Water Outage: ಕಾವೇರಿ ಪೈಪ್‌ಲೈನ್ ದುರಸ್ತಿ: ಬೆಂಗಳೂರಿನ ಈ ಪ್ರದೇಶಗಳಲ್ಲಿ ಶನಿವಾರ ನೀರು ಪೂರೈಕೆಯಲ್ಲಿ ವ್ಯತ್ಯಯ
ಬೆಂಗಳೂರು: ಕಾವೇರಿ 2ನೇ ಹಂತದ 600 ಮಿ.ಮೀ. ವ್ಯಾಸದ ಮುಖ್ಯ ಕುಡಿಯುವ ನೀರಿನ ಕೊಳವೆಯಲ್ಲಿ ಉಂಟಾಗಿರುವ ಭಾರೀ ಸೋರಿಕೆಯನ್ನು ತಡೆಗಟ್ಟಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (BWSSB) ಶುಕ್ರವಾರ ತುರ್ತು ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ದುರಸ್ತಿ ಕಾಮಗಾರಿ ಮುಗಿಯುವವರೆಗೆ (8 ಗಂಟೆಗಳ ಕಾಲ) ಮೈಸೂರು ರಸ್ತೆ ಸೇವಾ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಶುಕ್ರವಾರ ಮಾಹಿತಿ ನೀಡಿರುವ ಅವರು, ಮೇ 30ರಂದು ಶನಿವಾರ ಬೆಳಗ್ಗೆ 9ಕ್ಕೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಸೌತ್ ಎಂಡ್ ವೃತ್ತದ ಮುಖಾಂತರ ಮೈಸೂರು ರಸ್ತೆ ಸೇವಾ ಪ್ರದೇಶಗಳಿಗೆ ಪ್ರತಿನಿತ್ಯ 14 ಎಂಎಲ್‌ಡಿ ನೀರು ಸರಬರಾಜು ಮಾಡುವ ಪೈಪ್‌ಲೈನ್ ರಸ್ತೆಯ (ಹನುಮಂತನಗರ ಪೊಲೀಸ್ ಕ್ವಾರ್ಟರ್ಸ್ ಎದುರು) ಮುಖ್ಯ ಕೊಳವೆಯಲ್ಲಿ ರಂಧ್ರ ಉಂಟಾಗಿದೆ. ಹೆಚ್ಚಿನ ಒತ್ತಡದಲ್ಲಿ ನೀರು ಚಿಮ್ಮುತ್ತಿದೆ. ಇದರಿಂದ ಅಪಾರ ಪ್ರಮಾಣದ ಶುದ್ಧ ಕುಡಿಯುವ ನೀರು ಪೋಲಾಗುವುದರ ಜೊತೆಗೆ, ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳಿಗೂ ತೀವ್ರ ತೊಂದರೆಯಾಗುತ್ತಿದೆ.

ಸಾರ್ವಜನಿಕ ಹಿತದೃಷ್ಟಿ ಹಾಗೂ ಅಮೂಲ್ಯವಾದ ನೀರಿನ ಸದ್ಬಳಕೆಯ ಉದ್ದೇಶದಿಂದ ಸೌತ್ ಎಂಡ್ ರಸ್ತೆಯ ಸುರಾನ ಕಾಲೇಜು ಬಳಿ ಇರುವ 24 ಅಂಗುಲದ ಕವಾಟವನ್ನು 8 ಗಂಟೆಗಳ ಕಾಲ ಬಂದ್ ಮಾಡಿ (Local Shutdown) ಸಮರೋಪಾದಿಯಲ್ಲಿ ಸೋರಿಕೆ ತಡೆಗಟ್ಟುವ ದುರಸ್ತಿ ಕಾಮಗಾರಿ ನಡೆಸಲಾಗುವುದು. ಕಾಮಗಾರಿ ಪೂರ್ಣಗೊಳ್ಳುವವರೆಗೂ ನೀರಿನ ಸರಬರಾಜಿನಲ್ಲಿ ಅಡಚಣೆ ಉಂಟಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನೀರು ಸರಬರಾಜು ವ್ಯತ್ಯಯದ ಪ್ರಮುಖ ಪ್ರದೇಶಗಳು
ಮುಂದಿನ 8 ಗಂಟೆಗಳ ಕಾಲಾವಧಿಯಲ್ಲಿ ಮೈಸೂರು ರಸ್ತೆ ಸೇವಾಣೆಯ ವ್ಯಾಪ್ತಿಗೆ ಬರುವ ಈ ಕೆಳಕಂಡ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ, ಯಾವೆಲ್ಲ ಏರಿಯಾಗಳು ಎಂಬ ಪಟ್ಟಿ ಇಲ್ಲಿದೆ.
* ಕಸ್ತೂರಬಾ ನಗರ
* ಬಾಪೂಜಿನಗರ
* ಶಾಮಣ್ಣ ಗಾರ್ಡನ್
* ಮಂಜುನಾಥನಗರ
* ಹೊಸಗುಡ್ಡದಹಳ್ಳಿ
* ಹಳೇಗುಡ್ಡದಹಳ್ಳಿ
* ಅರಾಫತ್ ನಗರ
ಶೀಘ್ರವೇ ನೀರು ಸರಬರಾಜು ಎಂದಿನಂತೆ ಆರಂಭ
ಜಲಮಂಡಳಿಯ ಈ ತುರ್ತು ಕಾಮಗಾರಿಯಿಂದಾಗಿ ಸಾರ್ವಜನಿಕರಿಗೆ ಆಗುವ ಅನಾನುಕೂಲತೆ ಉಂಟಾಗಲಿದ್ದು, ಅದಕ್ಕೆ ನಮ್ಮ ವಿಷಾದವಿದೆ. ಕೆಲಸ ಪೂರ್ಣಗೊಳ್ಳುತ್ತಿದ್ದಂತೆ ತಕ್ಷಣವೇ ಈ ಎಲ್ಲಾ ಪ್ರದೇಶಗಳಿಗೆ ಎಂದಿನಂತೆ ಸುಗಮವಾಗಿ ನೀರು ಸರಬರಾಜು ಮಾಡಲಾಗುವುದು. ಸಾರ್ವಜನಿಕರು ಹಾಗೂ ಗ್ರಾಹಕರು ಸಹಕರಿಸುವಂತೆ ಅವರು ಕೋರಿದ್ದಾರೆ.













Click it and Unblock the Notifications