ತರಕಾರಿ ಕತ್ತರಿಸುವ ಚಾಕು ಸಹ ಅನಾರೋಗ್ಯ ತರಬಹುದು. ಅಡುಗೆ ಮನೆಯಲ್ಲಿ ಅಡಗಿದ ಅಪಾಯ!
ಅಡುಗೆ ಮನೆಯಲ್ಲಿ ಪ್ರತಿದಿನ ಬಳಸುವ ಚಾಕುಗಳು ಸಹ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡಬಹುದು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಎಚ್ಚರಿಸಿದೆ. ತುಕ್ಕು ಹಿಡಿದ, ಮುರಿದ, ಗೀರು ಬಿದ್ದ ಅಥವಾ ತುಂಡಾದ ಅಂಚುಗಳನ್ನು ಹೊಂದಿರುವ ಚಾಕುಗಳನ್ನು ತಕ್ಷಣವೇ ಬದಲಾಯಿಸುವಂತೆ ಸಲಹೆ ನೀಡಿದೆ. ಈ ಮಾರ್ಗಸೂಚಿಗಳನ್ನು ಮುಖ್ಯವಾಗಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಆಹಾರ ವ್ಯಾಪಾರ ನಿರ್ವಾಹಕರಿಗೆ ನೀಡಲಾಗಿದ್ದರೂ, ಆರೋಗ್ಯ ತಜ್ಞರು ಹೇಳುವಂತೆ ಪ್ರತಿ ಮನೆಯ ಅಡುಗೆಮನೆಗೂ ತುಂಬಾ ಉಪಯುಕ್ತವಾಗಿವೆ.
ತುಕ್ಕು ಹಿಡಿದ ಚಾಕು ಅಪಾಯಕಾರಿ
ಅಡುಗೆ ಮಾಡುವಾಗ ಅನೇಕ ಜನರು ಚಾಕುವಿನ ಗುಣಮಟ್ಟದ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಆದರೆ, ತುಕ್ಕು ಹಿಡಿದ ಚಾಕುವಿನಿಂದ ತರಕಾರಿಗಳು, ಹಣ್ಣುಗಳು ಅಥವಾ ಮಾಂಸವನ್ನು ಕತ್ತರಿಸುವುದರಿಂದ ಆಹಾರ ಕಲುಷಿತವಾಗುತ್ತದೆ ಅಂದರೆ ಫುಡ್ ಪಾಯಿಸನ್ ಆಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ. ತುಕ್ಕುಹಿಡಿದಿರುವ ಚಾಕುವಿನಿಂದ ತರಕಾರಿ ಅಥವಾ ತಿನ್ನುವ ಪದಾರ್ಥಗಳನ್ನು ಕಟ್ ಮಾಡುವಾಗ ಸೂಕ್ಷ್ಮ ಲೋಹದ ಕಣಗಳು ಮತ್ತು ಚಾಕುವಿನ ಮೇಲೆ ರೂಪುಗೊಂಡ ಬ್ಯಾಕ್ಟೀರಿಯಾಗಳು ನೇರವಾಗಿ ಆಹಾರಕ್ಕೆ ಸೇರಬಹುದು. ಇವು ದೇಹವನ್ನು ಪ್ರವೇಶಿಸಿ ವಿವಿಧ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು.

