ನಾನೇನು ತಪ್ಪು ಮಾಡಿಲ್ಲ, ರಾಹುಲ್ ಗಾಂಧಿ ಉತ್ತರ!
ನವದೆಹಲಿ, ನ.8 : ಮುಜಾಫರ್‌ನಗರ ಮುಸ್ಲಿಂ ಯುವಕರ ಕುರಿತ ವಿವಾದಾತ್ಮಕ ಹೇಳಿಕೆ ಸಂಬಂಧಿಸಿದಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಚುನಾವಣಾ ಆಯೋಗಕ್ಕೆ ಶುಕ್ರವಾರ ನಾಲ್ಕು ಪುಟಗಳ ಸುದೀರ್ಘ ಉತ್ತರ ನೀಡಿದ್ದಾರೆ. ತಾವು ಚುನಾವಣಾ ನೀತಿ ಸಂಹಿತೆ ವಿರೋಧಿಸಿಲ್ಲ ಎಂದು ಸಮರ್ಥನೆ ನೀಡಿದ್ದಾರೆ.
ಅ.23 ಹಾಗೂ 24ರಂದು ರಾಜಸ್ತಾನದ ಚುರು ಹಾಗೂ ಮಧ್ಯಪ್ರದೇಶದ ಇಂದೋರ್‌ನಲ್ಲಿ ಮಾಡಿದ್ದ ಚುನಾವಣಾ ಪ್ರಚಾರ ಭಾಷಣ ಮಾಡಿದ್ದ ರಾಹುಲ್ ಗಾಂಧಿ ಉತ್ತರ ಪ್ರದೇಶದ ಮುಜಾಫರನಗರ ಸಂತ್ರಸ್ತರನ್ನು ಪಾಕಿಸ್ತಾನ ಐಎಸ್‌ಐನ ಏಜೆಂಟರು ಸಂಪರ್ಕಿಸುತ್ತಿದ್ದಾರೆ ಎಂಬ ವಿವಾದಾತ್ಮಹ ಹೇಳಿಕೆ ನೀಡಿದ್ದರು. ಬಿಜೆಪಿ ಇದರಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.

ನ.4ರಂದು ಕೇಂದ್ರ ಚುನಾವಣಾ ಆಯೋಗ ರಾಹುಲ್ ಗಾಂಧಿ ಅವರಿಗೆ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ವಿವರಣೆ ನೀಡುವಂತೆ ನೋಟಿಸ್ ಜಾರಿಗೊಳಿಸಿ, ನಾಲ್ಕು ದಿನಗಳ ಕಾಲಾವಕಾಶ ನೀಡಿತ್ತು. ಶುಕ್ರವಾರ ರಾಹುಲ್ ಗಾಂಧಿ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಸುದೀರ್ಘ ವಿವರಣೆ ನೀಡಿದ್ದಾರೆ ಮತ್ತು ತಾವು ನೀತಿ ಸಂಹಿತೆ ಉಲ್ಲಂಘಿಸಿಲ್ಲ ಎಂದು ಸಮರ್ಥನೆ ನೀಡಿದ್ದಾರೆ.
ರಾಹುಲ್ ಗಾಂಧಿ ಅವರಿಗೆ ಉತ್ತರ ನೀಡಲು ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ಬೆಳಗ್ಗೆ 11.30ರ ಅಂತಿಮ ಗಡುವು ನೀಡಿತ್ತು. ಗಡುವು ಮುಕ್ತಾಯವಾಗಲು ಕೆಲವೇ ಗಂಟೆಗಳ ಮೊದಲು ರಾಹುಲ್ ಗಾಂಧಿ ತಮ್ಮ ಉತ್ತರವನ್ನು ಆಯೋಗಕ್ಕೆ ಸಲ್ಲಿಸಿದ್ದಾರೆ. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅವರು, ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ನಾಲ್ಕು ಪುಟಗಳ ಉತ್ತರದಲ್ಲಿ ರಾಹುಲ್ ಗಾಂಧಿ, ನಾನು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿಲ್ಲ. ಕೋಮುಗಲಭೆ ಸೃಷ್ಟಿಸುವ ಉದ್ದೇಶದಿಂದ ಈ ರೀತಿಯ ಹೇಳಿಕೆಗಳನ್ನು ನೀಡಿಲ್ಲ ಎಂದು ಸಮರ್ಥನೆ ನೀಡಿದ್ದಾರೆ. ದೇಶದಲ್ಲಿ ಜನರ ನಡುವೆ ಒಡಕು ಮೂಡಿಸಬೇಕು ಎಂಬ ಉದ್ದೇಶದ ನನ್ನ ಹೇಳಿಕೆಯಲ್ಲಿರಲಿಲ್ಲ. ಕಾಂಗ್ರೆಸ್ ಪಕ್ಷದ ಸಿದ್ಧಾಂತ, ನೀತಿಗಳು ಮತ್ತು ಕಾರ್ಯಕ್ರಮಗಳ ಕುರಿತಾಗಿ ಮಾತ್ರ ಜನರಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.
ಕೇಂದ್ರ ಚುನಾವಣಾ ಆಯೋಗ ರಾಹುಲ್ ಗಾಂಧಿ ಅವರ ಉತ್ತರವನ್ನು ಪರಿಶೀಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಿದೆ. ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ರಾಹುಲ್ ಗಾಂಧಿ ಈ ಹೇಳಿಕೆಗೆ ಪ್ರತಿಪಕ್ಷಗಳು ಸಹ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ರಾಹುಲ್ ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಉತ್ತರ ಬರೆದಿದ್ದಾರೆ.












Click it and Unblock the Notifications