ಅಯೋಧ್ಯಾ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳ ವಜಾ
ನವದೆಹಲಿ, ಡಿಸೆಂಬರ್ 12: ಅಯೋಧ್ಯಾ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪನ್ನು ಮರುಪರಿಶೀಲನೆ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಗಳನ್ನೂ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಸ್.ಎ. ನಜೀರ್, ಡಿವೈ ಚಂದ್ರಚೂಡ್ ಮತ್ತು ಸಂಜೀವ್ ಖನ್ನಾ ಅವರನ್ನು ಒಳಗೊಂಡ ಪಂಚ ಸದಸ್ಯರ ಹೊಸ ನ್ಯಾಯಪೀಠ ಗುರುವಾರ ಈ ಅರ್ಜಿಗಳನ್ನು ತಿರಸ್ಕರಿಸಿತು.
ಮುಖ್ಯ ನ್ಯಾಯಮೂರ್ತಿಯಾಗಿದ್ದ ರಂಜನ್ ಗೊಗೊಯ್ ನಿವೃತ್ತರಾಗುವ ಮೊದಲು ಪಂಚ ಸದಸ್ಯರ ಪೀಠ ಅಯೋಧ್ಯಾ ತೀರ್ಪು ಪ್ರಕಟಿಸಿತ್ತು. ಗೊಗೊಯ್ ಅವರ ಸ್ಥಾನಕ್ಕೆ ಪೀಠಕ್ಕೆ ಹೊಸ ನ್ಯಾಯಮೂರ್ತಿಯಾಗಿ ಸಂಜೀವ್ ಖನ್ನಾ ಸೇರ್ಪಡೆಯಾಗಿದ್ದರು.

ಸುದೀರ್ಘ ಕಾಲದಿಂದ ನ್ಯಾಯಾಲಯದಲ್ಲಿ ಇದ್ದ ಅಯೋಧ್ಯಾ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಅಂತಿಮ ಆದೇಶ ನೀಡಿತ್ತು. ಬಾಬ್ರಿ ಮಸೀದಿ ಇದ್ದ ಜಾಗದಲ್ಲಿ ಮಂದಿರವಿತ್ತು ಎಂದು ಅಭಿಪ್ರಾಯಪಟ್ಟಿದ್ದ ನ್ಯಾಯಾಲಯ, ವಿವಾದಿತ 2.77 ಎಕರೆ ಭೂಮಿಯನ್ನು ಅರ್ಜಿದಾರ ರಾಮ್ ಲಲ್ಲಾ ವಿರಾಜಮಾನ್‌ಗೆ ನೀಡಿ ತೀರ್ಪು ನೀಡಿತ್ತು.
ನವೆಂಬರ್ 9ರಂದು ನೀಡಲಾಗಿದ್ದ ತೀರ್ಪು ಪ್ರಶ್ನಿಸಿ ಒಟ್ಟು 18 ಮರುಪರಿಶೀಲನಾ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಸುಮಾರು 40 ನಾಗರಿಕ ಕಾರ್ಯಕರ್ತರು ಮೂಲ ಅರ್ಜಿದಾರರು ಅಲ್ಲದಿದ್ದರೂ ಅರ್ಜಿ ಸಲ್ಲಿಸಿದ್ದರು. ಸಂವಿಧಾನಪೀಠದ ಸರ್ವಾನುಮತದ ಆದೇಶವು ಅಸಮರ್ಪಕವಾಗಿದೆ. ಮುಸ್ಲಿಮರ ಭಾವನೆ ಹಾಗೂ ಹಕ್ಕುಗಳನ್ನು ಕಸಿದುಕೊಂಡಿದೆ. ಹೀಗಾಗಿ ಮರುಪರಿಶೀಲನೆ ಮಾಡಬೇಕು ಎಂದು ಅರ್ಜಿ ಸಲ್ಲಿಸಿದ್ದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹಾಗೂ ವಿವಿಧ ಸಂಘಟನೆಗಳು ಒತ್ತಾಯಿಸಿದ್ದವು.
ಮುಸ್ಲಿಮರಿಗೆ ಮಸೀದಿ ನಿರ್ಮಾಣಕ್ಕಾಗಿ ಐದು ಎಕರೆ ಜಮೀನು ನೀಡಬೇಕು ಎಂದ ಆದೇಶವನ್ನು ಪ್ರಶ್ನಿಸಿ ಹಿಂದೂ ಸಂಘಟನೆಯೊಂದು ಅರ್ಜಿ ಸಲ್ಲಿಸಿತ್ತು. ಅಯೋಧ್ಯಾ ವಿವಾದದ ಮೂಲ ಅರ್ಜಿದಾರರಲ್ಲಿ ಒಬ್ಬರಾದ ನಿರ್ಮೋಹಿ ಅಖಾರ, ತನ್ನ ಪಾತ್ರದ ಬಗ್ಗೆ ಸ್ಪಷ್ಟನೆ ಕೋರಿತ್ತು.












Click it and Unblock the Notifications