ಏಪ್ರಿಲ್ ತಿಂಗಳಲ್ಲಿ ರಾಹುಲ್ ಗಾಂಧಿಗೆ ಪಟ್ಟಾಭಿಷೇಕ!
ನವದೆಹಲಿ, ಫೆ.25: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಎಲ್ಲಿದ್ದಾರೆ ಎಂಬ ಪ್ರಶ್ನೆಯ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಸೋನಿಯಾ ಗಾಂಧಿ ಕೆಳಗಿಳಿಯಲು ಮುಹೂರ್ತ ಫಿಕ್ಸ್ ಆಗಿರುವ ಸುದ್ದಿ ಬಂದಿದೆ.
ಏಪ್ರಿಲ್ ತಿಂಗಳಿನಲ್ಲಿ ಕಾಂಗ್ರೆಸ್ಸಿನ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಪಟ್ಟಾಭಿಷೇಕ ನಡೆಯಲಿದೆ ಎಂದು ಎನ್ ಡಿ ಟಿವಿ ವರದಿ ಮಾಡಿದೆ. ಸೋನಿಯಾ ಗಾಂಧಿ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ನಿರೀಕ್ಷೆ ಎಲ್ಲರಲ್ಲೂ ಇದೆ. ಅದರೆ, ಯಾವಾಗ ಎಂಬ ಕುತೂಹಲ ಎಲ್ಲರಲ್ಲೂ ಇದೆ.
1998ರಿಂದ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿರುವ ಸೋನಿಯಾ ಗಾಂಧಿ ಅವರು ಪಕ್ಷದ ಅಧ್ಯಕ್ಷ ಸ್ಥಾನವನ್ನು ತೊರೆದರೂ ಕಾಂಗ್ರೆಸ್ ನ ಸಂಸದೀಯ ಪಕ್ಷದ ಚೇರ್ಮನ್ ಆಗಿ ಮುಂದುವರೆಯಲಿದ್ದಾರೆ. ರಾಹುಲ್ ಗಾಂಧಿ ಅವರನ್ನು ತಿದ್ದಿತೀಡಲು ಹಿರಿಯ ಕಾಂಗ್ರೆಸ್ಸಿಗರನ್ನು ಅವರ ಸುತ್ತ ಮುತ್ತ ಸೇರಿಸುವ ಯೋಜನೆ ಸೋನಿಯಾ ಅವರ ತಲೆಯಲ್ಲಿದೆ.[ರಾಹುಲ್ ಗಾಂಧಿ ಉತ್ತರಾಖಂಡ್ 'ಟೆಂಟ್' ನಲ್ಲಿ ಪತ್ತೆ!]

ಜನವರಿ 2013ರಲ್ಲಿ ಅಮೇಥಿ ಸಂಸದ ರಾಹುಲ್ ಗಾಂಧಿ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಏರಿಸಲಾಯಿತು. ಜೈಪುರದಲ್ಲಿ ನಡೆದ ಎಐಸಿಸಿ ಸಭೆಯಲ್ಲಿ ರಾಹುಲ್ ಗಾಂಧಿಗೆ ಉನ್ನತ ಸ್ಥಾನ ಸಿಕ್ಕಿತು.
Sonia Gandhi on Rahul Gandhi : When he will be made the President of the party, you will be informed
— ANI (@ANI_news) February 26, 2015 2007ರಲ್ಲಿ ರಾಹುಲ್ ಗಾಂಧಿ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಅದೇ ವರ್ಷ ಭಾರತೀಯ ಯುವ ಕಾಂಗ್ರೆಸ್ ಹಾಗೂ ರಾಷ್ಟ್ರೀಯ ವಿದ್ಯಾರ್ಥಿ ಯೂನಿಯನ್ ನ ಅಧ್ಯಕ್ಷ ಸ್ಥಾನವೂ ರಾಹುಲ್ ಗೆ ಲಭಿಸಿತು.
ರಾಜಕೀಯ ಬದುಕಿನಲ್ಲಿ ಏರಿಳಿತ ಕಂಡಿರುವ ರಾಹುಲ್ ಗಾಂಧಿ ಅವರ ಕಾರ್ಯಕ್ಷಮತೆ ಈಗ ಉತ್ತಮ ಲಯದಲ್ಲಿಲ್ಲ. 2013ರಿಂದ ಸತತವಾಗಿ ಸೋಲುಗಳನ್ನೇ ಕಂಡಿದ್ದಾರೆ. ಲೋಕಸಭೆ ಚುನಾವಣೆ, ಅಸೆಂಬ್ಲಿ ಚುನಾವಣೆ ಹಾಗೂ ತೀರಾ ಇತ್ತೀಚಿನ ದೆಹಲಿ ಚುನಾವಣೆ ನೀಡಿರುವ ಆಘಾತಕಾರಿ ಫಲಿತಾಂಶದಿಂದ ಕಾಂಗ್ರೆಸ್ ಇನ್ನೂ ಚೇತರಿಸಿಕೊಂಡಿಲ್ಲ.
ರಾಹುಲ್ ಗಾಂಧಿ ಬದಲಿಗೆ ಪ್ರಿಯಾಂಕಾ ಗಾಂಧಿ ಅವರನ್ನು ಪಕ್ಷದ ಉನ್ನತ ಸ್ಥಾನಕ್ಕೇರಿಸುವಂತೆ ಕಾರ್ಯಕರ್ತರು ನಿರಂತರವಾಗಿ ಆಗ್ರಹಿಸುತ್ತಿದ್ದಾರೆ. ಎಲ್ಲಕ್ಕೂ ಉತ್ತರ ಏಪ್ರಿಲ್ ನಲ್ಲಿ ದಕ್ಷಿಣ ಭಾರತ(ಬಹುಶಃ ಬೆಂಗಳೂರಿನಲ್ಲಿ ನಡೆಯುವ ಸಭೆ)ದ ಎಐಸಿಸಿ ಸಭೆಯಲ್ಲಿ ಎಲ್ಲವೂ ನಿರ್ಧಾರವಾಗಲಿದೆ.












Click it and Unblock the Notifications