ಫ್ರಿಡ್ಜ್ ಮತ್ತು ಗೋಡೆಯ ನಡುವೆ ಇಷ್ಟು ಅಂತರ ಇರಲೇಬೇಕು: ಇಲ್ಲವಾದರೆ ಏರುವುದು ವಿದ್ಯುತ್ ಬಿಲ್!
ಹೊಸ ಫ್ರಿಡ್ಜ್ ಖರೀದಿಸುವಾಗ, ಅನೇಕ ಜನರು ಅದರ ಸಾಮರ್ಥ್ಯ, ವಿನ್ಯಾಸ ಮತ್ತು ಬೆಲೆಯಂತಹ ಅಂಶಗಳಿಗೆ ಆದ್ಯತೆ ನೀಡುತ್ತಾರೆ. ಆದರೆ ಫ್ರಿಡ್ಜ್ ಅನ್ನು ಎಲ್ಲಿ ಮತ್ತು ಹೇಗೆ ಇಡಬೇಕು ಎಂಬುದರ ಬಗ್ಗೆ ಅವರು ಹೆಚ್ಚು ಗಮನ ಹರಿಸುವುದಿಲ್ಲ. ಅನೇಕರಿಗೆ ಫ್ರಿಡ್ಜ್ ಅನ್ನು ಗೋಡೆಗೆ ತಾಕಿಸಿ ಇಡುವ ಅಭ್ಯಾಸವಿರುತ್ತದೆ. ಆದರೆ ಈ ರೀತಿ ಗೋಡೆಗೆ ತುಂಬಾ ಹತ್ತಿರವಾಗಿ ಅಥವಾ ಗೋಡೆ ಮತ್ತು ಫ್ರಿಜ್ ನಡುವೆ ಅಂತರ ಇಲ್ಲದ ರೀತಿಯಲ್ಲಿ ರೆಫ್ರೀಜರೇಟರ್ ಅನ್ನು ಇಡುವುದು ದೊಡ್ಡ ತಪ್ಪು ಎಂದು ತಜ್ಞರು ಹೇಳುತ್ತಾರೆ.
ಫ್ರಿಡ್ಜ್ ಸರಿಯಾಗಿ ಕೆಲಸ ಮಾಡಬೇಕಾದರೆ, ಅದರ ಸುತ್ತಲೂ ಸ್ವಲ್ಪ ಮುಕ್ತ ಸ್ಥಳಾವಕಾಶ ಇರಬೇಕು. ಈ ಮುಕ್ತ ಸ್ಥಳವು ಫ್ರಿಡ್ಜ್‌ನಿಂದ ಶಾಖವನ್ನು ಹೊರಹೋಗಲು ಮತ್ತು ಯಂತ್ರವು ಸರಿಯಾಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ಸರಿಯಾದ ಗಾಳಿ ಇಲ್ಲದೆ ಹೋದರೆ, ಫ್ರಿಡ್ಜ್‌ನ ಕಾರ್ಯಕ್ಷಮತೆ ಕಡಿಮೆಯಾಗುವುದಲ್ಲದೆ, ವಿದ್ಯುತ್ ಬಳಕೆಯೂ ಹೆಚ್ಚಾಗುತ್ತದೆ.

