ಪಿಎಂ ಯಾಮಾರಿಸಿದ ಮೊಯ್ಲಿಯಿಂದ ಭಾರಿ ಭ್ರಷ್ಟಾಚಾರ?
ನವದೆಹಲಿ, ಏ.22- ತಮ್ಮ ಸಂಪುಟ ಸಚಿವರು ಹಲವಾರು ಅಕ್ರಮಗಳನ್ನು ಎಸಗುವ ಮುನ್ನ ಅಂತಹ ಯೋಜನೆಗಳಿಗೆ ಒಪ್ಪಿಗೆ ನೀಡದೆ ತಡೆ ಹಿಡಿಯುತ್ತಿದ್ದ ಪ್ರಧಾನ ಮಂತ್ರಿ ಡಾ. ಮನಮೋಹನ ಸಿಂಗ್ ಅವರು ಯುಪಿಎ ಸರಕಾರದಲ್ಲಿ ಸಾಕ್ಷಿ ಪ್ರಜ್ಞೆಯಂತಿದ್ದರು. ಆದರೆ ಅನೇಕ ಸಚಿವರು ಅವರ ಮಾತುಗಳನ್ನು ಧಿಕ್ಕರಿಸಿ ಹಲವಾರು ಯೋಜನೆಗಳಿಗೆ ಅಸ್ತು ಅನ್ನುವ ಮೂಲಕ ಒಂದರಮೇಲೊಂದರಂತೆ ಭ್ರಷ್ಟಾಚಾರ ಮಾಡುತ್ತಾ ಬಂದರು ಎಂಬುದು ಈಗ ಮುಗಿದ ಅಧ್ಯಾಯ.
ಆದರೆ ಆಘಾತಕಾರಿ ವಿಷಯವೇನೆಂದರೆ ನಮ್ಮವರೇ ಆದ ವೀರಪ್ಪ ಮೊಯ್ಲಿ ಅವರು ಸಹ ಕೇಂದ್ರ ಪರಿಸರ ಇಲಾಖೆಯ ಸಚಿವರಾಗಿದ್ದುಕೊಂಡು ಎಂಎಂಎಸ್ ಅವರನ್ನು ಯಾಮಾರಿಸಿ ಲಕ್ಷಾಂತರ ಕೋಟಿ ರೂ ಯೋಜನೆಗೆ ಅಸ್ತು ಅಂದಿದ್ದಾರೆ ಎಂಬುದು ತಡವಾಗಿ ಬೆಳಕಿಗೆ ಬಂದಿದೆ.
ಈ ಹಿಂದೆ ವೀರಪ್ಪ ಮೊಯ್ಲಿ ವಿರುದ್ಧ ಇಂತಹ ಆರೋಪಗಳು ಕೇಳಿಬಂದಿದ್ದವಾದರೂ ಮೊಯ್ಲಿ ಆ ರೀತಿಯಲ್ಲಾ ಭ್ರಷ್ಟಾಚಾರ ಮಾಡುವುದಿಲ್ಲ ಎಂಬ ನಂಬಿಕೆಯಿತ್ತು. ಆದರೆ ಈಗ ಮೊಯ್ಲಿ ವಿರುದ್ಧ ಆರೋಪಗಳು ಗಂಭೀರವಾಗಿ ಕೇಳಿಬಂದಿವೆ.

ಕೇಂದ್ರ ಪರಿಸರ ಇಲಾಖೆಯ ಸಚಿವರಾದ ಬಳಿಕ ವೀರಪ್ಪ ಮೊಯ್ಲಿ ಅವರು ಕೆಲವೇ ದಿನಗಳ ಅಂತರದಲ್ಲಿ ಅತ್ಯಂತ ಸಂಕೀರ್ಣವಾದ ಸುಮಾರು 2 ಲಕ್ಷ ಕೋಟಿ ಮೊತ್ತದ 26 ಯೋಜನೆಗಳಿಗೆ ಅನುಮತಿ ನೀಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಯೋಜನೆಗಳಲ್ಲಿ ಕೆಲವು ಕಾನೂನಿನ ತೊಡಕಿದ್ದವು.
ಪ್ರಧಾನ ಮಂತ್ರಿ ಡಾ. ಮನಮೋಹನ ಸಿಂಗ್ ಅವರೇ ಅನೇಕ ವರ್ಷಗಳಿಂದ ಈ ಯೋಜನೆಗೆ ಒಪ್ಪಿಗೆ ನೀಡದೆ ತಡೆ ಹಿಡಿದಿದ್ದರು. ಆದರೆ ಮೊಯ್ಲಿ ತಮ್ಮ ಚಾಣಾಕ್ಷತನದಿಂದ ಈ ಯೋಜನೆಗಳಿಗೆ ಅನುಮತಿ ನೀಡಿದ್ದಾರೆ ಎಂಬ Project Monitoring Group (PMG) ವರದಿ ಮಾಡಿದೆ.
ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಬಲಗೈ ಬಂಟ ಹಾಗೂ ಉದ್ಯಮಿ ಅದಾನಿ ಸಮೂಹದ ಕೆಲವು ಯೋಜನೆಗಳಿಗೂ ಮೊಯ್ಲಿ ಹಸಿರು ನಿಶಾನೆ ತೋರಿದ್ದಾರೆ.
ಕೇಂದ್ರ ಅರಣ್ಯ ಪರಿಸರ ಸಚಿವೆಯಾಗಿದ್ದ ಮೀನಾಕ್ಷಿ ನಟರಾಜನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮೊಯ್ಲಿಗೆ ಇದನ್ನು ಹೆಚ್ಚುವರಿಯಾಗಿ ಪರಿಸರ ಖಾತೆ ನೀಡಲಾಗಿತ್ತು. ಪರಿಸರ ಸಚಿವರಾಗುತ್ತಿದ್ದಂತೆ ಮೊಯ್ಲಿ ಅವರು ಅದಾನಿ ಗ್ರೂಪ್, ಆದಿತ್ಯ ಬಿರ್ಲಾ, ಹಿಂಡಾಲ್ಕೊ ಇಂಡಸ್ಟ್ರೀಸ್, ಎಸ್ಆರ್ ಜಿಂದಾಲ್ ಇಂಡಿಯಾ ಉಷ್ಣ ವಿದ್ಯುತ್, ದಕ್ಷಿಣ ಕೊರಿಯಾದ ಪೋಸ್ಕೋ ಸೇರಿದಂತೆ ಒಟ್ಟು ೨ ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ ಯೋಜನೆಗಳಿಗೆ ಅನುಮತಿ ನೀಡಿದ್ದಾರೆ.
ಹೀಗೆ ಅರಣ್ಯ ಮತ್ತು ಪರಿಸರ ಇಲಾಖೆ ತಾಂತ್ರಿಕ ಅಂಶಗಳನ್ನು ಮುಂದಿಟ್ಟುಕೊಂಡು ತಡೆ ಹಿಡಿದಿದ್ದ ಸುಮಾರು 2 ಲಕ್ಷ ಕೋಟಿ ರೂ. ಗೂ ಅಧಿಕ ಮೊತ್ತದ ಯೋಜನೆಗಳಿಗೆ ಮೊಯ್ಲಿ ಒಪ್ಪಿಗೆ ಸೂಚಿಸಿರುವುದು ಯುಪಿಎ ಸರ್ಕಾರದ ಮತ್ತೊಂದು ಭಾರಿ ಭ್ರಷ್ಟಾಚಾರಕ್ಕೆ ಹೇತುವಾಗಿದೆ ಎಂದು ವರದಿಯಾಗಿದೆ.












Click it and Unblock the Notifications