ಮೋದಿಗಾಗಿ ಪ್ರವಾಸ ಮೊಟಕುಗೊಳಿಸಿದ ಪ್ರಣಬ್
ನವದೆಹಲಿ, ಅ.10 : ಬಿಹಾರದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಸಮಾವೇಶಕ್ಕೆ ಅನುಕೂಲವಾಗುವಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಮ್ಮ ಬಿಹಾರ ಭೇಟಿಯನ್ನು ಒಂದು ದಿನ ಮೊಟಕುಗೊಳಿಸಿದ್ದಾರೆ. ಇದರಿಂದ ಹಲವು ದಿನಗಳ ಗೊಂದಲ ಬಗೆಹರಿದಿದೆ.
ಗುರುವಾರ ಬಿಹಾರದ ಬಿಜೆಪಿ ಸಂಸದರಾದ ರಾಜೀವ್ ಪ್ರತಾಪ್ ರೂಡಿ ಮತ್ತು ಶಹನವಾಜ್ ಹುಸೇನ್ ಅವರು, ನರೇಂದ್ರ ಮೋದಿ ಸಮಾವೇಶಕ್ಕೆ ಅನುಕೂಲವಾಗುವಂತೆ ತಮ್ಮ ಪ್ರವಾಸ ವೇಳಾಪಟ್ಟಿ ಬದಲಾಯಿಸಿಕೊಳ್ಳಬೇಕು ಎಂದು ರಾಷ್ಟ್ರಪತಿ ಅವರಿಗೆ ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಅ. 26ರಂದು ಘಟಿಕೋತ್ಸವಕ್ಕೆ ಹಾಜರಾಗಲು ಬಿಹಾರಕ್ಕೆ ಭೇಟಿ ನೀಡುತ್ತಿದ್ದು, ಅಂದೇ ದಿಲ್ಲಿಗೆ ಮರಳಲಿದ್ದಾರೆ. ಇದರಿಂದ ಅ.27ರಂದು ಮೋದಿ ಸಮಾವೇಶಕ್ಕೆ ಎದುರಾಗಿದ್ದ ಅಡ್ಡಿ ಆತಂಕಗಳು ದೂರವಾಗಿವೆ.
ಬಿಜೆಪಿ ಅ. 27ರಂದು ಪಟನಾದಲ್ಲಿ 'ಹೂಂಕಾರ ಸಮಾವೇಶ' ಹಮ್ಮಿಕೊಂಡಿದೆ. ರಾಷ್ಟ್ರಪತಿಯವರ ಭೇಟಿ ಹಾಗೂ ಮೋದಿ ಸಮಾವೇಶ ವಿಷಯದಲ್ಲಿ ಬಿಜೆಪಿ ಮತ್ತು ಅದರ ಮಾಜಿ ಮಿತ್ರ ಪಕ್ಷ ಜೆಡಿಯು ನಡುವೆ ಸಂಘರ್ಷ ಏರ್ಪಟ್ಟಿತ್ತು.
ಅ. 27ರಂದು ಮೋದಿ ಸಮಾವೇಶ ನಡೆಯುವುದು ಗೊತ್ತಿದ್ದರೂ ಬಿಹಾರದ ಮುಖ್ಯಮಂತ್ರಿ, ಜೆಡಿಯು ಮುಖಂಡ ನಿತೀಶ್ ಕುಮಾರ್ ಉದ್ದೇಶಪೂರ್ವಕವಾಗಿ ರಾಷ್ಟ್ರಪತಿಗಳನ್ನು ಅದೇ ದಿನ ಆಹ್ವಾನಿಸಿದ್ದಾರೆಂದು ಬಿಜೆಪಿ ಆರೋಪಿಸಿತ್ತು.
ಕಳೆದ ಮಾರ್ಚ್ 20ರಂದೇ ಬಿಜೆಪಿಯು ಮೋದಿ ಸಮಾವೇಶದ ದಿನ ನಿಗದಿ ಮಾಡಿತ್ತು. ಅದು ಗೊತ್ತಿದ್ದರೂ ನಿತೀಶ್ ಉದ್ದೇಶಪೂರ್ವಕವಾಗಿ ರಾಷ್ಟ್ರಪತಿ ಕಾರ್ಯಕ್ರಮ ಏರ್ಪಡಿಸಿದ್ದಾರೆಂದು ಬಿಜೆಪಿ ಆರೋಪಿಸಿದೆ. ಸದ್ಯ ರಾಷ್ಟ್ರಪತಿ ಪ್ರವಾಸ ಒಂದು ದಿನ ಮೊಟಕುಗೊಂಡಿದೆ.












Click it and Unblock the Notifications