ಲೈಂಗಿಕ ದೌರ್ಜನ್ಯ ಆರೋಪ: ಗೋವಾ ಸಚಿವ ಮಿಲಿಂದ್ ನಾಯ್ಕ್ ರಾಜೀನಾಮೆ
ಪಣಜಿ, ಡಿಸೆಂಬರ್ 16: ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಗೋವಾ ಸಚಿವ ಮಿಲಿಂದ್ ನಾಯ್ಕ್ ರಾಜೀನಾಮೆ ನೀಡಿದ್ದಾರೆ.
ಗೋವಾ ನಗರಾಭಿವೃದ್ಧಿ ಸಚಿವ ಮತ್ತು ಬಿಜೆಪಿ ಶಾಸಕ ಮಿಲಿಂದ್ ನಾಯ್ಕ್ ವಿರುದ್ಧ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಕೆಲ ದಿನಗಳ ಹಿಂದೆ ಸಚಿವ ಮಿಲಿಂದ್ ನಾಯ್ಕ್ ಮತ್ತು ಸಂತ್ರಸ್ತ ಮಹಿಳೆಯ ನಡುವೆ ನಡೆದ ಆಡಿಯೋ ಸಂಭಾಷಣೆಯೊಂದು ಬಹಿರಂಗವಾಗಿ ಗೋವಾ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾರಣಕ್ಕಾಗಿ ಸಚಿವರು ರಾಜೀನಾಮೆ ಸಲ್ಲಿಸಬೇಕು ಕಾಂಗ್ರೆಸ್ ಪಟ್ಟು ಹಿಡಿದಿತ್ತು.

ಈ ಬಗ್ಗೆ ತನಿಖೆ ನಡೆಸಬೇಕು ಮತ್ತು ಸಚಿವರು ರಾಜೀನಾಮೆ ಸಲ್ಲಿಸಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿ 15 ದಿನಗಳ ಗಡುವು ನೀಡಿದ್ದರು.
ಹೀಗಾಗಿ ಸಚಿವ ಮಿಲಿಂದ್ ನಾಯ್ಕ್ 'ನ್ಯಾಯ ಮತ್ತು ಮುಕ್ತ ತನಿಖೆಗಾಗಿ' ಬುಧವಾರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸಿಎಂ ಕಚೇರಿಗೆ ಪತ್ರವನ್ನು ರವಾನಿಸಿದ್ದಾರೆ. ಸಿಎಂ ಇದನ್ನು ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸಿದ್ದಾರೆ ಎಂದು ಗೋವಾ ಮುಖ್ಯಮಂತ್ರಿಗಳ ಕಚೇರಿ ಟ್ವೀಟ್ ಮಾಡಿದೆ.
ಈ ನಡುವೆ ಪ್ರಕರಣದ ಮುಕ್ತ ತನಿಖೆಯನ್ನು ನಡೆಸುವ ಸಲುವಾಗಿ ಮಿಲಿಂದ್ ನಾಯ್ಕ್ ಅವರು ರಾಜೀನಾಮೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ದೃಢಪಡಿಸಿದೆ. ಮುಕ್ತ ಮತ್ತು ನ್ಯಾಯಯುತ ತನಿಖೆಯನ್ನು ನಡೆಸುವ ಸಲುವಾಗಿ ಮಿಲಿಂದ್ ನಾಯ್ಕ್ ಗೋವಾ ಸರ್ಕಾರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ, ಅದನ್ನು ಅಂಗೀಕರಿಸಲಾಗಿದೆ ಮತ್ತು ರಾಜ್ಯಪಾಲರಿಗೆ ಕಳುಹಿಸಲಾಗಿದೆ ಎಂದು ಸಿಎಂಒ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ನಾಯಕ್ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಮತ್ತು ಅದನ್ನು ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ ಅವರಿಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಸಂತ್ರಸ್ತೆಯನ್ನು ಲೈಂಗಿಕವಾಗಿ ಶೋಷಿಸುವಲ್ಲಿ ಮಿಲಿಂದ್ ನಾಯ್ಕ್ ನೇರ ಭಾಗಿಯಾಗಿದ್ದಾರೆ ಎಂಬುದಕ್ಕೆ ಪುರಾವೆಗಳಿವೆ. (ಲೈಂಗಿಕ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಲಾಗಿಲ್ಲ). ಬಿಜೆಪಿ ಸರ್ಕಾರ ಈ ವಿಕೃತ ಮನಸ್ಥಿತಿಯ ಸಚಿವನನ್ನು ಹೊರ ಹಾಕಬೇಕು(@BJP4Goa Govt and with its ministers/MLAs must be kicked out) ಎಂದು ಗೋವಾ ಕಾಂಗ್ರೆಸ್ ಸುದ್ದಿಗೋಷ್ಠಿಯ ವಿಡಿಯೋ ಜೊತೆಗೆ ಟ್ವೀಟ್ ಮಾಡಿದೆ.
ಒಂದು ದಿನದ ಹಿಂದೆ ಗೋವಾ ಕಾಂಗ್ರೆಸ್‌ನ ಮುಖ್ಯಸ್ಥ ಗಿರೀಶ್ ಚೋಡಂಕರ್ ಅವರು ನಾಯ್ಕ್ ಅವರು ಕ್ಯಾಬಿನೆಟ್ ಸದಸ್ಯರಾಗಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಮಹಿಳೆಯ ಲೈಂಗಿಕ ಶೋಷಣೆ ನಡೆಸಿದ್ದಾರೆ ಎಂದು ಆರೋಪಿಸಿದರು.
ಹೀಗಾಗಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಚಿವರನ್ನು ವಜಾಗೊಳಿಸಬೇಕು ಮತ್ತು ಅವರ ಮೇಲಿನ ಆರೋಪದ ಬಗ್ಗೆ ಪೊಲೀಸರು ತನಿಖೆ ಪ್ರಾರಂಭಿಸಬೇಕು ಎಂದು ಅವರು ಒತ್ತಾಯಿಸಿದ್ದರು.
ಹದಿನೈದು ದಿನಗಳ ಹಿಂದೆಯೇ, ಗಿರೀಶ್ ಚೋಡಂಕರ್ ಅವರು ಈ ವಿಷಯವನ್ನು ಮೊದಲ ಬಾರಿಗೆ ಪ್ರಸ್ತಾಪಿಸಿದ್ದರು, ಆದರೆ ಆ ಸಮಯದಲ್ಲಿ ಸಚಿವರ ಹೆಸರನ್ನು ಅವರು ಹೇಳಿರಲಿಲ್ಲ.












Click it and Unblock the Notifications