ಸದ್ದಾಂ ಹುಸೇನ್, ಗಡಾಫಿ ಕೂಡ ಚುನಾವಣೆಯಲ್ಲಿ ಗೆಲ್ಲುತ್ತಿದ್ದರಲ್ಲವೇ?; ರಾಹುಲ್
ನವದೆಹಲಿ, ಮಾರ್ಚ್ 17: ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇರಾಕ್ ಸರ್ವಾಧಿಕಾರಿ ಸದ್ದಾಂ ಹುಸೇನ್ ಹಾಗೂ ಲಿಬಿಯಾ ಮುಅಮ್ಮರ್ ಗಡಾಫಿ ಅವರು ಕೂಡ ಚುನಾವಣೆ ಗೆಲ್ಲುತ್ತಿದ್ದರು ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಹಾಗೂ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಧಿಸದೇ ಇದ್ದರೆ ಈ 21ನೇ ಶತಮಾನದಲ್ಲಿ ಚುನಾವಣಾ ಪ್ರಜಾಪ್ರಭುತ್ವವನ್ನೇ ನಾಶಪಡಿಸಬಹುದು ಎಂದು ಹೇಳಿದ್ದಾರೆ.
ಬ್ರೌನ್ ವಿಶ್ವವಿದ್ಯಾಲಯದ ಆನ್‌ಲೈನ್ ಸಂವಾದದಲ್ಲಿ ರಾಹುಲ್ ಗಾಂಧಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ಕುರಿತು ಎರಡು ವಿದೇಶಿ ಸಂಸ್ಥೆಗಳು ವರದಿ ನೀಡಿದ್ದು, ಭಾರತದಲ್ಲಿ ಪ್ರಜಾಪ್ರಭುತ್ವ ಅವನತಿಯಾಗುತ್ತಿದೆ ಎಂದು ಆ ಅಧ್ಯಯನ ವರದಿ ಹೇಳಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಈ ವರದಿಗಿಂತಲೂ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದಿದ್ದಾರೆ.
ಸದ್ದಾಂ ಹುಸೇನ್ ಹಾಗೂ ಗಡಾಫಿ ಸಹ ಚುನಾವಣೆ ನಡೆಸುತ್ತಿದ್ದರು ಹಾಗೂ ಗೆಲುವು ಸಾಧಿಸುತ್ತಿದ್ದರು. ಅಲ್ಲಿ ಮತದಾನ ನಡೆಯುತ್ತಿಲ್ಲ ಎಂದಲ್ಲ. ಆದರೆ ಆ ಮತವನ್ನು ರಕ್ಷಿಸಲು ಯಾವುದೇ ಸಾಂವಿಧಾನಿಕ ಚೌಕಟ್ಟು ಇರಲಿಲ್ಲ ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ಕೆಲವು ಸಿದ್ಧಾಂತಗಳನ್ನು ಕಾಪಾಡುತ್ತಿದ್ದು, ಈ ಸಿದ್ಧಾಂತವನ್ನು ಕೆಲವರು ಇಷ್ಟಪಡುತ್ತಿಲ್ಲ ಎಂಬ ಕಾರಣಕ್ಕೆ ಅದನ್ನು ಬದಲಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಆರ್‌ಎಸ್‌ಎಸ್ ವಿರುದ್ಧ ತಮ್ಮ ಹೋರಾಟ ಮುಂದುವರೆಯುವುದಾಗಿಯೂ ತಿಳಿಸಿದ್ದಾರೆ. ಪಕ್ಷದಲ್ಲಿ ಪ್ರಜಾಪ್ರಭುತ್ವವನ್ನು ಕಾಪಾಡುತ್ತಿರುವುದಾಗಿಯೂ ತಿಳಿಸಿದ್ದಾರೆ.












Click it and Unblock the Notifications