ನೂತನ ರೈಲ್ವೆ ಸಚಿವ ಸದಾನಂದ ಗೌಡರು ಹೇಳಿದ್ದೇನು?
ನವದೆಹಲಿ, ಮೇ 28 : ರೈಲ್ವೆ ಸುರಕ್ಷತೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ನೂತನ ಕೇಂದ್ರ ರೈಲ್ವೆ ಸಚಿವ ಡಿವಿ ಸದಾನಂದ ಗೌಡ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಗೋರಖ್ ಧಾಮ್ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಮಂಗಳವಾರ ಡಿವಿ ಸದಾನಂದ ಗೌಡ ರೈಲ್ವೆ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೋಮವಾರ ಗೋರಖ್ ಧಾಮ್ ರೈಲು ದುರಂತ ಸಂಭವಿಸಿ, 25 ಮಂದಿ ಸಾವಿಗೀಡಾಗಿದ್ದಾರೆ. ರೇಲ್ವೆ ಸುರಕ್ಷತೆಯು ಗಂಭೀರ ವಿಚಾರವಾಗಿದ್ದು, ಅದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು. ಪಿಟಿಐ ಚಿತ್ರ

ಮಾರ್ಗ ಸೂಚಿ ಸಿದ್ಧಪಡಿಸುವೆ : ಬುಧವಾರ ಗೋರಖ್ ಧಾಮ್ ರೈಲು ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಲಿದ್ದೇನೆ ಎಂದು ಹೇಳಿದ ಸದಾನಂದ ಗೌಡರು, ರೇಲ್ವೆ ಸಚಿವಾಲಯಕ್ಕೆ ಸಂಬಂಧಿಸಿದ ಮಾರ್ಗಸೂಚಿಯನ್ನು ಸದ್ಯದಲ್ಲೇ ಸಿದ್ಧಪಡಿಸುತ್ತೇನೆ ಎಂದರು. ರೇಲ್ವೆ ಇಲಾಖೆ ಅಭಿವೃದ್ಧಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ಆಲೋಚನೆಗಳನ್ನು ಹೊಂದಿದ್ದಾರೆ. ಅವರ ಸಲಹೆ ಪಡೆದು, ಅವುಗಳನ್ನು ಅನುಷ್ಠಾನಕ್ಕೆ ತರಲು ಪ್ರಯತ್ನ ನಡೆಸುತ್ತೇನೆ ಎಂದು ಹೇಳಿದರು.
ರೇಲ್ವೆ ಇಲಾಖೆಗೆ ಸಂಬಂಧಿಸಿದಂತೆ ಅನೇಕ ಸವಾಲುಗಳು ನಮ್ಮ ಮುಂದಿವೆ. ಅವುಗಳನ್ನು ಅರಿತುಕೊಂಡು, ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರ ಬದ್ಧವಾಗಿದೆ. ನರೇಂದ್ರ ಮೋದಿ ಚುನಾವಣಾ ಭಾಷಣದಲ್ಲಿ ತಿಳಿಸಿರುವ ಬುಲೆಟ್ ರೈಲಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಸದಾನಂದ ಗೌಡ, ಈ ಬಗ್ಗೆ ಪ್ರಧಾನಿ ಜತೆ ಚರ್ಚೆ ನಡೆಸುತ್ತೇನೆ ಎಂದರು. [ಗೋರಖ್ ಧಾಮ್ ದುರಂತ, 20 ಸಾವು]












Click it and Unblock the Notifications