊಳಿಸಲಾಗಿದೆ. ಇಲ್ಲವಾದಲ್ಲಿ ಯಾರನ್ನೂ ಸಹ ಕಾರ್ಯಕ್ರಮಗಳಿಗೆ ಬಿಡುವುದಿಲ್ಲ" ಎಂದು ತಿಳಿಸಿದರು.
ಮಂಗಳವಾರ ರಾಜ್ಯದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಮೂರಂಕಿಗೆ ತಲುಪಿದೆ. ಆದ್ದರಿಂದ ರಾಜ್ಯದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಅವಕಾಶ ನೀಡುವ ಕುರಿತು ಪ್ರಶ್ನೆ ಎದ್ದಿತ್ತು.
"ಸರ್ಕಾರ ಯಾವುದೇ ನಿರ್ಬಂಧ ಅಥವ ನೈಟ್ ಕರ್ಫ್ಯೂ ಜಾರಿಗೊಳಿಸುವುದಿಲ್ಲ. ಪ್ರವಾಸೋದ್ಯಮ ಕ್ಷೇತ್ರಕ್ಕೆ ನಾವು ನಷ್ಟ ಉಂಟು ಮಾಡುವುದಿಲ್ಲ. ಡಿಸೆಂಬರ್ 31ರ ಕಾರ್ಯಕ್ರಮಗಳು ಕುರಿತು ವಿವರವಾದ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತದೆ" ಎಂದು ಮುಖ್ಯಮಂತ್ರಿಗಳು ಹೇಳಿದರು.
ಜನವರಿ 3ಕ್ಕೆ ಸಭೆ; ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿ ಬಗ್ಗೆ ಸರ್ಕಾರ ನಿಗಾವಹಿಸಿದೆ. ಜನವರಿ 3ರಂದು ರಾಜ್ಯ ಕೋವಿಡ್ ಟಾಸ್ಕ್ ಫೋರ್ಸ್ ಸಭೆಯನ್ನು ಕರೆಯಲಾಗಿದೆ. ಕಠಿಣ ಕ್ರಮಗಳು ಅಗತ್ಯವಿದ್ದರೆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ವರ್ಷಾಂತ್ಯಕ್ಕೆ ಗೋವಾ ಪ್ರವಾಸಿಗರಿಂದ ತುಂಬಿ ಹೋಗಿದೆ. ಹೋಟೆಲ್‌ಗಳು ಶೇ 90ರಷ್ಟು ಭರ್ತಿಯಾಗಿವೆ. ವಿವಿಧ ಬೀಚ್‌ಗಳಲ್ಲಿ ಹೆಚ್ಚು ಜನಸಂದಣಿ ಕಂಡು ಬರುತ್ತಿದೆ. ಗುರುವಾರ ಮತ್ತು ಶುಕ್ರವಾರ ಮತ್ತಷ್ಟು ಜನರು ಗೋವಾಕ್ಕೆ ಆಗಮಿಸುವ ನಿರೀಕ್ಷೆ ಇದೆ.
ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ದೇಶದ ವಿವಿಧ ರಾಜ್ಯಗಳು ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ನಿರ್ಬಂಧ ಹೇರಿವೆ. ನೈಟ್ ಕರ್ಫ್ಯೂ ಸೇರಿದಂತೆ ಹಲವಾರು ಕಠಿಣ ನಿಯಮಗಳನ್ನು ಜಾರಿಗೊಳಿಸಿವೆ. ಇಂತಹ ಸಂದರ್ಭದಲ್ಲಿಯೇ ಗೋವಾ ರಾಜ್ಯ ಪಾರ್ಟಿ, ಕಾರ್ಯಕ್ರಮಗಳಿಗೆ ಅವಕಾಶ ನೀಡುವ ಮೂಲಕ ಪ್ರವಾಸಿಗರಿಗೆ ಸಿಹಿಸುದ್ದಿ ನೀಡಿದೆ.
ಗೋವಾ ರಾಜ್ಯದ ಆದಾಯ ಪ್ರವಾಸೋದ್ಯಮದ ಮೇಲೆಯೆ ಅವಲಂಬಿತವಾಗಿದೆ. ವರ್ಷಾಂತ್ಯದ ಸಂದರ್ಭದಲ್ಲಿ ಹೆಚ್ಚಿನ ಜನರು ರಾಜ್ಯಕ್ಕೆ ಆಗಮಿಸುತ್ತಾರೆ. ಕೋವಿಡ್ ಸಂದರ್ಭದಲ್ಲಿ ರಾಜ್ಯದ ಪ್ರವಾಸೋದ್ಯಮ ಚಟುವಟಿಕೆ ನೆಲಕಚ್ಚಿತ್ತು, ಈಗ ಪುನಃ ಚೇತರಿಸಿಕೊಳ್ಳುತ್ತಿದೆ.
ಮಂಗಳವಾರ ರಾಜ್ಯದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದೆ. ಸೋಮವಾರ 67 ಹೊಸ ಪ್ರಕರಣ ದಾಖಲಾಗಿತ್ತು. ಆದರೆ ಮಂಗಳವಾರ 112 ಪ್ರಕರಣಗಳು ದಾಖಲಾಗಿವೆ.
ರಾಜ್ಯದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 1,80,229. ಒಟ್ಟು ಮೃತಪಟ್ಟವರ ಸಂಖ್ಯೆ 3,520. ಮೊದಲ ಓಮಿಕ್ರಾನ್ ಪ್ರಕರಣ ಸಹ ಇದೇ ರಾಜ್ಯದಲ್ಲಿ ದಾಖಲಾಗಿವೆ.
ಹೊಸ ಪ್ರಕರಣಗಳು ಹೆಚ್ಚಳ; ದೇಶದ ವಿವಿಧ ರಾಜ್ಯಗಳಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇದರ ಪರಿಣಾಮ ದೇಶದಲ್ಲಿನ ಹೊಸ ಪ್ರಕರಣಗಳ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಬುಧವಾರದ ಹೆಲ್ತ್ ಬುಲೆಟಿನ್ ಪ್ರಕಾರ ದೇಶದಲ್ಲಿ 24 ಗಂಟೆಯಲ್ಲಿ 9,195 ಹೊಸ ಪ್ರಕರಣ ದಾಖಲಾಗಿದೆ.
ಭಾರತದಲ್ಲಿನ ಕೋವಿಡ್ ಗುಣಮುಖ ಪ್ರಮಾಣ ಶೇ 98.04 ಆಗಿದೆ. 2020ರ ಮಾರ್ಚ್ ಬಳಿಕ ಇದು ಅತಿ ಹೆಚ್ಚಿನ ಗುಣಮುಖ ಪ್ರಮಾಣವಾಗಿದೆ. ದೇಶದ ಒಟ್ಟು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 781ಕ್ಕೆ ಏರಿಕೆಯಾಗಿದೆ.












Click it and Unblock the Notifications