ನಟ ಸೈಫ್ ಅಲಿಗೆ 'ಪದ್ಮಶ್ರೀ' ಕಳೆದುಕೊಳ್ಳುವ ಭೀತಿ!
ನವದೆಹಲಿ, ಮಾ.16: ಮುಂಬೈನ ಹೋಟೆಲ್ ವೊಂದರಲ್ಲಿ ವಿದೇಶಿ ಪ್ರಜೆಯೊಬ್ಬರಿಗೆ ಗೂಸಾ ಕೊಟ್ಟ ತಪ್ಪಿಗೆ ನಟ ಸೈಫ್ ಅಲಿ ಖಾನ್ ಅವರಿಗೆ ನೀಡಲಾಗಿರುವ ಪದ್ಮ ಶ್ರೀ ಪ್ರಶಸ್ತಿಯನ್ನು ಹಿಂಪಡೆಯಲು ಎನ್ ಡಿಎ ಸರ್ಕಾರ ಮುಂದಾಗಿದೆ ಎಂಬ ವರದಿ ಬಂದಿದೆ.
ಹೋಟೆಲ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶರ್ಮಿಳಾ ಠಾಗೋರ್ ಹಾಗೂ ನವಾಬ್ ಪಟೌಡಿ ಅವರ ಪುತ್ರ ಸೈಫ್ ಅಲಿ ಖಾನ್ ಅವರ ವಿರುದ್ಧ ಮುಂಬೈ ಪೊಲೀಸರು ಚಾರ್ಜ್ ಶೀಟ್ ದಾಖಲಿಸಿ ಮುಂಬೈ ಕೋರ್ಟೀಗೆ ಸಲ್ಲಿಸಿದ್ದಾರೆ. ಇದೇ ವಿಷಯವನ್ನು ಆಧಾರವಾಗಿಟ್ಟುಕೊಂಡು ಆರ್ ಟಿಐ ಕಾರ್ಯಕರ್ತರೊಬ್ಬರು ಪದ್ಮಶ್ರೀ ಹಿಂಪಡೆಯಬಾರದೇಕೆ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ. [ಸೈಫ್ ಅಲಿ ಖಾನ್ ಮೇಲೆ ಚಾರ್ಚ್ ಶೀಟ್]
ಆರ್ ಟಿಐ ಅರ್ಜಿ ನಂತರ ಪ್ರಕರಣ ವರದಿಯನ್ನು ತ್ವರಿತವಾಗಿ ನೀಡುವಂತೆ ಮುಂಬೈ ಪೊಲೀಸರನ್ನು ಕೇಂದ್ರ ಗೃಹ ಸಚಿವಾಲಯ ಕೇಳಿದೆ. ಈ ವರದಿ ಆಧಾರದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ.
ಆರ್ ಟಿಐ ಕಾರ್ಯಕರ್ತ ಸುಭಾಷ್ ಅಗರವಾಲ್ ಎಂಬುವರು ಆಗಸ್ಟ್ 20, 2014ರಂದು ಗೃಹ ಸಚಿವಾಲಯಕ್ಕೆ ಬರೆದಿರುವ ಪತ್ರ ಸಂಖ್ಯೆ 1/3112014 ನಲ್ಲಿ ಸೈಫ್ ಅಲಿ ಖಾನ್‌ಗೆ ನೀಡಿರುವ ಪದ್ಮ ಶ್ರೀ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂದು ಆರ್‌ಟಿಐ ಕಾರ್ಯಕರ್ತ ಮನವಿ ಮಾಡಿದ್ದಾರೆ.
ಉಳಿದಂತೆ ಅರುಣ್ ಫಿರೋಧಿಯಾ ಎಂಬುವರ ಮೇಲೆ ದೂರುಗಳು ಕೇಳಿ ಬಂದಿವೆ. ಸೈಫ್ ಅಲಿ ಖಾನ್ ಮೇಲೆ ಅನೇಕ ಕ್ರಿಮಿನಲ್ ಕೇಸ್ ಗಳಿವೆ ಎಂದು ದೂರಿನಲ್ಲಿ ಹೇಳಲಾಗಿದೆ. ಮುಂಬೈ ಪೊಲೀಸರ ವರದಿ ಬಂದ ಮೇಲೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ.
ಏನಿದು ಪ್ರಕರಣ?: ತಾಜ್ ಹೋಟೆಲಿನ ವಸಾಬಿ ರೆಸ್ಟೋರೆಂಟ್‌ನಲ್ಲಿ ಫೆಬ್ರವರಿ 22,2012ರಂದು ರಾತ್ರಿ ಭೋಜನ ಕೂಟದಲ್ಲಿ ಸೈಫ್ ತಮ್ಮ ಭಾವಿ ಪತ್ನಿ ಕರೀನಾ ಜೊತೆ ಪಾಲ್ಗೊಂಡಿದ್ದಾಗ ಗಲಾಟೆ ನಡೆದಿತ್ತು. ಹೋಟೆಲ್ ನಲ್ಲಿ ಏರು ಧ್ವನಿಯಲ್ಲಿ ಸೈಫ್ ಮಾತನಾಡುತ್ತಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇಕ್ಬಾಲ್ ಶರ್ಮಾ ಎಂಬ ಅನಿವಾಸಿ ಭಾರತೀಯ ಉದ್ಯಮಿ ವಿರುದ್ಧ ಮಾತಿನ ಚಕಮಕಿ ನಡೆದಿತ್ತು. ಮಾತಿಗೆ ಮಾತು ಬೆಳೆದು ಶರ್ಮಾ ಮುಖಕ್ಕೆ ಸೈಫ್ ಪಂಚ್ ಕೊಟ್ಟಿದ್ದರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಕೋರ್ಟಿನಲ್ಲಿ ಸೈಫ್ ವಿರುದ್ಧ ಚಾರ್ಜ್ ಶೀಟ್ ಹಾಕಲಾಗಿದೆ. [ವಿವರ ಇಲ್ಲಿ ಓದಿ]
2010ರಲ್ಲಿ ಶರ್ಮಿಳಾ ಠಾಗೋರ್ ಹಾಗೂ ನವಾಬ್ ಪಟೌಡಿ ಅವರ ಪುತ್ರ ಸೈಫ್ ಅಲಿ ಖಾನ್ ಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.
(ಒನ್ ಇಂಡಿಯಾ ಸುದ್ದಿ)