ಬಾವಿ ವೃತ್ತಾಕಾರದಲ್ಲಿಯೇ ಯಾಕಿರುವುದು? ಇದರ ಹಿಂದಿದೆ ವೈಜ್ಞಾನಿಕ ಕಾರಣ
ಭೂಮಿಯ ಒಳಗಿರುವ ಅಂತರ್ಜಲವನ್ನು ಪಡೆಯಲು ನೆಲವನ್ನು ಆಳವಾಗಿ ತೋಡಿ ನಿರ್ಮಿಸುವ ಒಂದು ಸಾಂಪ್ರದಾಯಿಕ ನೀರಿನ ಮೂಲವೇ ಬಾವಿ. ಶತಮಾನಗಳಿಂದಲೂ ಬಾವಿ ನೀರಿನ ಗಮನಾರ್ಹ ಮೂಲವಾಗಿದೆ. ಪ್ರಾಚೀನ ಕಾಲದಿಂದಲೂ ಜನರು ತಮ್ಮ ದೈನಂದಿನ ನೀರಿನ ಅಗತ್ಯಗಳನ್ನು ಪೂರೈಸಲು ಬಾವಿಗಳನ್ನು ಅವಲಂಬಿಸಿದ್ದಾರೆ. ಅಗತ್ಯಕ್ಕೆ ಅನುಗುಣವಾಗಿ ಬಾವಿಗಳನ್ನು ಮನೆ, ಹೊಲಗಳು ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿಯೂ ನಿರ್ಮಿಸಲಾಗಿರುತ್ತದೆ. ನೀರು ಧಾರಳವಾಗಿ ಸಿಗುವ ಜಾಗದಲ್ಲಿ ಪ್ರತಿ ಮನೆಗೊಂದರಂತೆ ಬಾವಿ ಇರುತ್ತದೆ. ಬಾವಿ ಅಂದ ಕೂಡಲೇ ಮನಸ್ಸಿಗೆ ಬರುವ ಮೊದ ಚಿತ್ರಣವೇ ದುಂಡಗಿನ ಅಥವಾ ವೃತ್ತಾಕಾರ. ನೀವು ನೋಡಿದ ಬಹುತೇಕ ಎಲ್ಲಾ ಬಾವಿಗಳು ವೃತ್ತಾಕಾರವನ್ನೇ ಹೊಂದಿರುವುದನ್ನು ನೀವು ಗಮನಿಸಸಿರಬಹುದು.
ಆಧುನಿಕ ನೀರು ತೆಗೆದುಕೊಳ್ಳುವ ಬಾವಿಯಾಗಲಿ ಅಥವಾ ಗ್ರಾಮೀಣ ಪ್ರದೇಶದಲ್ಲಿ ಸಾಂಪ್ರದಾಯಿಕ ಕೈಯಿಂದ ತೋಡುವ ಬಾವಿಯಾಗಿರಲಿ ಅದರ ಆಕಾರವು ಒಂದೇ ಆಗಿರುತ್ತದೆ. ಎಲ್ಲಿಯೂ ಚೌಕ, ಆಯತಾಕಾರದ ಬಾವಿಗಳು ಇರುವುದೇ ಇಲ್ಲ. ಈ ವ್ಯಾಪಕ ವಿನ್ಯಾಸವು ಆಳವಾದ ಅರ್ಥವನ್ನು ಹೊಂದಿದೆಯೇ ಅಥವಾ ಇದು ಕೇವಲ ಸಂಪ್ರದಾಯಕ್ಕೆ ಸಂಬಂಧಿಸಿದ್ದಾ? ಎನ್ನುವ ಕುತೂಹಲ ಇಲ್ಲಿ ನಿಮ್ಮನ್ನೂ ಕಾಡಬಹುದು. ನಿಮ್ಮ ಕುತೂಹಲಕ್ಕೆ ಉತ್ತರ ಇಲ್ಲಿದೆ. ಹೌದು, ಬಾವಿ ದುಂಡಗಿರುವುದರ ಹಿಂದಿರುವುದು ವೈಜ್ಞಾನಿಕ ಕಾರಣ.

ವೈಜ್ಞಾನಿಕ ಮತ್ತು ಐತಿಹಾಸಿಕ ಸೇರಿದಂತೆ ಐದು ಕಾರಣಗಳು ಇಲ್ಲಿವೆ.
1. ಸಾಮರ್ಥ್ಯ ಮತ್ತು ಒತ್ತಡ ವಿತರಣೆ:
ವೃತ್ತಾಕಾರದ ಬಾವಿಗಳ ಸುತ್ತಲಿನ ನೀರು ಮತ್ತು ಮಣ್ಣಿನ ಒತ್ತಡವು ಏಕರೂಪವಾಗಿ ವಿತರಿಸಲ್ಪಡುತ್ತದೆ. ಚೌಕಾಕಾರದ ಬಾವಿಗಳ ಸುತ್ತಲಿನ ಸ್ಥಳ ದುರ್ಬಲವಾಗಿರುತ್ತದೆ.ಅಲ್ಲಿ ಒತ್ತಡ ಹೆಚ್ಚಾದಾಗ ಯಾಔ ಸಂದರ್ಭದಲ್ಲಿ ಬೇಕಾದರೂ ಬಾವಿ ಕುಸಿಯಬಹುದು. ಅಥವಾ ಬಿರುಕುಗಳಿಗೆ ಕಾರಣವಾಗಬಹುದು. ಇದು ಯಾವತ್ತಿದ್ದರೂ ಅಪಾಯವೇ.
