ಇಂಧನ ಉಳಿತಾಯ, ಬಸ್ ಏರಲಿದ್ದಾರೆ ಮೊಯ್ಲಿ

ಶುಕ್ರವಾರ ನವದೆಹಲಿಯಲ್ಲಿ ಮಾತನಾಡಿದ ಅವರು, ಇನ್ನು ಮುಂದೆ ಪ್ರತಿ ಬುಧವಾರ ನಾನು ಕಚೇರಿಗೆ ಬಸ್ ಅಥವ ಮೆಟ್ರೋ ರೈಲಿನಲ್ಲಿ ಆಗಮಿಸುತ್ತೇನೆ. ಅ.9ರ ಬುಧವಾರದಿಂದ ಈ ಕಾರ್ಯವನ್ನು ಪ್ರಾರಂಭಿಸುತ್ತೇನೆ ಎಂದು ಹೇಳಿದರು.
ಪೆಟ್ರೋಲಿಯಂ ಸಚಿವಾಲಯದ ಸಿಬ್ಬಂದಿಯೂ ಇದನ್ನು ಅನುಸರಿಸಲಿದ್ದಾರೆ. ಆಯಿಲ್ ಕಂಪನಿಗಳ ಅಧಿಕಾರಿಗಳಿಗೂ ಮೆಟ್ರೋ ಅಥವ ಬಸ್ ನಲ್ಲಿ ವಾರಕ್ಕೆ ಒಮ್ಮೆ ಕಚೇರಿಗೆ ಆಗಮಿಸುವಂತೆ ನಿರ್ದೇಶನ ನೀಡಿದ್ದೇನೆ ಎಂದು ತಿಳಿಸಿದರು.
ತೈಲ ಉಳಿತಾಯ ಇಂದಿನ ಅಗತ್ಯವಾಗಿದೆ. ತೈಲ ಉಳಿಸಿ ಎಂದು ದೇಶದ ಜನರಿಗೆ ಕರೆ ನೀಡಿರುವ ನಾನು, ಸ್ವತಃ ಸಾರ್ವಜನಿಕ ಸಾರಿಗೆ ಉಪಯೋಗಿಸುವ ಮೂಲಕ ಜನರಿಗೆ ಇಂಧನ ಉಳಿತಾಯದ ಮಹತ್ವ ಸಾರಲಿದ್ದೇನೆ ಎಂದರು.
ಎರಡು ದಿನಗಳ ಹಿಂದೆ ವೀರಪ್ಪ ಮೊಯ್ಲಿ ಇಂಧನ ಉಳಿತಾಯಕ್ಕೆ ಸಂಬಂಧಿಸಿದಂತೆ ಕೆಲವೊಂದು ಕ್ರಮಗಳನ್ನು ಪ್ರಕಟಿಸಿದ್ದರು. ಈ ಕ್ರಮಗಳ ಮೂಲಕ ಮುಂದಿನ ಒಂದೂವರೆ ತಿಂಗಳ ಅವಧಿಯಲ್ಲಿ 52 ಕೋಟಿ ರೂ.ಉಳಿಸುವ ಗುರಿಯನ್ನು ಹಾಕಿಕೊಂಡಿದ್ದರು.
ಸರ್ಕಾರಿ ಉದ್ಯೋಗಿಗಳಿಗೆ ವಾರಕ್ಕೊಮ್ಮೆ ಸ್ವಂತ ವಾಹನದ ಬದಲು ಬಸ್ಸಿನಲ್ಲಿ ಸಂಚರಿಸಬೇಕು. ಸಣ್ಣ ನಗರಗಳಲ್ಲಿ ಸರ್ಕಾರಿ ನೌಕರರಿಗೆ ಉಚಿತ ಸೈಕಲ್ ವಿತರಿಸುವುದು ಮತ್ತು ಟ್ರಾಫಿಕ್ ಸಮಸ್ಯೆ ತಪ್ಪಿಸಲು ಸರ್ಕಾರಿ ಕಚೇರಿಗಳ ಸಮಯವನ್ನು ಬದಲಿಸುವುದು ಮುಂತಾದ ಕ್ರಮಗಳನ್ನು ಸೂಚಿಸಿದ್ದರು.
ದೇಶಾದ್ಯಂತ ಈ ಆಂದೋಲನ 6 ವಾರಗಳ ಕಾಲ ನಡೆಯಲಿದ್ದು, ಈ ಕ್ರಮಗಳಿಗೆ ಸಹಕರಿಸುವಂತೆ ಸಚಿವರು ಕೇಂದ್ರ ಸಿಬ್ಬಂದಿ ಸಚಿವಾಲಯ, ಮುಖ್ಯಮಂತ್ರಿಗಳು, ವಿವಿಧ ಸಾರ್ವಜನಿಕ ವಲಯದ ಕಂಪನಿಗಳಿಗೆ ಪತ್ರ ಬರೆದಿದ್ದರು. (ಇಂಧನ ಉಳಿಸಲು ಮೊಯ್ಲಿ ಐಡಿಯಾ)












Click it and Unblock the Notifications