ವೈವಾಹಿಕ ಅತ್ಯಾಚಾರದ ಕುರಿತು ದೆಹಲಿ ಹೈಕೋರ್ಟ್ ಭಿನ್ನ ತೀರ್ಪು; ಕೇಂದ್ರಕ್ಕೆ ಸುಪ್ರೀಂ ನೋಟಿಸ್
ನವದೆಹಲಿ, ಸೆ.16: ವೈವಾಹಿಕ ಅತ್ಯಾಚಾರದ ಕುರಿತು ದೆಹಲಿ ಹೈಕೋರ್ಟ್‌ನ ಭಿನ್ನ ತೀರ್ಪಿನ ವಿರುದ್ಧದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ.
ವೈವಾಹಿಕ ಅತ್ಯಾಚಾರವನ್ನು ಅಪರಾಧವಾಗಿ ಪರಿಗಣಿಸಬೇಕೆಂಬ ವಿಚಾರದ ಬಗ್ಗೆ ದೆಹಲಿ ಹೈಕೋರ್ಟ್ ನ್ಯಾಯಪೀಠದಲ್ಲಿದ್ದ ನ್ಯಾ. ರಾಜೀವ್ ಶಕಧೇರ್ (Justice Rajeev Shakdher) ಮತ್ತು ನ್ಯಾ. ಹರಿಶಂಕರ್ ಅವರು ಭಿನ್ನ ತೀರ್ಪು ನೀಡಿದ್ದರು.
ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘ (AIDWA) ಮತ್ತು ಇತರರು ದೆಹಲಿ ಹೈಕೋರ್ಟ್‌ನ ವಿಭಜಿತ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ನ್ಯಾಯಮೂರ್ತಿ ಬಿವಿ ನಾಗರತ್ನ ಅವರ ಪೀಠವು ಈ ವಿಷಯವನ್ನು ಪರಿಶೀಲಿಸಲು ಒಪ್ಪಿಕೊಂಡಿದೆ. ಫೆಬ್ರವರಿ 2023 ರಲ್ಲಿ ಮುಂದಿನ ವಿಚಾರಣೆಗೆ ಈ ಪ್ರಕರಣವನ್ನು ಪಟ್ಟಿ ಮಾಡಿದೆ.
ನ್ಯಾಯಾಧೀಶರ ಮಧ್ಯೆ ಭಿನ್ನ ತೀರ್ಪು:
ಮೇ 12 ರಂದು ದೆಹಲಿ ಹೈಕೋರ್ಟ್‌ನ ಇಬ್ಬರು ನ್ಯಾಯಾಧೀಶರ ಪೀಠವು ಒಂದು ಸಮಸ್ಯೆಯ ಕುರಿತು ವಿಭಜಿತ ತೀರ್ಪು ಪ್ರಕಟಿಸಿತು.
ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶ ನ್ಯಾಯಮೂರ್ತಿ ರಾಜೀವ್ ಶಕಧೇರ್ ಅವರು ವೈವಾಹಿಕ ಅತ್ಯಾಚಾರವನ್ನು ಅಪರಾಧವಾಗಿ ಪರಿಗಣಿಸಬೇಕೆಂಬ ಪರವಾಗಿ ತೀರ್ಪು ನೀಡಿದರು. ಆದರೆ, ನ್ಯಾಯಮೂರ್ತಿ ಹರಿ ಶಂಕರ್ ಅಭಿಪ್ರಾಯವನ್ನು ಒಪ್ಪಲಿಲ್ಲ. ಸೆಕ್ಷನ್ 375ರ 2ನೇ ವಿನಾಯಿತಿಯಿಂದ ಸಂವಿಧಾನದ ಉಲ್ಲಂಘನೆಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ನ್ಯಾಯಮೂರ್ತಿ ರಾಜೀವ್ ಶಕಧೇರ್ ನೀಡಿದ ಆದೇಶದ ಪ್ರಕಾರ, ಹೆಂಡತಿಯ ಒಪ್ಪಿಗೆಯಿಲ್ಲದೆ ನಡೆಸುವ ಒತ್ತಾಯದ ಲೈಂಗಿಕತೆಯಲ್ಲಿ ಪತಿಯ ವಿರುದ್ಧ ಅತ್ಯಾಚಾರ ಪ್ರಕರಣದಲ್ಲಿ ಗಂಡನನ್ನು ಕ್ರಿಮಿನಲ್ ಹೊಣೆಗಾರರನ್ನಾಗಿ ಮಾಡಬಹುದು. ನ್ಯಾಯಮೂರ್ತಿ ಹರಿಶಂಕರ್ ಅವರು ಈ ಅಭಿಪ್ರಾಯಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದರು.
ಹೈಕೋರ್ಟ್ ವಿಭಜಿತ ತೀರ್ಪಿನ ವಿರುದ್ಧ ಮೇಲ್ಮನವಿ:
ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘ ದೆಹಲಿ ಹೈಕೋರ್ಟ್‌ನ ಇಬ್ಬರು ನ್ಯಾಯಾಧೀಶರ ಪೀಠದ ವಿಭಜಿತ ತೀರ್ಪಿನ ವಿರುದ್ಧ ಸುಪ್ರೀಂ ಕೋಟ್‌್ಗೆ ಮೇಲ್ಮನವಿ ಸಲ್ಲಿಸಿದ್ದರು.
ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘ ಪರ ವಕೀಲ ಕರುಣಾ ನುಂಡಿ ವಾದ ಮಂಡಿಸಿದ್ದು, ವಕೀಲ ರಾಹುಲ್ ನಾರಾಯಣ್ ಮೂಲಕ ಸುಪ್ರೀಂ ಕೋಟ್‌್ಗೆ ಮನವಿ ಸಲ್ಲಿಸಲಾಗಿದೆ.
AIDWA ತನ್ನ ಮನವಿಯಲ್ಲಿ, ವೈವಾಹಿಕ ಅತ್ಯಾಚಾರಕ್ಕೆ ನೀಡಲಾದ ವಿನಾಯಿತಿ ವಿನಾಶಕಾರಿಯಾಗಿದೆ. ಇದು ಒಪ್ಪಿಗೆಯಿಲ್ಲದ ಲೈಂಗಿಕ ಚಟುವಟಿಕೆಯನ್ನು ಸ್ಪಷ್ಟವಾಗಿ ನಿಷೇಧಿಸುವ ಅತ್ಯಾಚಾರ ಕಾನೂನುಗಳಿಗೆ ಈ ವಿನಾಯಿತಿ ವಿರುದ್ಧವಾಗಿದೆ ಎಂದು ತಿಳಿಸಿದೆ. ಇದು ಮದುವೆಯಲ್ಲಿ ಮಹಿಳೆಯ ಹಕ್ಕುಗಳಿಗಿಂತ ಮದುವೆಯ ಗೌಪ್ಯತೆಯನ್ನು ಎತ್ತಿ ಹಿಡಿಯುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ವೈವಾಹಿಕ ಅತ್ಯಾಚಾರ ವಿನಾಯಿತಿಯು ಸಂವಿಧಾನದ 14, 19 (1) (ಎ) ಮತ್ತು 21 ನೇ ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.












Click it and Unblock the Notifications