ದೇಶದ ಅತಿ ದೊಡ್ಡ ಉಕ್ಕು ಉತ್ಪಾದಕ ಸರಕಾರಿ ಕಂಪೆನಿ SAIL ಅಧ್ಯಕ್ಷರ ಮೇಲೆ ಹಲ್ಲೆ
ನವದೆಹಲಿ/ಬೆಂಗಳೂರು, ಆಗಸ್ಟ್ 8: ಭಾರತದ ಅತಿ ದೊಡ್ಡ ಸರಕಾರಿ ಸ್ವಾಮ್ಯದ್ ಉಕ್ಕು ಉತ್ಪಾದಕ ಕಂಪೆನಿ SAILನ (ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್) ಅಧ್ಯಕ್ಷರ ಮೇಲೆ ಬುಧವಾರ ರಾತ್ರಿ ಕೆಲವರು ನವದೆಹಲಿಯಲ್ಲಿ ಕಬ್ಬಿಣದ ರಾಡ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಐವತ್ತೆಂಟು ವರ್ಷದ ಅನಿಲ್ ಕುಮಾರ್ ಚೌಧರಿ ಅವರ ಮೇಲೆ ಹಲ್ಲೆ ನಡೆದಿದೆ.
ಅನಿಲ್ ಅವರು ಕೆಲಸದಿಂದ ಮನೆಗೆ ಹಿಂತಿರುಗುತ್ತಿದ್ದರು. ಆಗ ಮತ್ತೊಂದು ಕಾರು ಅನಿಲ್ ಅವರ ಕಾರಿಗೆ ಬಡಿದಿದೆ. ಅದರಲ್ಲಿ ನಾಲ್ಕು ಮಂದಿ ಇದ್ದರು ಎಂದು ಕಂಪೆನಿ ಹೇಳಿಕೆಯಲ್ಲಿ ತಿಳಿಸಲಾಗಿದೆ. "ಇದು ಆ ಕ್ಷಣದ ಪ್ರತಿಕ್ರಿಯೆ ಅಲ್ಲ ಎಂದು ನಮಗೆ ತಿಳಿದಿದೆ" ಎಂದು ಕಂಪೆನಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ದಾಳಿಯ ಹಿಂದಿನ ಕಾರಣ ಏನು ಎಂಬುದನ್ನು ಕಂಪೆನಿಯಿಂದ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಹೇಳಿಕೆಯಲ್ಲಿ ಕೂಡ ಯಾವುದೂ ವಿಸ್ತೃತವಾಗಿ ಹೇಳಿಲ್ಲ. ಜೂನ್ ತ್ರೈಮಾಸಿಕದ ಕಂಪೆನಿ ಫಲಿತಾಂಶವನ್ನು ಶುಕ್ರವಾರ ಘೋಷಣೆ ಮಾಡಬೇಕಿದೆ. ಅನಿಲ್ ಚೌಧರಿ ಅವರ ತಲೆ, ಕತ್ತು, ಮಂಡಿ ಹಾಗೂ ಕಾಲಿನ ಮೇಲೆ ಹಲ್ಲೆ ಮಾಡಲಾಗಿದ್ದು, ಈ ಘಟನೆಗೆ ಕಂಪೆನಿಯು ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದೆ.

ಅನಿಲ್ ಚೌಧರಿ ಅವರ ಚಾಲಕನಿಗೆ ಯಾವುದೇ ತೊಂದರೆ ಆಗಿಲ್ಲ. ಅನಿಲ್ ಅವರನ್ನು ಏಮ್ಸ್ ನ ಟ್ರೌಮಾ ಸೆಂಟರ್ ಗೆ ಕರೆದೊಯ್ದು, ಆ ನಂತರ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಕೂಡ ಮಾಡಲಾಗಿದೆ. ಇನ್ನು ಕಂಪೆನಿಯ ಮಾಹಿತಿ ಪ್ರಕಾರ; ಹಲ್ಲೆ ಮಾಡಿದವರ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications