Teachers Recruitment: 38,000ಕ್ಕೂ ಹೆಚ್ಚು ಶಿಕ್ಷಕರ ಹುದ್ದೆ ಖಾಲಿ, ಶಾಲೆ ಮುಚ್ಚುವ ಹುನ್ನಾರವೇ; ಆರ್.ಅಶೋಕ್
ಬೆಂಗಳೂರು; ಕರ್ನಾಟಕ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸರ್ಕಾರಿ ಶಾಲೆಗಳಿಗೆ 15,000 ಶಿಕ್ಷಕರ ನೇಮಕಾತಿ ಮಾಡುತ್ತೇವೆ ಎಂದು ಘೋಷಿಸಿತ್ತು. ಇದೀಗ ಮೌನ ವಹಿಸಿರುವುದೇಕೆ? ಪ್ರಸ್ತುತದಲ್ಲಿ 38,163 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದರೆ ಸರ್ಕಾರಿ ಶಾಲೆಗಳಿಗೆ ಬೀಗ ಹಾಕುವ ಸಂಚು ನಡೆಯುತ್ತಿದೆಯೇ? ಎಂದು ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿನ ಖಾಲಿ ಹುದ್ದೆಗಳು ಮತ್ತು ನೇಮಕಾತಿಗೆ ಸಂಬಂಧಿಸಿದಂತೆ ಅವರು ಬುಧವಾರ ಎಕ್ಸ್ ಪೋಸ್ಟ್ ಮಾಡಿ ಕಿಡಿ ಕಾರಿದ್ದಾರೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 38,163 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದರೆ, ಇದು ಸಾಮಾನ್ಯ ಆಡಳಿತ ವೈಫಲ್ಯವಲ್ಲ. ಇದು ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ನಿಧಾನವಾಗಿ ಕುಸಿಯಲು ಬಿಡುತ್ತಿರುವ ಕ್ರೂರ ನಿರ್ಲಕ್ಷ್ಯ ಎಂದು ಟೀಕಾಪ್ರಹಾರ ನಡೆಸಿದರು.

'ಗ್ಯಾರಂಟಿ' ಯೋಜನೆಗಳು ಮಕ್ಕಳಿಗೆ ಪಾಠ ಹೇಳುತ್ತವಾ?
ಶೇ. 22 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅಂದರೆ ಪ್ರತಿ ಐದು ಹುದ್ದೆಗಳಲ್ಲಿ ಒಂದು ಹುದ್ದೆ ಖಾಲಿ ಇದ್ದರೆ ಶಾಲೆಗಳು ಹೇಗೆ ನಡೆಯಬೇಕು? ನಿಮ್ಮ 'ಗ್ಯಾರಂಟಿ' ಯೋಜನೆಗಳು ಮಕ್ಕಳಿಗೆ ಪಾಠ ಹೇಳುತ್ತವೆಯೇ?. ತರಗತಿಯಲ್ಲಿ ಶಿಕ್ಷಕರೇ ಇಲ್ಲದಿದ್ದರೆ ಬಡ ಮಕ್ಕಳಿಗೆ ಅಕ್ಷರ ಯಾರು ಕಲಿಸಬೇಕು? ಅವರ ಕನಸುಗಳನ್ನು ಯಾರು ಕಟ್ಟಿಕೊಡಬೇಕು?
15,000 ಶಿಕ್ಷಕರ ನೇಮಕಾತಿ ಮಾಡುತ್ತೇವೆ ಎಂದು ಘೋಷಿಸಿದ್ದ ನಿಮ್ಮ ಸರ್ಕಾರ ಈಗ ಮೌನ ವಹಿಸಿರುವುದೇಕೆ? ಜಾಹೀರಾತುಗಳಲ್ಲಿ ಶಿಕ್ಷಣ ಪ್ರೀತಿ ತೋರಿಸಿ, ವಾಸ್ತವದಲ್ಲಿ ಶಾಲೆಗಳನ್ನು ಶಿಕ್ಷಕರಿಲ್ಲದೆ ಬಿಟ್ಟುಬಿಡುವುದು ಯಾವ ರೀತಿಯ ಸಾಮಾಜಿಕ ನ್ಯಾಯ? ಎಂದು ಗುಡುಗಿದರು.
ಗಂಜಿ ಕೇಂದ್ರಕ್ಕೆ ನೂರಾರು ಕೊಟಿ ಇದೆ, ನೇಮಕಾತಿಗಿಲ್ಲ!
