ಕೋವಿಡ್: ಮೃತರ ಕುಟುಂಬಕ್ಕೆ ಪರಿಹಾರ, ದೆಹಲಿಯಲ್ಲಿ 4 ದಿನದಲ್ಲೇ 400 ಅರ್ಜಿ
ನವದೆಹಲಿ, ಜು.12: ದೆಹಲಿಯಲ್ಲಿ ಮುಖ್ಯಮಂತ್ರಿ ಕೋವಿಡ್ -19 ಕುಟುಂಬ ಹಣಕಾಸು ನೆರವು ಯೋಜನೆ ಪ್ರಾರಂಭವಾದ ಮೊದಲ ನಾಲ್ಕು ದಿನಗಳಲ್ಲಿ ಸುಮಾರು 400 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಸಮಾಜ ಕಲ್ಯಾಣ ಸಚಿವ ರಾಜೇಂದ್ರ ಪಾಲ್ ಗೌತಮ್, ''ಜುಲೈ 9 ರವರೆಗೆ 390 ಫಲಾನುಭವಿಗಳು ಈ ಯೋಜನೆಯಡಿ ಅರ್ಜಿ ಸಲ್ಲಿಸಿದ್ದಾರೆ, ಇದರಲ್ಲಿ ಮಾಸಿಕ ಪಿಂಚಣಿಗೆ 220 ಮತ್ತು ಎಕ್ಸ್ ಗ್ರೇಟಿಯಾ ಪಾವತಿಗೆ 170 ಸೇರಿದೆ,'' ಎಂದು ತಿಳಿಸಿದ್ದಾರೆ.
ಜುಲೈ 6 ರಂದು ಘೋಷಿಸಲಾದ ಯೋಜನೆಯ ಭಾಗವಾಗಿ, ಕೋವಿಡ್ -19 ಕಾರಣದಿಂದ ಸಾವನ್ನಪ್ಪಿದ ಪ್ರತಿ ಕುಟುಂಬ ಸದಸ್ಯರಿಗೆ 50,000 ರೂ. ಲಭಿಸಲಿದೆ. ತನ್ನ ಒಂದು ಕುಟುಂಬಕ್ಕೆ ಸರ್ಕಾರ ತಿಂಗಳಿಗೆ 2,500 ರು. ನೀಡಲಿದೆ. ಇಬ್ಬರೂ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ 25 ವರ್ಷದವರೆಗೆ ತಿಂಗಳಿಗೆ 2,500 ರು. ಸರ್ಕಾರ ನೀಡಲಿದೆ.

ಪ್ರತಿ ಪೀಡಿತ ಕುಟುಂಬದ ಸದಸ್ಯರನ್ನು ನಾಗರಿಕ ರಕ್ಷಣಾ ಸ್ವಯಂಸೇವಕರಾಗಿ ದಾಖಲಿಸಲಾಗುವುದು ಮತ್ತು ಅವಲಂಬಿತ ಮಕ್ಕಳ ಶಿಕ್ಷಣ ಮತ್ತು ವೈದ್ಯಕೀಯ ಆರೈಕೆಯನ್ನು ಸರ್ಕಾರ ನೋಡಿಕೊಳ್ಳುತ್ತದೆ.
''ಫಲಾನುಭವಿಗಳಿಗೆ ಸಹಾಯ ಮಾಡಲು, ಅರ್ಜಿ ಪ್ರಕ್ರಿಯೆಯನ್ನು ತ್ವರಿತವಾಗಿ ಟ್ರ್ಯಾಕ್ ಮಾಡಲಾಗುತ್ತದೆ,'' ಎಂದು ಗೌತಮ್ ಹೇಳಿದ್ದಾರೆ.
''ಫಲಾನುಭವಿಗಳು ಮೊದಲು edistrict.delhigovt.nic.in ನಲ್ಲಿ ನೋಂದಾಯಿಸಿಕೊಳ್ಳಬೇಕಾಗಿದೆ. ಫಲಾನುಭವಿಗಳು ಅರ್ಜಿಯನ್ನು ಭರ್ತಿ ಮಾಡಲು ನಾವು ಕಾಯುವುದಿಲ್ಲ. ನಮ್ಮ ಪ್ರತಿನಿಧಿಗಳು ಮನೆ ಮನೆಗೆ ತೆರಳಿ ಫಾರ್ಮ್ ಭರ್ತಿ ಮಾಡಲು ಸಹ ಸಹಾಯ ಮಾಡುತ್ತಾರೆ,'' ಎಂದಿದ್ದಾರೆ.
''ಈ ಸಮಯದಲ್ಲಿ ನಾವು ಆದಷ್ಟು ಬೇಗ ಕುಟುಂಬಗಳಿಗೆ ಸಹಾಯ ಮಾಡಲು ಬಯಸುತ್ತೇವೆ. ನಮ್ಮ ಪ್ರತಿನಿಧಿಗಳು ತಮ್ಮ ದಾಖಲೆಯಲ್ಲಿ ಯಾವುದೇ ದೋಷ ಕಂಡು ಬರದಂತೆ ಅರ್ಜಿ ಭರ್ತಿ ಮಾಡಲು ಸಹಾಯ ಮಾಡುತ್ತಿದ್ದಾರೆ,'' ಎಂದು ಮಾಹಿತಿ ನೀಡಿದ್ದಾರೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications