Breaking: ಇದೇನು ಗಿಮಿಕ್, ಮೋದಿ ಜೀ?; ಸಿಸೋಡಿಯಾ ವ್ಯಂಗ್ಯ
ನವದೆಹಲಿ, ಆಗಸ್ಟ್ 21: ವಿದೇಶ ಪ್ರವಾಸಕ್ಕೆ ನಿರ್ಬಂಧ ಹೇರಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಗೇಲಿ ಮಾಡಿರುವ ಮನೀಶ್ ಸಿಸೋಡಿಯಾ, "ನಿಮ್ಮ ಎಲ್ಲಾ ದಾಳಿಗಳು ವಿಫಲವಾಗಿವೆ. ದಾಳಿಯಲ್ಲಿ ನಿಮಗೆ ಏನೂ ಕಂಡುಬಂದಿಲ್ಲ. ಒಂದು ಪೈಸೆಯು ನಿಮಗೆ ಸಿಗಲಿಲ್ಲ. ಈಗ ನೀವು ಮನೀಶ್ ಸಿಸೋಡಿಯಾ ಪತ್ತೆಯಾಗಿಲ್ಲ ಎಂದು ಲುಕ್‌ಔಟ್ ಸುತ್ತೋಲೆ ಹೊರಡಿಸಿದ್ದೀರಿ" ಎಂದಿದ್ದಾರೆ.
ಮುಂದುವರಿದು, "ಇದೇನು ಗಿಮಿಕ್, ಮೋದಿ ಜೀ? ನಾನು ದೆಹಲಿಯಲ್ಲಿ ಮುಕ್ತವಾಗಿ ತಿರುಗುತ್ತಿದ್ದೇನೆ, ಎಲ್ಲಿಗೆ ಬರಬೇಕು ಹೇಳಿ? ನಾನು ಸಿಗುತ್ತಿಲ್ಲವೆ..?" ಎಂದು ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿದ್ದಾರೆ.

ದೆಹಲಿ ಮದ್ಯ ನೀತಿಯ ಕುರಿತು ಸಿಬಿಐ ತನಿಖೆಯನ್ನು ತೀವ್ರಗೊಳಿಸಿದ್ದು, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಪ್ರಕರಣದ ಇತರ 12 ಜನರು ವಿದೇಶ ಪ್ರವಾಸ ಕೈಗೊಳ್ಳದಂತೆ ನಿರ್ಬಂಧ ಹೇರಿ ಕೇಂದ್ರ ಸಂಸ್ಥೆ ಸುತ್ತೋಲೆ ಹೊರಡಿಸಿದೆ.
ಶುಕ್ರವಾರ ಸಿಸೋಡಿಯಾ ಅವರ ಮನೆಯಲ್ಲಿ 14 ಗಂಟೆಗಳ ಕಾಲ ಶೋಧ ನಡೆಸಲಾಯಿತು. ಈ ಪ್ರಕರಣದಲ್ಲಿ ದೆಹಲಿ ಉಪಮುಖ್ಯಮಂತ್ರಿ ಸೇರಿದಂತೆ 15 ಜನರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದ್ದು, ಮನೀಶ್ ಸಿಸೋಡಿಯಾ ಮೊದಲ ಆರೋಪಿಯಾಗಿದ್ದಾರೆ.
ಇನ್ನು, ಮನೀಶ್ ಸಿಸೋಡಿಯಾ, ನರೇಂದ್ರ ಮೋದಿಯವರ ಹಳೆಯ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಅದರಲ್ಲಿ ಪ್ರಧಾನಿ (ಗುಜರಾತ್ ಮುಖ್ಯಮಂತ್ರಿಯಾಗಿ) ಆಗಿನ ಕೇಂದ್ರ ಸರ್ಕಾರ ಮತ್ತು ಕೇಂದ್ರದ ತನಿಖಾ ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ರಾಜಕೀಯ ಸೇಡಿಗಾಗಿ ಸಿಬಿಐ ಗುಜರಾತ್ ಅಧಿಕಾರಿಗಳಿಗೆ ತೊಂದರೆ ನೀಡುತ್ತಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.

ಸಿಬಿಐ ತನಿಖೆಯ ನಡುವೆ, ಸಿಸೋಡಿಯಾ ಮತ್ತು ಇತರ ಎಎಪಿ ನಾಯಕರು ಕೇಂದ್ರ ತನಿಖಾ ಸಂಸ್ಥೆ ಸಿಬಿಐ ಕ್ರಮವು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಗುರಿಯಾಗಿಸುವ ಕೇಂದ್ರ ಸರಕಾರದ ಯೋಜನೆಯನ್ನು ಬಹಿರಂಗಪಡಿಸುತ್ತದೆ ಎಂದು ಹೇಳುತ್ತಿದ್ದಾರೆ. ದೆಹಲಿ ಮದ್ಯ ನೀತಿಯ ಬಗ್ಗೆ ಬಿಜೆಪಿ ಮತ್ತು ಎಎಪಿ ನಡುವೆ ರಾಜಕೀಯ ಕೆಸರೆರಚಾಟ ನಡೆಯುತ್ತಿದೆ.
ಮನೀಶ್ ಸಿಸೋಡಿಯಾ ಪ್ರಕರಣದ ಸಂಬಂಧ ಹೇಳಿಕೆ ನೀಡಿದ್ದು, "ದೆಹಲಿ ಅಬಕಾರಿ ನೀತಿ ಸಂಪೂರ್ಣ ಪಾರದರ್ಶಕವಾಗಿದೆ. ಯಾವುದೇ ಹಗರಣ ನಡೆದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ದಾಳಿ ನಡೆದ ದಿನವೇ ಸಿಬಿಐ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿಯೂ ತಿಳಿಸಿದ್ದರು.












Click it and Unblock the Notifications