ಹೆಚ್ಚುವುದು ಅಡ್ಡ ಮಾಲಿನ್ಯದ ಅಪಾಯ
ತುಕ್ಕು ಹಿಡಿದ ಚಾಕುವಿನ ಮೇಲ್ಮೈ ಒರಟಾಗುತ್ತದೆ. ಇದು ಸಣ್ಣ ಬಿರುಕುಗಳು ಮೂಡಲು ಕಾರಣವಾಗಬಹುದು. ಈ ಪ್ರದೇಶಗಳಲ್ಲಿ ಬ್ಯಾಕ್ಟೀರಿಯಾ, ಧೂಳು ಮತ್ತು ಕೊಳಕು ಸುಲಭವಾಗಿ ಸಂಗ್ರಹವಾಗಬಹುದು. ನಿಯಮಿತವಾಗಿ ತೊಳೆಯುವ ಮೂಲಕವೂ ಅವುಗಳನ್ನು ಸಂಪೂರ್ಣವಾಗಿ ತೆಗೆದು ಹಾಕಲು ಸಾಧ್ಯವಾಗುವುದಿಲ್ಲ. ಪರಿಣಾಮವಾಗಿ, ಅಡ್ಡ ಮಾಲಿನ್ಯದ ಅಪಾಯವು ಹೆಚ್ಚಾಗುತ್ತದೆ. ಅಂದರೆ ಒಂದು ಆಹಾರ ಪದಾರ್ಥದಿಂದ ಸೂಕ್ಷ್ಮಜೀವಿಗಳು ಇನ್ನೊಂದಕ್ಕೆ ವರ್ಗಾಯಿಸಲ್ಪಡುತ್ತವೆ. ಈ ಮೂಲಕ ಬ್ಯಾಕ್ಟೀರಿಯಾಗಳು ತ್ವರಿತವಾಗಿ ಹರಡಬಹುದು. ವಿಶೇಷವಾಗಿ ಆ ಚಾಕುವಿನಲ್ಲಿ ಹಿಂದೆ ಕಚ್ಚಾ ಮಾಂಸವನ್ನು ಕತ್ತರಿಸಿ ನಂತರ ಅದೇ ಚಾಕುವಿನಿಂದ ತರಕಾರಿ ಅಥವಾ ಹಣ್ಣುಗಳನ್ನು ಕತ್ತರಿಸಿದಾಗ ಈ ಅಪಾಯ ಇನ್ನೂ ಹೆಚ್ಚಾಗುತ್ತದೆ.
ಕೆಮಿಕಲ್ ರಿಯಾಕ್ಷನ್ ಭಯ
ಸೇಬು, ಟೊಮೆಟೊ, ನಿಂಬೆಹಣ್ಣು ಮತ್ತು ಕಿತ್ತಳೆ ಮುಂತಾದ ಆಮ್ಲೀಯ ಹಣ್ಣುಗಳು ಮತ್ತು ತರಕಾರಿಗಳನ್ನು ತುಕ್ಕು ಹಿಡಿದ ಚಾಕುವಿನಿಂದ ಕತ್ತರಿಸುವುದು ಇನ್ನೂ ಹೆಚ್ಚು ಅಪಾಯಕಾರಿ. ಆಮ್ಲೀಯ ವಸ್ತುಗಳು ತುಕ್ಕು ಜೊತೆ ರಾಸಾಯನಿಕವಾಗಿ ಪ್ರತಿಕ್ರಿಯಿಸಿ ಆಹಾರದ ಗುಣಮಟ್ಟವನ್ನು ಹಾಳುಮಾಡಬಹುದು. ಅಲ್ಲದೆ, ಕೋಳಿ, ಮೀನು, ಮಟನ್ ಮತ್ತು ಚೀಸ್ ನಂತಹ ಹೆಚ್ಚಿನ ತೇವಾಂಶವಿರುವ ಆಹಾರಗಳಲ್ಲಿ ಸೂಕ್ಷ್ಮಜೀವಿಗಳು ಬಹಳ ವೇಗವಾಗಿ ಬೆಳೆಯುವ ಅಪಾಯವಿದೆ. ವಿಶೇಷವಾಗಿ, ಸಲಾಡ್‌ಗಳು, ಫ್ರುಟ್ ಬೌಲ್‌ಗಳು ಮತ್ತು ಸ್ಯಾಂಡ್‌ವಿಚ್‌ಗಳಂತಹ ಬಿಸಿ ಮಾಡದೆ ಆಹಾರ ಪದಾರ್ಥಗಳನ್ನು ಸೇವಿಸುವಾಗ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ.
