ಸಲ್ಮಾನ್ 'ಖಾನ್' ಆಗಿದ್ದಕ್ಕೆ ಬೇಲ್ ಬೇಗ ಸಿಕ್ತು: ಸಾಧ್ವಿ
ನವದೆಹಲಿ, ಮೇ.9: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಇಷ್ಟು ತ್ವರಿತವಾಗಿ ಜಾಮೀನು ಹೇಗೆ ಸಿಕ್ಕಿತು? ಎಂದು ಎಲ್ಲೆಡೆ ಚರ್ಚೆ ನಡೆಯುತ್ತಿರುವಾಗ ಬಿಜೆಪಿ ಸಂಸದೆ, ಸಾಧ್ವಿ ಪ್ರಾಚಿ ಅವರು ತಮ್ಮದೇ ಆದ ಕಾರಣ ನೀಡಿದ್ದಾರೆ. ಸಲ್ಮಾನ್ ಖಾನ್ ಮುಸ್ಲಿಂ ಆಗಿದ್ದರಿಂದ ಬೇಗ ಜಾಮೀನು ಸಿಕ್ಕಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
2002 ಹಿಟ್ ಅಂಡ್ ರನ್ ಪ್ರಕರಣದಲ್ಲಿ ಜನಪ್ರಿಯ ನಟ ಸಲ್ಮಾನ್ ಖಾನ್ ಅವರಿಗೆ ಬಾಂಬೆ ಹೈಕೋರ್ಟ್ ನಿಂದ ಶುಕ್ರವಾರ ಶುಭ ಸುದ್ದಿ ಸಿಕ್ಕಿತ್ತು. ಸೆಷನ್ಸ್ ಕೋರ್ಟ್ ನೀಡಿದ್ದ 5 ವರ್ಷ ಶಿಕ್ಷೆಯನ್ನು ಹೈಕೋರ್ಟ್ ಅಮಾನತು ಮಾಡಿತ್ತು. ನಂತರ ಸೆಷನ್ಸ್ ಕೋರ್ಟಿಗೆ ಶರಣಾದ ಸಲ್ಮಾನ್ ಖಾನ್ ಜಾಮೀನು ಪಡೆದು ಮನೆಗೆ ತೆರಳಿದ್ದರು. [ಹಿಟ್ ಅಂಡ್ ರನ್ ಕೇಸ್ ಟೈಮ್ ಲೈನ್]

ಸಲ್ಮಾನ್ ಗೆ ಜಾಮೀನು ಸಿಕ್ಕಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಉತ್ತರ ಪ್ರದೇಶದ ಬಿಜೆಪಿ ನಾಯಕಿ ಸಾಧ್ವಿ ಪ್ರಾಚಿ ಅವರು ಮಾತನಾಡಿ, 'ಸಲ್ಮಾನ್ ಖಾನ್ ಮುಸ್ಲಿಂ ಆಗಿದ್ದರಿಂದ ನ್ಯಾಯಾಲಯದಲ್ಲಿ ಸುಲಭವಾಗಿ ತ್ವರಿತವಾಗಿ ಜಾಮೀನು ಸಿಕ್ಕಿದೆ. [ಶಿಕ್ಷೆ ರದ್ದು, ಜೈಲು ತಪ್ಪಿಸಿಕೊಂಡ ಸಲ್ಮಾನ್]
ಒಂದು ವೇಳೆ ಸಲ್ಮಾನ್ ಮುಸ್ಲಿಂ ಆಗಿಲ್ಲದಿದ್ದರೆ, ಬಡವರಿಗೆ ನ್ಯಾಯ ಹೇಗೆ ಸಿಗಲು ಸಾಧ್ಯ. ಸಲ್ಮಾನ್ ಗೆ ಜಾಮೀನು ಸಿಕ್ಕಿದ್ದನ್ನು ಕಾಂಗ್ರೆಸ್ ಕೂಡಾ ಬೆಂಬಲಿಸುತ್ತಿದೆ ಎಂದು ಪ್ರಾಚಿ ಕಿಡಿಕಾರಿದ್ದಾರೆ. ['ನಾನು ಭಾರತೀಯ ನನಗೆ ಜಾತಿ-ಧರ್ಮಗಳಿಲ್ಲ': ಸಲ್ಮಾನ್]
ಈಗಾಗಲೇ ಹಲವು ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ರಾಚಿಗೆ ಭಾರತೀಯ ಜನತಾ ಪಕ್ಷ, ವಿವಾದಿತ ಹೇಳಿಕೆ ನೀಡಬಾರದೆಂದು ಕಡಿವಾಣ ಹಾಕಿತ್ತು. ಆದರೆ ಸಾದ್ವಿ ಯಾವುದಕ್ಕೂ ಜಗ್ಗದೆ ವಿವಾದಿತ ಹೇಳಿಕೆ ನೀಡುವುದನ್ನು ಮುಂದುವರಿಸಿದ್ದಾರೆ.

