ಸ್ನಾನಗೃಹದ ಬಾಗಿಲನ್ನು ತೆರೆದೇ ಇಡುತ್ತೀರಾ? ಹಣಕಾಸಿನ ಸಮಸ್ಯೆಗೆ ಇದೇ ಮುಖ್ಯ ಕಾರಣ!ಹೇಗೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ
ಮನೆ ನಿರ್ಮಾಣದ ವೇಳೆ ವಾಸ್ತುನಿಯಮಗಳನ್ನು ತಪ್ಪದೇ ಪಾಲಿಸಬೇಕು. ವಾಸ್ತು ಪಾಲಿಸದೆ ನಮಗಿಷ್ಟವಾದ ರೀತಿಯಲ್ಲಿ ಎಷ್ಟೇ ಹಣ ಖರ್ಚು ಮಾಡಿ ಮನೆ ನಿರ್ಮಾಣ ಮಾಡಿದರೂ ಅಲ್ಲಿ ಸಮಸ್ಯೆಗಳು ಖಂಡಿತವಾಗಿಯೂ ಕಾಣಿಸಿಕೊಳ್ಳುತ್ತವೆ. ಮನೆ ನಿರ್ಮಾಣ ಮಾಡುವಾಗ ಮನೆಯ ಕೋಣೆಗಳು ಮಾತ್ರವಲ್ಲ ಬಚ್ಚಲು ಮನೆ, ಶೌಚಾಲಯಗಳನ್ನು ಕೂಡಾ ವಾಸ್ತು ನಿಯಮದ ಪ್ರಕಾರವೇ ನಿರ್ಮಿಸಬೇಕು. ಮನೆಯಲ್ಲಿ ಬೇರೆಲ್ಲಾ ವಿಷಯಗಳಲ್ಲಿ ವಾಸ್ತು ನಿಯಮಗಳನ್ನು ಪಾಲಿಸಿ ಬಚ್ಚಲು ಮನೆ ಬಗ್ಗೆ ಅಸಡ್ಡೆ ತೋರಿದರೆ ಸಮಸ್ಯೆ ತಪ್ಪಿದ್ದಲ್ಲ.
ವಾಸ್ತು ಶಾಸ್ತ್ರದ ಪ್ರಕಾರ, ಸ್ನಾನಗೃಹವು ಮನೆಯಲ್ಲಿ ಅತ್ಯಂತ ಅಶುದ್ಧವಾದ ಸ್ಥಳ. ಇದು ನಕಾರಾತ್ಮಕ ಶಕ್ತಿಯಿಂದ ತುಂಬಿರುವ ಸ್ಥಳವಾಗಿದೆ. ಆದ್ದರಿಂದ, ಸ್ನಾನಗೃಹದ ವಾಸ್ತುವಿನ ಬಗ್ಗೆ ವಿಶೇಷ ಗಮನ ಹರಿಸುವುದು ಎಲ್ಲದ್ದಕ್ಕಿಂತ ಮುಖ್ಯವಾಗಿರುತ್ತದೆ. ಕೆಲವರಿಗೆ ಸ್ನಾನ ಗೃಹ ಅಥವಾ ಬಚ್ಚಲು ಮನೆಯ ಬಾಗಿಲನ್ನು ಹಾಗೆಯೇ ತೆರೆದಿಡುವ ಅಭ್ಯಾಸವಿರುತ್ತದೆ. ಅಲ್ಲದೆ ಬಚ್ಚಲು ಮನೆಯನ್ನು ನಿತ್ಯ ಸ್ವಚ್ಛಗೊಳಿಸುವಲ್ಲಿಯೂ ಅಸಡ್ಡೆ ತೋರುವವರು ನಮ್ಮ ನಡುವೆ ಅನೇಕ ಮಂದಿ ಇದ್ದಾರೆ. ಇದು ಮನೆಯಲ್ಲಿ ಆರ್ಥಿಕ ಸಂಕಷ್ಟ, ಅನಾರೋಗ್ಯ ಸಮಸ್ಯೆ ಎದುರಾಗುವುದಕ್ಕೆ ಕಾರಣವಾಗುತ್ತದೆ. ಇದಲ್ಲದೆ, ಯಾವಾಗ ನೋಡಿದರೂ ಸ್ನಾನಗೃಹದ ಬಾಗಿಲನ್ನು ತೆರೆದೇ ಇಡುವುದು ನಿಮ್ಮ ಮನೆಯ ತಿಜೋರಿಯ ಸಮೃದ್ಧಿಗೆ ಅಡ್ಡಿಯಾಗಬಹುದು.