ರೆಫ್ರಿಜರೇಟರ್ ಮತ್ತು ಗೋಡೆ ಮಧ್ಯೆ ಇರಲಿ ಅಂತರ
ರೆಫ್ರಿಜರೇಟರ್ ತಯಾರಕರು ಗೋಡೆಯಿಂದ ಎಷ್ಟು ದೂರದಲ್ಲಿ ಇಡಬೇಕು ಫ್ರಿಜ್ ಎಂಬುದನ್ನು ವಿವರಿಸಿ ಹೇಳುತ್ತಾರೆ. ಉದಾಹರಣೆಗೆ, ರೆಫ್ರಿಜರೇಟರ್ ಮತ್ತು ಗೋಡೆಯ ಹಿಂಭಾಗ ಮತ್ತು ಬದಿಗಳ ನಡುವೆ ಕನಿಷ್ಠ 10 ಸೆಂಟಿಮೀಟರ್ ಜಾಗ ಇರಬೇಕು ಎಂದು LG ಹೇಳುತ್ತದೆ. ರೆಫ್ರಿಜರೇಟರ್‌ನ ಮೇಲ್ಭಾಗದಿಂದ ಸೀಲಿಂಗ್‌ಗೆ ಸುಮಾರು 30 ಸೆಂಟಿಮೀಟರ್ ಜಾಗ ಇರಬೇಕು ಎನ್ನುವುದನ್ನು ಕೂಡಾ ಅದು ಸೂಚಿಸುತ್ತದೆ. ಮತ್ತೊಂದೆಡೆ, ರೆಫ್ರಿಜರೇಟರ್ ಸುತ್ತಲೂ 5 ರಿಂದ 7 ಸೆಂಟಿಮೀಟರ್‌ಗಳ ಜಾಗವನ್ನು ಹೊಂದಿರುವುದು ಉತ್ತಮ ಎಂದು ಸ್ಯಾಮ್‌ಸಂಗ್ ಹೇಳುತ್ತದೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ, ಕನಿಷ್ಠ 2 ರಿಂದ 3 ಸೆಂಟಿಮೀಟರ್‌ಗಳವರೆಗೆಯಾದರೂ ಅಂತರ ಇರಲೇಬೇಕು ಎನ್ನುತ್ತದೆ ಕಂಪನಿ. ಪ್ರತಿಯೊಂದು ಕಂಪನಿಯ ಶಿಫಾರಸುಗಳು ಸ್ವಲ್ಪ ಭಿನ್ನವಾಗಿದ್ದರೂ, ರೆಫ್ರಿಜರೇಟರ್ ಸುತ್ತಲೂ ಸ್ವಲ್ಪ ಜಾಗವಿರಬೇಕು ಎನ್ನುವುದನ್ನು ಮಾತ್ರ ಎಲ್ಲಾ ಕಂಪನಿಗಳು ಒತ್ತಿ ಹೇಳುತ್ತವೆ.
ಶಾಖ ಸರಿಯಾಗಿ ಹೊರ ಹೋಗಬೇಕು
ರೆಫ್ರಿಜರೇಟರ್ ಕಾರ್ಯನಿರ್ವಹಿಸುತ್ತಿರುವಾಗ, ಕಂಪ್ರೆಸರ್ ಮತ್ತು ಕಂಡೆನ್ಸರ್‌ನಂತಹ ಘಟಕಗಳು ನಿರಂತರವಾಗಿ ಶಾಖವನ್ನು ಉತ್ಪಾದಿಸುತ್ತವೆ. ಈ ಶಾಖ ಸರಿಯಾಗಿ ಹೊರ ಹೋದರೆ ಮಾತ್ರ ರೆಫ್ರಿಜರೇಟರ್‌ನ ಒಳಭಾಗ ತಂಪಾಗಿರುತ್ತದೆ. ಒಂದು ವೇಳೆ ರೆಫ್ರಿಜರೇಟರ್ ಅನ್ನು ಗೋಡೆಯ ತುಂಬಾ ಹತ್ತಿರದಲ್ಲಿ ಇರಿಸಿದರೆ, ಶಾಖವು ಹೊರಹೋಗಲು ಸ್ಥಳವಿರುವುದಿಲ್ಲ. ಆಗ ಶಾಖ ಹೊರ ಹೋಗಲು ತಡೆ ಉಂಟಾಗುತ್ತದೆ. ಇದರರ್ಥ ರೆಫ್ರಿಜರೇಟರ್ ಒಳಗೆ ಅಪೇಕ್ಷಿತ ತಾಪಮಾನವನ್ನು ಕಾಪಾಡಿಕೊಳ್ಳಲು ಮೋಟಾರ್ ಹೆಚ್ಚು ಸಮಯ ಕೆಲಸ ಮಾಡಬೇಕಾಗುತ್ತದೆ. ಪರಿಣಾಮವಾಗಿ, ವಿದ್ಯುತ್ ಬಿಲ್ ಹೆಚ್ಚಾಗುತ್ತದೆ. ರೆಫ್ರಿಜರೇಟರ್ ಕೂಡಾ ಹೆಚ್ಚು ಒತ್ತಡಕ್ಕೆ ಒಳಗಾಗುತ್ತದೆ.
