ಕೋರ್ಟ್‌ನಲ್ಲಿ ಕೃಷಿ ಕಾನೂನು ಪ್ರಶ್ನಿಸಿದ ನಂತರವೂ ಪ್ರತಿಭಟನೆ ಏಕೆ?; ಸುಪ್ರೀಂ ಪ್ರಶ್ನೆ
ನವದೆಹಲಿ, ಅಕ್ಟೋಬರ್ 4: "ನ್ಯಾಯಾಲಯದಲ್ಲಿ ಕೃಷಿ ಕಾನೂನನ್ನು ಪ್ರಶ್ನಿಸಿದ ನಂತರವೂ ರೈತರು ಏಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ತೀವ್ರವಾಗಿ ಪ್ರಶ್ನಿಸಿದೆ. ಕೃಷಿ ಕಾನೂನುಗಳ ಸಮಸ್ಯೆಯನ್ನು ನ್ಯಾಯಾಲಯದಲ್ಲಿ ತೀರ್ಮಾನಿಸುವಾಗ ರೈತರಿಗೆ ಪ್ರತಿಭಟಿಸುವ ಹಕ್ಕಿದೆಯೇ ಎಂದು ಪರಿಶೀಲಿಸುವುದಾಗಿ," ಹೇಳಿದೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅನುಮತಿ ಕೋರಿ ರೈತರ ಗುಂಪು ಸಲ್ಲಿಸಿದ್ದ ಅರ್ಜಿಗೆ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ನೀಡಿದೆ. "ಅಕ್ಟೋಬರ್ 21ರ ಮುಂದಿನ ವಿಚಾರಣೆಯಲ್ಲಿ ನ್ಯಾಯಾಲಯವು ಪ್ರತಿಭಟಿಸುವ ಹಕ್ಕನ್ನು 'ಸಂಪೂರ್ಣ ಹಕ್ಕು' ಎಂದು ನಿರ್ಧರಿಸುತ್ತದೆ," ಎಂದು ತಿಳಿಸಿದೆ.
ಕೇಂದ್ರ ಸರ್ಕಾರವು, "ಭಾನುವಾರ ಲಖಿಂಪುರ್ ಖೇರಿಯಲ್ಲಿ ನಡೆದಂತಹ ದುರದೃಷ್ಟಕರ ಘಟನೆಗಳನ್ನು ತಡೆಗಟ್ಟಲು, ಇನ್ನು ಯಾವುದೇ ಹೆಚ್ಚಿನ ಪ್ರತಿಭಟನೆಗಳನ್ನು ಮಾಡಬಾರದು," ಎಂದು ವಾದಿಸಿತು.

ಭಾನುವಾರ ಲಖಿಂಪುರ್ ಖೇರಿಗೆ ಕೇಂದ್ರ ಸಚಿವರ ಭೇಟಿ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರವಾಗಿದ್ದು, ನಾಲ್ಕು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದಾರೆ.
ಕೇಂದ್ರ ಸಚಿವ ಅಜಯ್ ಸಿಂಗ್ ಮಿಶ್ರಾ ಬೆಂಗಾವಲು ಕಾರು ರೈತರ ಮೇಲೆ ಹರಿದು ನಾಲ್ಕು ರೈತರು ಹತ್ಯೆಗೀಡಾಗಿದ್ದಾರೆ. ಕೇಂದ್ರ ಸಚಿವರ ಪುತ್ರ ಆಶಿಶ್ ಚಾಲನೆ ಮಾಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಆಶಿಶ್ ಮಿಶ್ರಾ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.

ರಾಜಸ್ಥಾನ ಮೂಲದ ರೈತ ಗುಂಪು 'ಕಿಸಾನ್ ಮಹಾ ಪಂಚಾಯತ್'ನ ಮನವಿಯನ್ನು ಸೋಮವಾರ ಸುಪ್ರೀಂ ಕೋರ್ಟ್ ಆಲಿಸಿದ್ದು, ಜಂತರ್ ಮಂತರ್‌ನಲ್ಲಿ 200 ರೈತರೊಂದಿಗೆ "ಸತ್ಯಾಗ್ರಹ' ನಡೆಸಲು ಅನುಮತಿ ಕೋರಿತ್ತು.
ಈ ಹಿಂದೆ 'ದೆಹಲಿ ನಗರವನ್ನು ಕತ್ತು ಹಿಸುಕಿದ ಪ್ರತಿಭಟನೆ'ಯ ಗುಂಪುಗಳ ಮೇಲೆ ನ್ಯಾಯಾಲಯವು ಕಿಡಿಕಾರಿತ್ತು ಹಾಗೂ ಅವರು ಹೆದ್ದಾರಿಗಳನ್ನು ನಿರ್ಬಂಧಿಸುವ ಗುಂಪುಗಳ ಭಾಗವಾಗಲ್ಲ ಎಂದು ಅಫಿಡವಿಟ್ ಸಲ್ಲಿಸುವಂತೆ ಅರ್ಜಿದಾರರಿಗೆ ಹೇಳಿತ್ತು.
ರಾಜಸ್ಥಾನ ಹೈಕೋರ್ಟ್‌ನಲ್ಲಿ ಕೃಷಿ ಕಾನೂನುಗಳ ವಿರುದ್ಧ ಅರ್ಜಿದಾರರು ಅರ್ಜಿ ಸಲ್ಲಿಸಲು ಮತ್ತು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡುವಂತೆ ಸಲ್ಲಿಸಿರುವ ಅರ್ಜಿಗೆ ಸುಪ್ರೀಂ ಕೋರ್ಟ್ ಆಕ್ಷೇಪಿಸಿದೆ.

"ಕೇಂದ್ರ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿದ್ದ ಕೃಷಿ ಕಾಯ್ದೆಗಳಿಗೆ ಪ್ರಸ್ತುತ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ನ್ಯಾಯಾಲಯವು ಕಾಯ್ದೆಗಳ ಸಿಂಧುತ್ವ ನಿರ್ಣಯಿಸದೇ ಕೇಂದ್ರ ಸರ್ಕಾರ ಈ ಕಾಯ್ದೆಗಳನ್ನು ಜಾರಿಗಳಿಸಲು ಆಗುವುದಿಲ್ಲ. ಕಾಯ್ದೆಗಳನ್ನು ಪ್ರಶ್ನಿಸಿ ಒಂದೆಡೆ ನೀವು ನ್ಯಾಯಾಲಯದ ಮೆಟ್ಟಿಲು ಏರಿದ್ದೀರಿ, ಮತ್ತೊಂದೆಡೆ ರಸ್ತೆ ಮೇಲೆ ಕುಳಿತು ಪ್ರತಿಭಟನೆಗಳನ್ನು ನಡೆಸುತ್ತಿದ್ದೀರಿ. ವಿಚಾರಣೆ ನಡೆಯುತ್ತಿರುವಾಗ ರಸ್ತೆ ಮೇಲೆ ಪ್ರತಿಭಟನೆ ನಡೆಸುವ ಔಚಿತ್ಯವಾದರೂ ಏನು?," ಎಂದು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ಸಿ.ಟಿ. ರವಿಕುಮಾರ್ ಪ್ರಶ್ನಿಸಿದರು.












Click it and Unblock the Notifications