ಗೋವಾ: ಚುನಾವಣೆಗೂ ಮುನ್ನ ಕಾಂಗ್ರೆಸ್ ಸೇರಿದ ಮಾಜಿ ಬಿಜೆಪಿ ಶಾಸಕ

ಪಣಜಿ, ಡಿಸೆಂಬರ್ 23: ಗೋವಾದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಾವು ಏರುತ್ತಿದೆ. ಈ ಬಾರಿ ಏಳೆಂಟು ಪಕ್ಷಗಳು ಕಣದಲ್ಲಿದ್ದು, ಬಿರುಸಿನ ಚಟುವಟಿಕೆಗಳು ಕರಾವಳಿ ರಾಜ್ಯದಲ್ಲಿ ಕಂಡು ಬಂದಿದೆ. ಈ ನಡುವೆ ಪಕ್ಷದಿಂದ ಪಕ್ಷಕ್ಕೆ ಹಾರುವವರ ಸಂಖ್ಯೆಯೂ ಏರುತ್ತಿದೆ. ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ) ದ ಶಾಸಕ ಸ್ಥಾನವನ್ನು ತೊರೆದಿದ್ದ ಕಾರ್ಲೊಸ್ ಆಲ್ಮೆಡಾ ಅವರು ಬುಧವಾರದಂದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ.

ಚುನಾವಣೆಗೂ ಮುನ್ನ ಕಾಂಗ್ರೆಸ್ ಸೇರಿರುವ ವಾಸ್ಕೋದ ಮಾಜಿ ಶಾಸಕ ಅಲ್ಮೇಡಾ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಮೇಡಾ ಅವರಿಗಿಂತ ಮುಂಚೆ ಬಿಜೆಪಿ ಶಾಸಕ ಅಲಿನಾ ಸಲ್ಡಾನಾ ಅವರು ಶಾಸಕ ಸ್ಥಾನ ತೊರೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಗೋವಾ ವಿಧಾನಸಭೆ ಕಾರ್ಯದರ್ಶಿ ನಮ್ರತಾ ಉಲ್ಮನ್ ಅವರಿಗೆ ಅಲ್ಮೇಡಾ ರಾಜೀನಾಮೆ ಸಲ್ಲಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ನಿಧನ ನಂತರ ಬಿಜೆಪಿಯಲ್ಲಿ ಏಕಪಕ್ಷೀಯ ನಿರ್ಧಾರಗಳು ಹೆಚ್ಚಾಗಿವೆ, ಪಕ್ಷ ಸರಿಯಾದ ಹಾದಿಯಲ್ಲಿ ಸಾಗುತ್ತಿಲ್ಲ, ಹೀಗಾಗಿ ಪಕ್ಷ ತೊರೆಯಬೇಕಾಯಿತು ಎಂದು ಎಎನ್ಐ ಜೊತೆ ಮಾತನಾಡುತ್ತಾ ಅಲ್ಮೇಡಾ ಹೇಳಿದರು.

Goa Elections 2022: Former BJP Vasco MLA Carlos Almeida Joins Congress

ಅಲ್ಮೇಡಾ ಸ್ವಾಗತಿಸಿದ ದಿನೇಶ್ ಗುಂಡೂರಾವ್
ಗೋವಾ ಚುನಾವಣಾ ಉಸ್ತುವಾರಿ ದಿನೇಶ್ ಗುಂಡೂರಾವ್ ಅವರು ಅಲ್ಮೇಡಾರನ್ನು ಸ್ವಾಗತಿಸಿ ಮಾತನಾಡಿ, ಹಿರಿಯ ಮುಖಂಡ ಅಲ್ಮೇಡಾ ಸೇರ್ಪಡೆಯಿಂದ ಕಾಂಗ್ರೆಸ್ ಬಲ ಹೆಚ್ಚಿದೆ. ವಾಸ್ಕೋದ 7 ಕೌನ್ಸಿಲರ್ ಹಾಗೂ 150 ಕ್ಕೂ ಅಧಿಕ ಕಾರ್ಯಕರ್ತರು ಕಾಂಗ್ರೆಸ್ ಸೇರಿದ್ದಾರೆ. ಮಾರ್ಗೋವಾ ತಾಲೂಕಿನಲ್ಲಿ 4 ಸ್ಥಾನಗಳು ಕಾಂಗ್ರೆಸ್ ಗೆಲ್ಲುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇದೇ ವೇಳೆ ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಿರೀಶ್ ಚೋಡಾಂಕರ್ ಹಾಗೂ ವಿಪಕ್ಷ ನಾಯಕ ದಿಗಂಬರ್ ಕಾಮತ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

'ಗೋವಾದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಗೋವಾ ಜನತೆ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಿಲ್ಲ, ಬೆಲೆ ಏರಿಕೆ, ಹಗರಣಗಳಿಂದ ಬಿಜೆಪಿ ಆಡಳಿತ ಯಂತ್ರ ಕುಸಿದಿದೆ,' ಎಂದು ಜಿಪಿಸಿಸಿ ಅಧ್ಯಕ್ಷ ದಿನೇಶ್ ಹೇಳಿದರು.

