ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಬಗ್ಗೆ ವಕ್ತಾರರಿಂದ ಮಹತ್ವದ ಹೇಳಿಕೆ
ನವದೆಹಲಿ, ಜೂನ್ 12: ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ರಾಹುಲ್ ಗಾಂಧಿ ಅವರು ಇಷ್ಟಪಡುತ್ತಿಲ್ಲ, ಅವರ ಬದಲಿಗೆ ಬೇರೊಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂಬ ಸುದ್ದಿಯನ್ನು ಪಕ್ಷದ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ ಅಲ್ಲಗೆಳೆದಿದ್ದಾರೆ.
ರಾಹುಲ್ ಗಾಂಧಿ ಅವರು ನಮ್ಮ ಅಧ್ಯಕ್ಷರಾಗಿದ್ದರು, ಅಧ್ಯಕ್ಷರಾಗಿದ್ದಾರೆ, ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಜೂನ್ 12ರಂದು ರಣದೀಪ್ ಸುರ್ಜೇವಾಲ ಹೇಳಿದ್ದಾರೆ.
ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ಕುರಿತಂತೆ ಪಕ್ಷದ ಕಾರ್ಯತಂತ್ರ ಕುರಿತು ಹಿರಿಯ ನಾಯಕ ಎಕೆ ಎಂಟನಿ ನೇತೃತ್ವದಲ್ಲಿ ಅನೌಪಚಾರಿಕ ಸಭೆ ನಡೆದ ಬಳಿಕ ರಾಹುಲ್ ಅವರ ಅಧ್ಯಕ್ಷ ಸ್ಥಾನದ ಬಗ್ಗೆ ಹಬ್ಬಿದ ಸುದ್ದಿಗೆ ರಣದೀಪ್ ಅವರು ಪ್ರತಿಕ್ರಿಯಿಸಿದ್ದಾರೆ.

ಲೋಕಸಭೆ ಚುನಾವಣೆ 2019ರಲ್ಲಿ ಕಾಂಗ್ರೆಸ್ ಪಕ್ಷದ ಕಳಪೆ ಪ್ರದರ್ಶನದ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಮೇ 25ರಂದು ರಾಹುಲ್ ಗಾಂಧಿ ಘೋಷಿಸಿದ್ದರು. ಆದರೆ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಒಕ್ಕೊರಲಿನಿಂದ ರಾಹುಲ್ ಗಾಂಧಿ ರಾಜೀನಾಮೆಯನ್ನು ತಿರಸ್ಕರಿಸಿತ್ತು.
ಅನೌಪಚಾರಿಕ ಸಭೆಯಲ್ಲಿ ಹಿರಿಯ ನಾಯಕರಾದ ಅಹ್ಮದ್ ಪಟೇಲ್, ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಅಜಾದ್, ಪಿ ಚಿದಂಬರಂ, ಕೆಸಿ ವೇಣುಗೋಪಾಲ್, ಜೈರಾಮ್ ರಮೇಶ್, ಅನಂದ್ ಶರ್ಮ ಅವರು ಪಾಲ್ಗೊಂಡಿದ್ದರು.
ಲೋಕಸಭೆ ಚುನಾವಣೆ 2019ಯಲ್ಲಿ ಕಾಂಗ್ರೆಸ್ 52 ಸ್ಥಾನ ಪಡೆದಿದ್ದು, ರಾಹುಲ್ ಅವರು ಅಮೇಥಿಯಲ್ಲಿ ಸೋಲು ಕಂಡು, ವಯನಾಡಿನಲ್ಲಿ ಗೆಲುವು ಸಾಧಿಸಿದ್ದಾರೆ.(ಪಿಟಿಐ)












Click it and Unblock the Notifications