ಸಾಧ್ವಿ ವಿವಾದಿತ ಹೇಳಿಕೆಗಳು: ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಅಮೀರ್ ಖಾನ್ ಅವರು ತಮ್ಮ ಚಿತ್ರಗಳ ಮೂಲಕ 'ಲವ್ ಜಿಹಾದ್' ಹರಡುತ್ತಿದ್ದಾರೆ. ಭಾರತದ ಯುವ ಜನತೆ ಹಾಳಾಗಲು ಇವರ ಚಿತ್ರಗಳೇ ಕಾರಣವಾಗಿದೆ. ಖಾನ್ ತ್ರಯರ ಚಿತ್ರಗಳನ್ನು ನೋಡಬೇಡಿ ಎಂದು ವಿಶ್ವ ಹಿಂದೂ ಪರಿಷತ್ ಸಮ್ಮೇಳನದಲ್ಲಿ ಸಾಧ್ವಿ ಪ್ರಾಚಿ ಹೇಳಿದ್ದರು. [ಇಲ್ಲಿದೆ ಹೆಚ್ಚಿನ ವಿವರ]
ಇದಕ್ಕೂ ಮುನ್ನ ಸಾಧ್ವಿ ಪ್ರಾಚಿ, ಸಿಂಹ ಕೇವಲ ಒಂದು ಮಗುವನ್ನು ಹೊಂದಿರುವುದಿಲ್ಲ. ನಾಲ್ಕಾರು ಮಕ್ಕಳಿದ್ದರೆ ಚೆನ್ನ. ಗಡಿಯಲ್ಲಿ ಯುದ್ಧ ಮಾಡಲು, ಸಂತರಾಗಲು, ವಿಶ್ವ ಹಿಂದೂ ಪರಿಷತ್ ಸೇರಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಲು ತಲಾ ಒಬ್ಬ ಮಗುವನ್ನು ಹಿಂದೂಗಳು ಹೆರಬೇಕಿದೆ ಎಂದಿದ್ದರು. [ವಿವಾದಾತ್ಮಕ 'ಲವ್ ಜಿಹಾದ್'? ಎಂದರೇನು]
2012ರಲ್ಲಿ ಉತ್ತರಪ್ರದೇಶದ ಪುರ್ಕಾಜಿ ಅಸೆಂಬ್ಲಿಗೆ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿದ್ದ ಪ್ರಾಚಿ ಅವರ ಮೇಲೆ ಮುಜಾಫರ್ ನಗರ ಗಲಭೆ ಪ್ರಕರಣದ ಆರೋಪ ಕೇಳಿ ಬಂದಿತ್ತು. ಆದರೆ, ನಂತರ ಜಾಮೀನು ಪಡೆದುಕೊಂಡಿದ್ದರು.












Click it and Unblock the Notifications