ಪಕ್ಷದ ಹಿರಿಯ ನಾಯಕರೊಂದಿಗೆ ಪ್ರಿಯಾಂಕಾ ಗಾಂಧಿ ಸಭೆ!
ನವದೆಹಲಿ, ಜ.7 : ಕಾಂಗ್ರೆಸ್ ಪಕ್ಷದಲ್ಲಿ ಬಿರುಸಿನ ಚಟುವಟಿಕೆಗಳು ಆರಂಭಗೊಂಡಿದ್ದು, ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ಕಾರ್ಯಕ್ಕೆ ತಯಾರಿ ಆರಂಭವಾಗಿದೆ. ಮಂಗಳವಾರ ಪ್ರಿಯಾಂಕಾ ಗಾಂಧಿ ಪಕ್ಷದ ಹಿರಿಯ ನಾಯಕರ ಸಭೆ ನಡೆಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ಮಂಗಳವಾರ ರಾಹುಲ್ ಗಾಂಧಿ ಅವರ ನಿವಾಸದಲ್ಲಿ ಕಾಂಗ್ರೆಸ್ ಪಕ್ಷದ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್, ಕೇಂದ್ರ ಸಚಿವ ಜೈರಾಂ ರಮೇಶ್ ಮತ್ತು ಹಿರಿಯ ನಾಯಕ ಜನಾರ್ದನ್ ದ್ವಿವೇದಿ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.

ಜನವರಿ 17ರಂದು ಕಾಂಗ್ರೆಸ್ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಅಂದು ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಹಬ್ಬಿದೆ. ಇದಕ್ಕೆ ಪೂರ್ವಭಾವಿಯಾಗಿ ಮಂಗಳವಾರ ಪ್ರಿಯಾಂಕಾ ಗಾಂಧಿ ಪಕ್ಷದ ಹಿರಿಯ ನಾಯಕರ ಸಭೆಯನ್ನು ನಡೆಸಿದ್ದಾರೆ. [ರಾಹುಲ್ ಪ್ರಧಾನಿ ಅಭ್ಯರ್ಥಿ ಜ.17ಕ್ಕೆ ಘೋಷಣೆ]
ದೇಶದಲ್ಲಿ ಒಂದು ಕಡೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಅಲೆ ಎದ್ದಿದೆ. ಮತ್ತೊಂದು ಕಡೆ ಆಮ್ ಆದ್ಮಿ ಅರವಿಂದ್ ಕೇಜ್ರಿವಾಲ್ ದೆಹಲಿ ಗದ್ದುಗೆ ಏರುವ ಮೂಲಕ ಯುವಕರಿಗೆ ಮೋಡಿ ಮಾಡಿದ್ದಾರೆ. ಈ ನಡುವೆ ರಾಹುಲ್ ಅವರ ಹೆಸರನ್ನು ಹೇಗೆ ಘೋಷಿಸಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಿಯಾಂಕಾ ಸ್ಪರ್ಧೆ ಇಲ್ಲ : ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಸೋನಿಯಾ ಮತ್ತು ರಾಹುಲ್ ಅವರ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಆದರೆ, ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ನಾಯಕರು ಹೇಳಿದ್ದಾರೆ.
ಪ್ರಿಯಾಂಕ ಗಾಂಧಿ ಅವರು ಅಮೇಥಿ, ರಾಯ್ ಬರೇಲಿಯಲ್ಲಿ ಲೋಕಸಭೆ ಚುನಾವಣೆ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ. ಆದರೆ, ಅವರು ಚುನಾವಣೆಗೆ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ.












Click it and Unblock the Notifications