ಸ್ನಾನ ಗೃಹದ ಬಾಗಿಲನ್ನು ತೆರೆದಿಡುವುರಿಂದ ಆಗುವ ಸಮಸ್ಯೆಗಳು:
ಆರ್ಥಿಕ ಸ್ಥಿರತೆ:
ಸ್ನಾನಗೃಹದ ಬಾಗಿಲು ತೆರೆದೇ ಇಡುವ ಮನೆಯಲ್ಲಿ ಆರ್ಥಿಕ ಸ್ಥಿರತೆ ಇರುವುದೇ ಇಲ್ಲ. ಎಷ್ಟೇ ದುಡಿದರೂ ಹಣವು ನೀರಿನಂತೆ ಹರಿದು ಹೋಗುತ್ತದೆ. ಮನೆಯಲ್ಲಿ ನೆಲೆಸಿರುವವರ ಮಾನಸಿಕ ಶಾಂತಿ ಭಂಗವಾಗುತ್ತದೆ. ಸದಾ ಒಂದಿಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆ ಕಾಡುತ್ತಲೇ ಇರುತ್ತದೆ.
ವಾಸ್ತು ದೋಷಗಳು ಕಾಣಿಸಿಕೊಳ್ಳುವುದು:
ವಾಸ್ತು ಶಾಸ್ತ್ರದ ಪ್ರಕಾರ, ಸ್ನಾನಗೃಹದ ಬಾಗಿಲು ತೆರೆದಿಡುವುದರಿಂದ ಮನೆಯ ತುಂಬಾ ನಕಾರಾತ್ಮಕ ಶಕ್ತಿ ಹರಡಬಹುದು. ಅಂಥಹ ಮನೆಯಲ್ಲಿ ಪೂಜೆ, ಪುನಸ್ಕಾರಗಳು ಕೂಡಾ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಮನೆಯಲ್ಲಿ ವಾಸ್ತು ದೋಷಗಳು ಸಕ್ರಿಯಗೊಳ್ಳುತ್ತವೆ.
ವಾಸ್ತು ಶಾಸ್ತ್ರದ ಪ್ರಕಾರ, ಸ್ನಾನಗೃಹದಲ್ಲಿ ಯಾವಾಗಲೂ ತೇವಾಂಶ, ವಾಸನೆ ಮತ್ತು ಕೊಳಕು ಇರುತ್ತದೆ. ಆದ್ದರಿಂದ, ಅದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಮತ್ತು ಸಾಧ್ಯವಾದಷ್ಟು ಕಾಲ ಒಣಗಿರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಕೊಳಕು ಸ್ನಾನಗೃಹವು ಮನೆಯಲ್ಲಿ ನಕಾರಾತ್ಮಕ ಮತ್ತು ಅಶುದ್ಧ ಶಕ್ತಿಗಳನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಪ್ರಮುಖ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವುದು ಸಾಧ್ಯವಾಗುವುದಿಲ್ಲ. ಇದು ಅನಗತ್ಯ ಹಣಕಾಸಿನ ವೆಚ್ಚಗಳಿಗೆ ಕಾರಣವಾಗಬಹುದು.
ಸ್ನಾನಗೃಹಕ್ಕೆ ಸಂಬಂಧಿಸಿದ ಕೆಲವು ವಿಶೇಷ ವಾಸ್ತು ಸಲಹೆಗಳು:
ಸ್ನಾನಗೃಹದ ದಕ್ಷಿಣ ಗೋಡೆಯ ಮೇಲೆ ಪಿರಮಿಡ್ ಇರಿಸಿ. ವಾಸ್ತು ದೋಷಗಳು ನಿವಾರಣೆಯಾಗಿ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ.
ನಿಮ್ಮ ಸ್ನಾನಗೃಹದಲ್ಲಿ ವಾಸ್ತು ದೋಷಗಳಿದ್ದರೆ, ಈ ಸರಳ ಪರಿಹಾರವನ್ನು ಪ್ರಯತ್ನಿಸಿ:
ಸ್ನಾನಗೃಹದಲ್ಲಿ ಉಪ್ಪು ತುಂಬಿದ ಗಾಜಿನ ಬಟ್ಟಲನ್ನು ಇರಿಸಿ. ಎಲ್ಲಾ ದುಷ್ಪರಿಣಾಮಗಳು ದೂರವಾಗುತ್ತವೆ.
ನೀವು ಸ್ನಾನಗೃಹದಲ್ಲಿ ನೀಲಿ ಬಕೆಟ್ ಇಟ್ಟರೆ, ಎಲ್ಲಾ ರೀತಿಯ ನಕಾರಾತ್ಮಕತೆಗಳು ದೂರವಾಗುತ್ತವೆ ಮತ್ತು ವಾಸ್ತು ದೋಷಗಳು ಸಹ ನಾಶವಾಗುತ್ತವೆ.
ವಾಸ್ತು ಶಾಸ್ತ್ರದ ಪ್ರಕಾರ, ಸ್ನಾನಗೃಹಕ್ಕೆ ತಿಳಿ ಬಣ್ಣದ ಟೈಲ್ಸ್‌ಗಳನ್ನು ಅಳವಡಿಸಿದರೆ, ಮನೆಯ ಸಮೃದ್ಧಿ ಹಾಗೇ ಇರುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications