Breaking; ಶಿವಸೇನೆ ಅಭ್ಯರ್ಥಿ ವಾಪಸ್, ಉತ್ಪಲ್ ಪರಿಕ್ಕರ್‌ಗೆ ಬೆಂಬಲ
ಪಣಜಿ, ಜನವರಿ 31; ಗೋವಾ ವಿಧಾನಸಭೆ ಚುನಾವಣೆಗೆ ನಾಮಪತ್ರ ವಾಪಸ್ ಪಡೆಯಲು ಸೋಮವಾರ ಕೊನೆಯ ದಿನವಾಗಿದೆ. ಪಣಜಿ ಕ್ಷೇತ್ರದಿಂದ ಶಿವಸೇನೆ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದಿದ್ದು, ಪಕ್ಷೇತರ ಅಭ್ಯರ್ಥಿ ಉತ್ಪಲ್ ಪರಿಕ್ಕರ್‌ಗೆ ಪಕ್ಷ ಚುನಾವಣೆಯಲ್ಲಿ ಬೆಂಬಲ ಘೋಷಣೆ ಮಾಡಿದೆ.
ಶಿವಸೇನೆ ನಾಯಕ ಸಂಜಯ್ ರಾವತ್ ಸೋಮವಾರ ಟ್ವೀಟ್ ಮೂಲಕ ಈ ಕುರಿತು ಮಾಹಿತಿ ನೀಡಿದ್ದಾರೆ. "ನಾವು ನಮ್ಮ ಮಾತು ಉಳಿಸಿಕೊಂಡಿದ್ದೇವೆ. ಪಣಜಿ ಕ್ಷೇತ್ರದ ಪಕ್ಷದ ಅಭ್ಯರ್ಥಿ ಶೈಲೇಂದ್ರ ವೆಲಿಂಗ್ಕರ್ ನಾಮಪತ್ರ ವಾಪಸ್ ಪಡೆದಿದ್ದಾರೆ" ಎಂದು ಹೇಳಿದ್ದಾರೆ.
"ಕೇವಲ ಇಷ್ಟು ಮಾತ್ರವಲ್ಲ ಶಿವಸೇನೆಯ ಎಲ್ಲಾ ನಾಯಕರು, ಕಾರ್ಯಕರ್ತರು ಚುನಾವಣೆಯಲ್ಲಿ ಉತ್ಪಲ್ ಪರಿಕ್ಕರ್‌ಗೆ ಸಂಪೂರ್ಣ ಬೆಂಬಲ ನೀಡಲಿದ್ದಾರೆ" ಎಂದು ಸಂಜಯ್ ರಾವತ್ ಹೇಳಿದ್ದಾರೆ. ಫೆಬ್ರವರಿ 14ರಂದು ಗೋವಾದಲ್ಲಿ ಮತದಾನ ನಡೆಯಲಿದೆ.

ಪಣಜಿ ಕ್ಷೇತ್ರದ ಚುನಾವಣಾ ಚಿತ್ರಣ ಅಂತಿಮಗೊಂಡಿದೆ. ಬಿಜೆಪಿಯಿಂದ ಹಾಲಿ ಶಾಸಕ ಅಟನಸಿಯೋ ಮೊನ್ನೆರ್ರೇಟ್ ಅಭ್ಯರ್ಥಿ. ಉತ್ಪಲ್ ಪರಿಕ್ಕರ್ ಪಕ್ಷೇತರ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಎಲ್ವಿನ್ ಗೋಮ್ಸ್ ಅಭ್ಯರ್ಥಿಯಾಗಿದ್ದಾರೆ. ಶಿವಸೇನೆ & ಎನ್‌ಪಿಸಿ ಗೋವಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದು, ಇಬ್ಬರ ಬೆಂಬಲವೂ ಉತ್ಪಲ್ ಪರಿಕ್ಕರ್‌ಗೆ ಸಿಗುತ್ತಿದೆ.
ಜನವರಿ 23ರಂದು ಟ್ವೀಟ್ ಮಾಡಿದ್ದ ಸಂಜಯ್ ರಾವತ್ "ಉತ್ಪಲ್ ಪರಿಕ್ಕರ್ ಪಣಜಿ ಕ್ಷೇತ್ರದಿಂದ ಕಣಕ್ಕಿಳಿಯುವುದಾದರೆ ಶಿವಸೇನೆ ತನ್ನ ಅಭ್ಯರ್ಥಿಯನ್ನು ವಾಪಸ್ ಪಡೆಯಲಿದೆ" ಎಂದು ಹೇಳಿದ್ದರು.
"ಉತ್ಪಲ್ ಪರಿಕ್ಕರ್ ಸ್ಪರ್ಧೆಗೆ ಗೋವಾದ ಬಿಜೆಪಿಯೇತರ ಎಲ್ಲಾ ಪಕ್ಷಗಳು ಬೆಂಬಲ ನೀಡಬೇಕು. ಅವರ ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸಬಾರದು" ಎಂದು ರಾಜ್ಯದ ವಿರೋಧ ಪಕ್ಷಗಳಿಗೆ ಸಂಜಯ್ ರಾವತ್ ಕರೆ ಕೊಟ್ಟಿದ್ದರು.
ಗೋವಾದ ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್ ಪಣಜಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಹಾಲಿ ಶಾಸಕ ಅಟನಸಿಯೋ ಮೊನ್ನೆರ್ರೇಟ್ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಬಳಿಕ ಬಿಜೆಪಿ ತೊರೆದಿದ್ದ ಉತ್ಪಲ್ ಪರಿಕ್ಕರ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಹಲವಾರು ಸಂಘಟನೆಗಳು, ಸಂಘ ಸಂಸ್ಥೆಗಳು ಅವರಿಗೆ ಬೆಂಬಲ ನೀಡಿವೆ.
ಬಿಜೆಪಿ ಶಾಸಕ ಅಟನಸಿಯೋ ಮೊನ್ನೆರ್ರೇಟ್ ಪಣಜಿಯಲ್ಲಿ 2019ರಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಗೆದ್ದಿದ್ದರು. ಬಳಿಕ ಬಿಜೆಪಿ ಸೇರಿದ್ದರು. ಅಪ್ರಾಪ್ತೆ ಮೇಲೆ ಅತ್ಯಾಚಾರ ಸೇರಿದಂತೆ ಹಲವಾರು ಪ್ರಕರಣಗಳು ಅವರ ಮೇಲಿವೆ. ಆದ್ದರಿಂದ ಉತ್ಪಲ್ ಪರಿಕ್ಕರ್ ಬಿಜೆಪಿ ಅಭ್ಯರ್ಥಿ ವಿರೋಧಿಸುತ್ತಿದ್ದಾರೆ.












Click it and Unblock the Notifications