2. ನಿರ್ಮಾಣ ಕಾರ್ಯ ಸುಲಭ, ಸರಸಳ:
ವೃತ್ತಾಕಾರದ ಬಾವಿಯನ್ನು ಅಗೆಯುವುದು ಸುಲಭ. ಇದಕ್ಕೆ ಕಡಿಮೆ ಸುಧಾರಿತ ಉಪಕರಣಗಳಿದ್ದರೆ ಸಾಕಾಗುತ್ತದೆ. ಅಗೆಯುವಾಗ, ವೃತ್ತಾಕಾರದ ಆಕಾರಗಳಿಂದಾಗಿ ಕೆಲಸಗಾರರು ಹೆಚ್ಚು ಸುಲಭವಾಗಿ ಚಲಿಸಬಹುದು.
3. ಕಡಿಮೆ ವಸ್ತುಗಳ ಬಳಕೆ:
ಒಂದೇ ಸುತ್ತಳತೆಯಿರುವ ಚೌಕಾಕಾರದ ಬಾವಿಗಳಿಗೆ ಹೋಲಿಸಿದರೆ, ವೃತ್ತಾಕಾರದ ಬಾವಿಗಳು ಹೆಚ್ಚು ನೀರನ್ನು ಹಿಡಿದಿಟ್ಟುಕೊಳ್ಳಬಲ್ಲವು. ವೃತ್ತಾಕಾರದ ಗೋಡೆಗಳ ನಿರ್ಮಾಣಕ್ಕೆ ಕಡಿಮೆ ಕಟ್ಟಡ ಸಾಮಗ್ರಿಗಳು ಬೇಕಾಗುತ್ತವೆ. ಚೌಕಾಕಾರ, ಆಯತಾಕಾರದಲ್ಲಿ ಬಾವಿ ನಿರ್ಮಾಣ ಮಾಡಿದರೆ ಕುಸಿತದ ಭಯ ಒಂದೆಡೆಯಾದರೆ ಅದಕ್ಕೆ ತಗಲುವ ಸಾಮಗ್ರಿಗಳು ಕೂಡಾ ಅಧಿಕವಾಗಿರುತ್ತದೆ.
4. ಬಾಳಿಕೆ ಮತ್ತು ಸುರಕ್ಷತೆ:
ಬಾವಿ ವೃತ್ತಾಕಾರದಲ್ಲಿದ್ದರೆ ಮಣ್ಣಿನ ಸವೆತ ಮತ್ತು ಚಲನೆಯನ್ನು ವಿರೋಧಿಸಲು ಬಲವಾಗಿರುತ್ತವೆ. ಎಷ್ಟೇ ಕಾಲ ಕಳೆದರೂ ಅವು ಒಡೆಯುವ ಅಥವಾ ಕುಸಿಯುವ ಸಾಧ್ಯತೆ ಕಡಿಮೆ. ಇದಕ್ಕೆ ಬದಲಾಗಿ ಬೇರೆ ವಿನ್ಯಾಸದಲ್ಲಿ ಬಾವಿ ತೋಡಿ ಗೋಡೆ ಕಟ್ಟಿದರೆ ಮಣ್ಣಿನ ಸವೆತದಿಂದ ಕುಸಿಯುವ ಭಯ ನಿರಂತರವಾಗಿರುತ್ತದೆ.
5. ಐತಿಹಾಸಿಕ ಮತ್ತು ಪ್ರಾಯೋಗಿಕ ವಿನ್ಯಾಸ:
ವೃತ್ತಾಕಾರದ ಬಾವಿಗಳು ಪ್ರಾಚೀನ ಕಾಲದಿಂದಲೂ ಪ್ರಯತ್ನಿಸಿದ ಮತ್ತು ನಿಜವಾದ ವಿನ್ಯಾಸವಾಗಿದೆ. ಬಾವಿ ದುಂಡಗಿನ ಆಕಾರದಲ್ಲಿ ಇರುವುದರಿಂದ ಹಗ್ಗ ಮತ್ತು ರಾಟೆಯ ಮೂಲಕ ನೀರನ್ನು ಮೇಲಕ್ಕೆತ್ತುವ ಕೆಲಸ ಸುಲಭವಾಗಿ ಆಗುತ್ತದೆ. ಇದನ್ನು ನಿರ್ವಹಿಸುವುದು ಕೂಡಾ ಕಷ್ಟವೇನಲ್ಲ.
ವಿಜ್ಞಾನ ಮತ್ತು ಪ್ರಾಯೋಗಿಕತೆ ಹಾಗೂ ಸಂಪ್ರದಾಯದಿಂದಾಗಿ ಬಾವಿಗಳು ವೃತ್ತಾಕಾರದಲ್ಲಿರುತ್ತವೆ. ಅವುಗಳ ಆಕಾರ ದುಂಡಗಿರುವುದರಿಂದ ಅವು ಸುರಕ್ಷಿತ, ನಿರ್ಮಿಸಲು ಸುಲಭ, ಹೆಚ್ಚು ನೀರನ್ನು ಸಂಗ್ರಹಿಸುವಲ್ಲಿ ಪರಿಣಾಮಕಾರಿಯಾಗಿರುತ್ತದೆ. ಈ ಕಾರಣಕ್ಕಾಗಿ, ಈ ವಿಶ್ವಾಸಾರ್ಹ ಆಕಾರದಲ್ಲಿರುವ ಬಾವಿಗಳನ್ನು ಪ್ರಪಂಚದಾದ್ಯಂತದ ಜನರು ತಲೆಮಾರುಗಳಿಂದ ನಿರ್ಮಿಸುತ್ತಿದ್ದಾರೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications