11 ತಿಂಗಳ ನಂತರ ರೈತರನ್ನು ತಡೆಯಲು ಟಿಕ್ರಿ ಗಡಿಯಲ್ಲಿ ಹಾಕಿದ್ದ ಬ್ಯಾರಿಕೇಡ್ ತೆರವು
ನವದೆಹಲಿ, ಅಕ್ಟೋಬರ್ 28: ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ದೆಹಲಿ ಪ್ರವೇಶಿಸದಂತೆ ತಡೆಯಲು ಟಿಕ್ರಿ ಗಡಿಯಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. 11 ತಿಂಗಳ ನಂತರದಲ್ಲಿ ಗಡಿಯಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ ಅನ್ನು ತೆರವುಗೊಳಿಸಲಾಗುತ್ತಿದೆ.
ಗುರುವಾರ ಬೆಳಗ್ಗೆ ಗಡಿ ಪ್ರದೇಶದಲ್ಲಿ ಹಾಕಲಾದ ಬ್ಯಾರಿಕೇಡ್‌ಗಳನ್ನು ತೆಗೆಯಲು ದೊಡ್ಡ ಕ್ರೇನ್‌ಗಳನ್ನು ಬಳಸಲಾಯಿತು. ದೆಹಲಿ-ಬಹದ್ದೂರ್‌ಗಢ ಮಾರ್ಗದಲ್ಲಿ ಬರುವ ಟಿಕ್ರಿ ಗಡಿ ಮಾರ್ಗ ಶೀಘ್ರದಲ್ಲೇ ಪ್ರಯಾಣಿಕರಿಗೆ ತೆರೆದುಕೊಳ್ಳುವ ಸಾಧ್ಯತೆಯಿದೆ.
Breaking News: ಟ್ರಕ್ ಹರಿದು ಪ್ರತಿಭಟನಾ ಸ್ಥಳದಲ್ಲೇ 3 ರೈತ ಮಹಿಳೆಯರು ಸಾವು
ಕಳೆದ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಲು ರಾಜಧಾನಿ ಸುತ್ತಲಿನ ಗಡಿ ಕ್ರಾಸಿಂಗ್ ಪಾಯಿಂಟ್‌ಗಳಲ್ಲಿ ಒಟ್ಟುಗೂಡಿದರು. ಈ ವೇಳೆ ರೈತರನ್ನು ತಡೆಯುವುದಕ್ಕಾಗಿ ಪೊಲೀಸರು ರಸ್ತೆಗಳಲ್ಲಿ ವಿಸ್ತಾರವಾದ ಬ್ಯಾರಿಕೇಡ್‌ಗಳನ್ನು ಹಾಕಿದರು. ದೈತ್ಯ ಮೊಳೆ ಮತ್ತು ಬೃಹತ್ ಕಾಂಕ್ರೀಟ್ ಬ್ಲಾಕ್‌ಗಳೊಂದಿಗೆ ಸಂಚಾರ ನಿರ್ಬಂಧ ವಿಧಿಸಲಾಗಿತ್ತು.

ರೈತರ ಪ್ರತಿಭಟನೆಯಿಂದ ಪ್ರಯಾಣಿಕರಿಗೆ ಸಮಸ್ಯೆ
ಕೇಂದ್ರ ಸರ್ಕಾರದ ಪರವಾದ ಕೆಲವು ಬೆಂಬಲಿಗರು ದೆಹಲಿಯ ಮೂರು ಗಡಿಗಳಲ್ಲಿ ರೈತರ ಪ್ರತಿಭಟನೆಯಿಂದಾಗಿ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ. ರಸ್ತೆ ತಡೆ ನಡೆಸುವುದರಿಂದ ಸಾರ್ವಜನಿಕರು ಓಡಾಡುವುದಕ್ಕೆ ಸಮಸ್ಯೆ ಆಗುತ್ತಿದೆ ಎಂದು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ರೈತರಿಗೆ ಪ್ರತಿಭಟನೆ ನಡೆಸುವ ಹಕ್ಕು ಇದೆ. ಆದರೆ ರಸ್ತೆಗಳನ್ನು ತಡೆಗೆ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಬಾರದು ಎಂದು ತಿಳಿಸಿತ್ತು. ಸುಪ್ರೀಂಕೋರ್ಟ್ ಸೂಚನೆಗೆ ಹಿನ್ನೆಲೆ ದೆಹಲಿಯ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರಕ್ಕೆ ನಿರ್ಬಂಧ ವಿಧಿಸಿರುವುದು ಪೊಲೀಸರು ಎಂದು ರೈತರು ತಿಳಿಸಿದ್ದರು.