''ಅಲ್ಮೇಡಾ ಅವರು ಬಿಜೆಪಿ ತೊರೆದ ಬಳಿಕ ಅನೇಕ ಪಕ್ಷದವರು ಅವರನ್ನು ತಮ್ಮತ್ತ ಸೆಳೆಯಲು ಯತ್ನಿಸಿದರೂ ಕಾಂಗ್ರೆಸ್ ಸೇರ್ಪಡೆಗೊಂಡು ಒಳ್ಳೆ ನಿರ್ಧಾರ ಮಾಡಿದ್ದಾರೆ,'' ಎಂದು ಹಿರಿಯ ಮುಖಂಡ ದಿಗಂಬರ್ ಕಾಮತ್ ಹೇಳಿದರು.

2022ರಲ್ಲಿ 40 ಸದಸ್ಯ ಬಲದ ಗೋವಾ ವಿಧಾನಸಭೆಗೆ ಚುನಾವಣೆ ನಡೆಯಲಿದೆ. 2017ರ ಚುನಾವಣೆಯಲ್ಲಿ 40 ಕ್ಷೇತ್ರಗಳಲ್ಲಿ ಕಾಂಗ್ರೆಸ್​ 17 ಸೀಟುಗಳನ್ನು ಗೆದ್ದುಕೊಂಡಿತ್ತು. ಆದರೆ ಬಿಜೆಪಿ ಗೋವಾದ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ(ಎಂಜಿಪಿ) ಸೇರಿ ಪ್ರಾದೇಶಿಕ ಪಕ್ಷಗಳು, ಸ್ವತಂತ್ರ್ಯ ಅಭ್ಯರ್ಥಿಗಳೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿತ್ತು. ಮನೋಹರ್ ಪರಿಕ್ಕರ್​ ಮುಖ್ಯಮಂತ್ರಿಯಾಗಿದ್ದಾಗ, ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿಯ ಸುಧಿನ್​ ಧವಲೀಕರ್​ ಅವರ ಕ್ಯಾಬಿನೆಟ್​​ನಲ್ಲಿ ಸಚಿವರಾಗಿದ್ದರು. 2019ರ ಮಾರ್ಚ್​​ನಲ್ಲಿ ಅವರು ಮೃತಪಟ್ಟ ನಂತರ ಪ್ರಮೋದ್ ಸಾವಂತ್​ ಸಿಎಂ ಆದರು. ಅದಾದ ಬಳಿಕ ಸುಧಿನ್​ರನ್ನು ಸಂಪುಟದಿಂದ ಕೈಬಿಡಲಾಗಿತ್ತು. 2017ರ ಚುನಾವಣೆಯಲ್ಲಿ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ ಕೇವಲ 3 ಕ್ಷೇತ್ರಗಳಲ್ಲಿ ಗೆದ್ದುಕೊಂಡಿತ್ತು. ಬಿಜೆಪಿ ಜತೆ ಮೈತ್ರಿ ತೊರೆದರೂ ಕೂಡ ಈ ಪಕ್ಷದ ಇನ್ನಿಬ್ಬರು ಎಂಎಲ್​ಎಗಳು ಬಿಜೆಪಿ ಸೇರಿದ್ದು, ಈಗ ಉಳಿದವರು ಸುಧಿನ್​ ಧವಲೀಕರ್ ಒಬ್ಬರೇ ಆಗಿದ್ದಾರೆ. ಗೋವಾ ಫಾರ್ವಡ್ ಪಕ್ಷ ಹಾಗೂ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ ಅತ್ಲಾ ಮೂವರು ಶಾಸಕರನ್ನು ಹೊಂದಿದೆ. ಕಾಂಗ್ರೆಸ್ 15 ಶಾಸಕರ ಬಲ ಹೊಂದಿದೆ.

ಬಿಜೆಪಿ, ಕಾಂಗ್ರೆಸ್‌, ಮಮತಾ ಬ್ಯಾನರ್ಜಿಯ ಟಿಎಂಸಿ, ಆಮ್ ಆದ್ಮಿ ಪಕ್ಷ, ಶಿವಸೇನೆ, ಸಿಪಿಐಎಂ, ಗೋವಾ ಫಾರ್ವಡ್‌ ಪಾರ್ಟಿ, ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ ಗೋವಾದ ಚುನಾವಣಾ ಕಣದಲ್ಲಿ ಸ್ಪರ್ಧಿಸುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+