'ನಾನು ಭಾರತೀಯ ನನಗೆ ಜಾತಿ-ಧರ್ಮಗಳಿಲ್ಲ': ಸಲ್ಮಾನ್
ಜೋಧ್ ಪುರ್, ಏ.29: ಹಿಟ್ ಅಂಡ್ ರನ್ ಕೇಸಿನ ತೀರ್ಪಿನ ಭೀತಿಯಲ್ಲಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಅಕ್ರಮ ಶಸ್ತ್ರಾಸ್ತ್ರ ಬಳಕೆ ಪ್ರಕರಣದಲ್ಲಿ ಬುಧವಾರ ಕೋರ್ಟಿಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಹೇಳಿಕೆ ನೀಡುವ ಸಂದರ್ಭದಲ್ಲಿ ನ್ಯಾಯಾಧೀಶರ ಮುಂದೆ 'ನಾನು ಭಾರತೀಯ ನನಗೆ ಯಾವುದೇ ಒಂದು ಜಾತಿ, ಧರ್ಮ ಇಲ್ಲ' ಎಂದಿದ್ದಾರೆ.
ಹುಷಾರಿಲ್ಲ, ಶೂಟಿಂಗ್ ಇದೆ ಎಂದು ನೆಪ ಹೇಳುವುದನ್ನು ಬಿಟ್ಟು ಏ.29ರಂದು ಎಲ್ಲೇ ಇದ್ದರೂ ಕೋರ್ಟಿಗೆ ಹಾಜರಾಗಿ ಹೇಳಿಕೆ ನೀಡಬೇಕು ಎಂದು ಮಾಜಿಸ್ಟ್ರೇಟ್ ಜಡ್ಜ್ ಅನುಪಮ ಬಿಜಲಾನಿ ಆದೇಶಿಸಿದ್ದರು. ಇದಕ್ಕೆ ತಲೆ ಬಾಗಿದ ಸಲ್ಮಾನ್ ಖಾನ್ ಇಂದು ಕೋರ್ಟಿನಲ್ಲಿ ಹೇಳಿಕೆ ದಾಖಲಿಸುವ ಸಂದರ್ಭದಲ್ಲಿ ಎಲ್ಲರ ಗಮನ ಸೆಳೆದರು.[ಸಲ್ಮಾನ್ 10 ವರ್ಷ ಜೈಲು ಶಿಕ್ಷೆ ಭೀತಿ]
'ನಾನು ಭಾರತೀಯ ಎನ್ನುತ್ತಿರಿ ಅದರೆ, ನಿಯಮದ ಪ್ರಕಾರ ಆ ರೀತಿ ಕಾಲಂ ಇಲ್ಲ. ನೀವು ನಿಮ್ಮ ಜಾತಿ ಧರ್ಮದ ಬಗ್ಗೆ ಹೇಳಲೇಬೇಕು ಎಂದು ನ್ಯಾಯಾಧೀಶೆ ಅನುಪಮ ಅವರು ಸೂಚಿಸಿದರು. ಇದಕ್ಕೆ ಉತ್ತರಿಸಿದ ಸಲ್ಮಾನ್, 'ನಾನು ಮುಸ್ಲಿಂ ಹಾಗೂ ನಾನು ಹಿಂದೂ ಎಂದು ನಮೂದಿಸಿಕೊಳ್ಳಿ. ಯಾವುದೇ ಒಂದು ಧರ್ಮದ ಪಾಲಕನಲ್ಲ ಎಂದಿದ್ದಾರೆ.

ಅಕ್ರಮ ಶಾಸ್ತ್ರಸ್ತ್ರ ಪ್ರಕರಣ ತೀರ್ಪು ಕುತೂಹಲ
ಸುಮಾರು 16 ವರ್ಷಗಳ ನಂತರ ಪ್ರಕರಣದ ತೀರ್ಪು ಹೊರ ಬರಬೇಕಿದ್ದು, ಈ ಕಾಯ್ದಿಟ್ಟ ತೀರ್ಪಿನಲ್ಲಿ ಏನಿದೆಯೋ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಈ ನಡುವೆ ಆರು ಜನ ಸಾಕ್ಷಿಗಳನ್ನು ಮತ್ತೊಮ್ಮೆ ವಿಚಾರಣೆಗೊಳಪಡಿಸಲು ಸಲ್ಮಾನ್ ಖಾನ್ ವಕೀಲ ಎಚ್ ಎಂ ಸಾರಸ್ವತ್ ಅವರು ಮಾಡಿರುವ ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ. ಇದೇ ಪ್ರಕರಣಕ್ಕೆ ಹೊಂದಿಕೊಂಡಂತೆ ಕೃಷ್ಣಮೃಗ ಬೇಟೆ ಪ್ರಕರಣದ ತೀರ್ಪು ಹೊರಬೀಳಬೇಕಿದೆ.