ಹಣದ ಕೊರತೆಯೇ? ಅಥವಾ ಕಾಳಜಿಯ ಕೊರತೆಯೇ? ಗ್ಯಾರೆಂಟಿ ಅನುಷ್ಠಾನ ಸಮಿತಿಗಳ ಹೆಸರಿನಲ್ಲಿ ಅತೃಪ್ತ ಕಾಂಗ್ರೆಸ್ಸಿಗರಿಗೆ ಗಂಜಿ ಕೇಂದ್ರ ನಡೆಸುವುದಕ್ಕೆ ನೂರಾರು ಕೋಟಿ ಇದೆ, ಐಷಾರಾಮಿ ಸಮಾವೇಶಗಳಿಗೆ ಹತ್ತಾರು ಕೋಟಿ ಹಣ ಇದೆ, ಅಲ್ಪಸಂಖ್ಯಾತರ ಓಲೈಕೆಗೆ ಹಣ ಇದೆ. ಆದರೆ ಮಕ್ಕಳಿಗೆ ಅಕ್ಷರ ಕಲಿಸುವ ಶಿಕ್ಷಕರ ನೇಮಕಾತಿಗೆ ಮಾತ್ರ ಖಜಾನೆ ಖಾಲಿಯೇ?ಇದು ಆರ್ಥಿಕ ಸಮಸ್ಯೆಯಲ್ಲ, ಇದು ಇಚ್ಛಾಶಕ್ತಿಯ ಕೊರತೆ.
ಸರ್ಕಾರಿ ಶಾಲೆಗಳಿಗೆ ಬೀಗ ಹಾಕುವ ಹುನ್ನಾರ ನಿಲ್ಲಿಸಿ
'ಶಿಕ್ಷಕರಿಲ್ಲದ ಶಾಲೆ ಎಂದರೆ ಅದು ಕೇವಲ ಖಾಲಿ ಕಟ್ಟಡ. ಅಲ್ಲಿ ಶಿಕ್ಷಣ ಸಾಯುತ್ತದೆ, ಅಲ್ಲಿ ಬಡ ಮಕ್ಕಳ ಭವಿಷ್ಯ ಕತ್ತಲೆಯಾಗುತ್ತದೆ, ಅಲ್ಲಿ ಸಮಾಜದ ಸಮಾನತೆ ಕುಸಿಯುತ್ತದೆ' ಸರ್ಕಾರದ ನೇಮಕಾತಿ ನಿರ್ಲಕ್ಷ್ಯದ ವಿರುದ್ಧ ಲೇವಡಿ ಮಾಡಿದರು. ಇಂದು ಸರ್ಕಾರಿ ಶಾಲೆಗಳನ್ನು ದುರ್ಬಲಗೊಳಿಸಿ, ನಾಳೆ 'ವಿದ್ಯಾರ್ಥಿಗಳೇ ಇಲ್ಲ' ಎಂಬ ನೆಪದಲ್ಲಿ ಅವುಗಳಿಗೆ ಬೀಗ ಹಾಕುವ ಹುನ್ನಾರ ನಡೆಯುತ್ತಿದೆಯೇ ಎಂಬ ಅನುಮಾನ ಜನರಲ್ಲಿ ಮೂಡಿದೆ ಎಂದು ಆರೋಪಿಸಿದರು.
ರಾಜ್ಯದ ಅಕ್ಷರ ದಾಸೋಹವನ್ನು ಹಾಳು ಮಾಡುತ್ತಿರುವ ಈ ಕಾಂಗ್ರೆಸ್ ಸರ್ಕಾರಕ್ಕೆ ಕರ್ನಾಟಕದ ಜನ ತಕ್ಕ ಉತ್ತರ ನೀಡಲಿದ್ದಾರೆ. ತಕ್ಷಣವೇ ಪೂರ್ಣ ಪ್ರಮಾಣದ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಸರ್ಕಾರಿ ಶಾಲೆಗಳನ್ನು ವ್ಯವಸ್ಥಿತವಾಗಿ ಮುಚ್ಚುವ ಹುನ್ನಾರ ನಿಲ್ಲಿಸುವಂತೆ ಅವರು ಆಗ್ರಹಿಸಿದರು.














Click it and Unblock the Notifications