ರೈತ ಸಂಘಟನೆಗಳಿಂದ ಪ್ರತಿಕ್ರಿಯೆಗೆ ಸೂಚಿಸಿದ ಸುಪ್ರೀಂಕೋರ್ಟ್
"ಇಲ್ಲಿ ಕಾನೂನು ಸ್ಪಷ್ಟವಾಗಿದೆ. ನಿಮಗೆ ಪ್ರತಿಭಟನೆ ಮಾಡುವ ಹಕ್ಕು ಇದೆ, ಆದರೆ ರಸ್ತೆಗಳನ್ನು ತಡೆಯುವಂತಿಲ್ಲ. ದೆಹಲಿಯ ಗಡಿ ರಸ್ತೆಗಳಲ್ಲಿ ಸಂಚಾರಕ್ಕೆ ಏಕೆ ನಿರ್ಬಂಧ ವಿಧಿಸಲಾಗಿದೆ, ಈ ಸಮಸ್ಯೆಯನ್ನು ಹೇಗೆ ಪರಿಹರಿಸಿಕೊಳ್ಳುವುದಕ್ಕೆ ಸಾಧ್ಯ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ," ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಡಿಸೆಂಬರ್ 7ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ರೈತ ಸಂಘಟನೆಗಳಿಗೆ ಸುಪ್ರೀಂಕೋರ್ಟ್ ತಿಳಿಸಿದೆ.

ಗಡಿಯಲ್ಲಿ ಮೊಹರು ಮಾಡಿದ ದೆಹಲಿ ಪೊಲೀಸರು
ಇತ್ತೀಚೆಗಷ್ಟೇ ಕೇಂದ್ರ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಅರೋರಾ ಮತ್ತು ಪೊಲೀಸ್ ಮುಖ್ಯಸ್ಥ ಪಿಕೆ ಅಗರವಾಲ್ ಸೇರಿದಂತೆ ಹರಿಯಾಣದ ಹಿರಿಯ ಅಧಿಕಾರಿಗಳು ರೈತರ ನಿಯೋಗದೊಂದಿಗೆ ಗಡಿಗಳಿಗೆ ಭೇಟಿ ನೀಡಿದರು. ಗಡಿಗಳನ್ನು ದೆಹಲಿ ಪೊಲೀಸರು ಮೊಹರು ಮಾಡಿರುವುದನ್ನು ಈ ಸಂದರ್ಭದಲ್ಲಿ ಕಂಡುಕೊಂಡರು. ಹರಿಯಾಣ ಮತ್ತು ದೆಹಲಿ ಪೊಲೀಸರ ನಡುವಿನ ಸಭೆಯ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಅಂತಿಮವಾಗಿ ಎರಡು ಬಿಜೆಪಿ ಸರ್ಕಾರಗಳ ನಡುವಿನ ಒಪ್ಪಂದದಿಂದಾಗಿ ಗಡಿಯಲ್ಲಿ ಹಾಕಲಾದ ನಿರ್ಬಂಧಿತ ಬ್ಯಾರಿಕೇಡ್ ಮತ್ತು ಸಿಮೆಂಟ್ ಅನ್ನು ತೆರವುಗೊಳಿಸಲಾಯಿತು.

ರಾಷ್ಟ್ರ ರಾಜಧಾನಿ ಮೂರು ಗಡಿಗಳಲ್ಲಿ ರೈತ ಹೋರಾಟ
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ 2020ರ ನವೆಂಬರ್ 26ರಿಂದ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ 11 ತಿಂಗಳಿನಿಂದ ಪಂಜಾಬ್, ಹರಿಯಾಣ, ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ಮುಂದುವರಿಸಿದ್ದಾರೆ.