ಸ್ಟೇನ್‌ಲೆಸ್ ಸ್ಟೀಲ್ ಚಾಕು ಉತ್ತಮ ಆಯ್ಕೆ
ಸ್ಟೇನ್‌ಲೆಸ್ ಸ್ಟೀಲ್ ಚಾಕುವನ್ನು ದೀರ್ಘಕಾಲದವರೆಗೆ ಒದ್ದೆಯಾಗಿಟ್ಟರೆ ಅಥವಾ ತೊಳೆದ ನಂತರ ಸರಿಯಾಗಿ ಒಣಗಿಸದಿದ್ದರೆ ಅದು ತುಕ್ಕು ಹಿಡಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಡಾ. ಸೂರ್ಯಪ್ರಕಾಶ್ ಹೇಳಿದ್ದಾರೆ. ನಿಂಬೆ ರಸ, ಟೊಮೆಟೊ ಮತ್ತು ಉಪ್ಪನ್ನು ಒಳಗೊಂಡಿರುವ ಪದಾರ್ಥಗಳನ್ನು ಕತ್ತರಿಸಿದ ತಕ್ಷಣ ಚಾಕುವನ್ನು ಸ್ವಚ್ಛಗೊಳಿಸದಿದ್ದರೆ, ತುಕ್ಕು ಬೇಗನೆ ರೂಪುಗೊಳ್ಳುತ್ತದೆ ಎಂದು ಅವರು ವಿವರಿಸಿದ್ದಾರೆ.
ಚಾಕುವಿನ ಬ್ಲೇಡ್‌ನಲ್ಲಿ ಕಪ್ಪು ಅಥವಾ ಕೆಂಪು ತುಕ್ಕು ಕಾಣಿಸಿಕೊಂಡರೆ, ಅಂಚುಗಳು ಮುರಿದಿದ್ದರೆ ಅಥವಾ ಹ್ಯಾಂಡಲ್ ಸಡಿಲವಾಗಿದ್ದರೆ, ಅದನ್ನು ತಕ್ಷಣವೇ ಬದಲಾಯಿಸಬೇಕು ಎಂದು ತಜ್ಞರು ಸೂಚಿಸುತ್ತಾರೆ. ಹಳೆಯ ಚಾಕುವನ್ನು ಸ್ವಚ್ಛಗೊಳಿಸಿ ಮತ್ತೆ ಮತ್ತೆ ಬಳಸುವುದಕ್ಕಿಂತ ಹೊಸ ಸ್ಟೇನ್‌ಲೆಸ್ ಸ್ಟೀಲ್ ಚಾಕುವನ್ನು ಖರೀದಿಸುವುದು ಆರೋಗ್ಯಕ್ಕೆ ಉತ್ತಮ ಎಂದು ಅವರು ಹೇಳುತ್ತಾರೆ.
ಆಹಾರ ಸುರಕ್ಷತಾ ನಿಯಮ
ಮನೆಯ ಅಡುಗೆಮನೆಯಲ್ಲಿಯೂ ಕೆಲವು ಮೂಲಭೂತ ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ತಜ್ಞರು ಸೂಚಿಸುತ್ತಾರೆ. ಅಡುಗೆ ಮಾಡುವ ಮೊದಲು ಕೈಗಳನ್ನು ಚೆನ್ನಾಗಿ ತೊಳೆಯುವುದು, ಕಟಿಂಗ್ ಬೋರ್ಡ್‌ಗಳನ್ನು ಆಗಾಗ ಸ್ವಚ್ಛಗೊಳಿಸುವುದು, ಕಚ್ಚಾ ಆಹಾರ ಮತ್ತು ಬೇಯಿಸಿದ ಆಹಾರವನ್ನು ಪ್ರತ್ಯೇಕವಾಗಿ ಇಡುವುದು ಮತ್ತು ಉಳಿದ ಆಹಾರವನ್ನು ತಕ್ಷಣ ಫ್ರಿಡ್ಜ್‌ನಲ್ಲಿ ಸಂಗ್ರಹಿಸುವುದು ಮುಂತಾದ ಅಭ್ಯಾಸಗಳು ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಸಣ್ಣ ನಿರ್ಲಕ್ಷ್ಯವೂ ದೊಡ್ಡ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವುದರಿಂದ, ಅಡುಗೆ ಸಲಕರಣೆಗಳ ಶುಚಿತ್ವಕ್ಕೆ ವಿಶೇಷ ಗಮನ ನೀಡಬೇಕಾಗಿದೆ.


Click it and Unblock the Notifications