ನಾನು ಅಮಾಯಕ: ಸಲ್ಮಾನ್ ಹೇಳಿಕೆ
ನಾನು ಅಮಾಯಕ ಈ ಕೇಸಿನಲ್ಲಿ ನನ್ನನ್ನು ಸುಮ್ಮನೆ ಸಿಲುಕಿಸಲಾಗಿದೆ. ಸಾಕ್ಷಿಗಳ ಮರು ವಿಚಾರಣೆಗೆ ಕೋರ್ಟ್ ಅನುಮತಿ ನೀಡಿರುವುದಕ್ಕೆ ಆಭಾರಿಯಾಗಿದ್ದೇನೆ. ಅಕ್ರಮ ಶಸ್ತ್ರಾಸ್ತ್ರ ಬಳಕೆ ಬಗ್ಗೆ ಈಗಾಗಲೇ ದಾಖಲೆಗಳನ್ನು ಒದಗಿಸಲಾಗಿದೆ. ನನ್ನ ಶೂಟಿಂಗ್ ಇದ್ದಿದ್ದರಿಂದ ಇಲ್ಲಿ ತನಕ ಕೋರ್ಟಿಗೆ ಹಾಜರಾಗಲಿಲ್ಲ. ನಾನು ಕಾನೂನು ಪಾಲಿಸುವ ನಾಗರಿಕ ಎಂದು ಸಲ್ಮಾನ್ ಅವರು ತಮ್ಮ ಹೇಳಿಕೆ ದಾಖಲಿಸಿದ್ದಾರೆ.

ಅಕ್ರಮ ಶಸ್ತ್ರಾಸ್ತ್ರ ಬಳಕೆ
ಕೃಷ್ಣಮೃಗ ಬೇಟೆಯಾಡಲು ಸಲ್ಮಾನ್ ಖಾನ್ ಹಾಗೂ ಇತರೆ ಆರೋಪಿಗಳು ಬಳಸಿದ ಶಸ್ತ್ರಾಸ್ತ್ರಗಳು ಲೈಸನ್ ಹೊಂದಿಲ್ಲ ಎಂದು ಅರಣ್ಯ ಇಲಾಖೆ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರೆ, ಸಲ್ಮಾನ್ ಬಳಿ ಇದ್ದ ಗನ್ ಲೈಸನ್ ನವೀಕರಣಕ್ಕೆ ಅರ್ಜಿ ಹಾಕಲಾಗಿದೆ. ಲೈಸನ್ಸ್ ರದ್ದಾಗಿಲ್ಲ ಹಾಗೂ ಅವಧಿಯೂ ಮುಗಿದಿಲ್ಲ ಹೀಗಾಗಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದಾರೆ ಎಂಬ ಆರೋಪ ಸರಿಯಲ್ಲ ಎಂದು ಸಲ್ಮಾನ್ ಪರ ವಕೀಲರು ವಾದಿಸಿದ್ದಾರೆ.

ಕಾಡುತ್ತಿರುವ ಕೃಷ್ಣಮೃಗ ಬೇಟೆ
1998ರ ಅಕ್ಟೋಬರ್ 1-2ರಂದು ಕಂಕಾನಿ ಗ್ರಾಮದಲ್ಲಿ ಹಮ್ ಸಾಥ್ ಸಾಥ್ ಹೈ ಚಿತ್ರೀಕರಣದ ಸಂದರ್ಭದಲ್ಲಿ ರಾಜಸ್ಥಾನದ ಕಾಡೊಂದರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಕೃಷ್ಣ ಮೃಗ ಬೇಟೆಯಾಡಿದ್ದರು. ಸಲ್ಮಾನ್ ಖಾನ್ ಅವರ ಜೊತೆಯಲ್ಲಿ ನಟಿ ಸೋನಾಲಿ ಬೇಂದ್ರೆ, ತಬು, ನೀಲಂ, ಸೈಫ್ ಅಲಿ ಖಾನ್ ಮುಂತಾದವರಿದ್ದರು. ಎಲ್ಲರ ಮೇಲೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಲೂನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.












Click it and Unblock the Notifications