ಫ್ರಿಜ್ ಸರಿಯಾಗಿ ಕೂಲ್ ಆಗುವುದಿಲ್ಲ
ಹೆಚ್ಚಿನ ಒತ್ತಡದಲ್ಲಿ ದೀರ್ಘಕಾಲ ಕೆಲಸ ಮಾಡುವುದರಿಂದ ಕಂಪ್ರೆಸರ್‌ನಂತಹ ಪ್ರಮುಖ ಘಟಕಗಳು ಬೇಗನೆ ಹಾನಿಗೊಳಗಾಗಬಹುದು. ಇದಲ್ಲದೆ, ಫ್ರಿಡ್ಜ್‌ನಿಂದ ಅಸಾಮಾನ್ಯ ಶಬ್ದಗಳು ಕೂಡಾ ಕೇಳಿಸಬಹುದು. ಇನ್ನು ಫಿಜ್‌ನ ಕೂಲಿಂಗ್ ಸಾಮರ್ಥ್ಯದ ಮೇಲೂ ಇದು ಪರಿಣಾಮ ಬೀರುವುದು. ಫ್ರಿಜ್ ಸರಿಯಾಗಿ ಕೂಲ್ ಆಗುತ್ತಿಲ್ಲ ಎಂದಾದರೆ ಆಹಾರವು ಬೇಗನೆ ಹಾಳಾಗುವ ಸಮಸ್ಯೆ ಕಾಡಬಹುದು. ವಿಶೇಷವಾಗಿ ಹಾಲು, ಹಣ್ಣುಗಳು, ತರಕಾರಿಗಳು ಮತ್ತು ಮಾಂಸ ಉತ್ಪನ್ನಗಳಂತಹ ಆಹಾರಗಳ ಗುಣಮಟ್ಟವೂ ಹದಗೆಡಬಹುದು.
ಲೈಫ್ ಟೈಮ್ ಕೂಡಾ ಜಾಸ್ತಿಯಾಗುತ್ತದೆ
ತಜ್ಞರ ಪ್ರಕಾರ, ಸರಿಯಾದ ಜಾಗದಲ್ಲಿ ರೆಫ್ರಿಜರೇಟರ್ ಅಳವಡಿಸುವುದರಿಂದ ಅದರ ದಕ್ಷತೆ ಹೆಚ್ಚಾಗುತ್ತದೆ. ಮಾತ್ರವಲ್ಲ ಫ್ರಿಜ್‌ನ ಲೈಫ್ ಟೈಮ್ ಕೂಡಾ ಜಾಸ್ತಿಯಾಗುತ್ತದೆ. ಇದು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುತ್ತದೆ ಮತ್ತು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ. ಅದಕ್ಕಾಗಿಯೇ ಹೊಸ ರೆಫ್ರಿಜರೇಟರ್ ಖರೀದಿಸುವ ಮೊದಲು, ನೀವು ಅದರ ಆಯಾಮಗಳನ್ನು ಮತ್ತು ಮನೆಯಲ್ಲಿ ಲಭ್ಯವಿರುವ ಜಾಗವನ್ನು ಸರಿಯಾಗಿ ಅಳೆಯಬೇಕು. ತಯಾರಕರು ಶಿಫಾರಸು ಮಾಡಿದಂತೆ ಅದನ್ನು ಗೋಡೆಗಳಿಂದ ಸಾಕಷ್ಟು ದೂರದಲ್ಲಿ ಇರಿಸಿದರೆ ರೆಫ್ರಿಜರೇಟರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ನೀವು ಯಾವುದೇ ಸಮಸ್ಯೆಗಳಿಲ್ಲದೆ ಹಲವು ವರ್ಷಗಳ ಕಾಲ ಅದನ್ನು ಬಳಸಬಹುದು.
(ಬರಹ :ರಂಜಿತಾ ಆರ್.ಕೆ)












Click it and Unblock the Notifications