ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ ಯಾರಿಗೆ ಗೊತ್ತಾ?
ನವದೆಹಲಿ, ಮೇ 9: ಲೋಕಸಭಾ ಚುನಾವಣೆಗೆ ಇನ್ನೊಂದೇ ಒಂದು ಹಂತದ ಮತದಾನ ಬಾಕಿಯಿದೆ. ಮೇ 12ರಂದು ಕೊನೆಯ ಹಂತದ ಚುನಾವಣೆ ನಡೆಯಲಿದೆ. ಅಂದು ದಕ್ಷಿಣ ಕೊಲ್ಕತಾ ಲೋಕಸಬಾ ಕ್ಷೇತದಲ್ಲಿ ಮತದಾನ ಜರುಗಲಿದೆ. ಆಯ್ತು ಅದರಲ್ಲೇನು ವಿಶೇಷ ಅನ್ನುತ್ತೀರಾ?
ವಿಶೇಷ ಇದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಇದೇ ಲೋಕಸಭಾ ಕ್ಷೇತ್ರಕ್ಕೆ ಸೇರಿದವರಾಗಿದ್ದಾರೆ. ಇನ್ನೂ ವಿಶೇಷ ಏನೆಂದರೆ ಸ್ಥಿತಪ್ರಜ್ಞರಾಗಿ/ಪಕ್ಷಾತೀತವಾಗಿ/ರಾಜಕೀಯೇತರವಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಮ್ಮ ಐಡೆಂಟಿಟಿಯನ್ನು ಉಳಿಸಿಕೊಳ್ಳಲು ಇಚ್ಛಿಸಿದ್ದು, ತಮ್ಮ ಮತದಾನ ಹಕ್ಕನ್ನು ಚಲಾಯಿಸದಿರಲು ನಿರ್ಧರಿಸಿದ್ದಾರೆ.
President sticks to precedence:

ಈ ಸಂಬಂಧ ಇಂದು ಶುಕ್ರವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಪ್ರಣಬ್ ಮುಖರ್ಜಿ ಅವರು postal ballot ಮೂಲಕ ಮತದಾನ ಮಾಡುವಂತಾಗಲು ರಾಷ್ಟ್ರಪತಿ ಕಾರ್ಯಾಲಯವು ಈ ಹಿಂದೆ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿತ್ತು. ಆದರೆ ಈ ಹಿಂದಿನ ರಾಷ್ಟ್ರಪತಿಗಳು ಯಾರೂ ಚುನಾವಣೆಗಳಲ್ಲಿ ಮತದಾನ ಮಾಡಿರುವ ಸಂಪ್ರದಾಯ ಇಲ್ಲ ಎಂಬುದನ್ನು ತಿಳಿದುಕೊಂಡ 14ನೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮತ ಹಾಕುವ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.
'ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಜಕೀಯವಾಗಿ ತಟಸ್ಥರಾಗಿರಲು ಇಚ್ಛಿಸಿದ್ದಾರೆ. ಹಾಗಾಗಿ ಅವರು ಮತದಾನ ಪ್ರಕ್ರಿಯೆಯಲ್ಲಿ ಅವರು ಪಾಲ್ಗೊಳ್ಳುವುದಿಲ್ಲ' ಎಂದು ರಾಷ್ಟ್ರಪತಿಗಳ ಮಾಧ್ಯಮ ಕಾರ್ಯದರ್ಶಿ ವೇಣು ರಾಜಮೋನಿ ಅವರು ನವದೆಹಲಿಯಲ್ಲಿ ಶುಕ್ರವಾರ ತಿಳಿಸಿದ್ದಾರೆ.
South Kolkata ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಲಾ ರಾಯ್ ಮತ್ತು ಬಿಜೆಪಿ ಪರ ತಥಾಗತ ರಾಯ್, ತೃಣಮೂಲ ಕಾಂಗ್ರೆಸ್ ವತಿಯಿಂದ ಸುಬ್ರತಾ ಬಕ್ಷಿ ಹಾಗೂ ಸಿಪಿಎಂ ನಿಂದ ಪ್ರೊ. ನಂದಿನಿ ಮುಖರ್ಜಿ ಮಧ್ಯೆ ತೀವ್ರ ಹಣಾಹಣಿ ನಡೆದಿದೆ.












Click it and Unblock the Notifications