Breaking: ನವದೆಹಲಿಯ ಕರ್ತವ್ಯ ಪಥವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
ನವದೆಹಲಿ, ಸೆಪ್ಟೆಂಬರ್ 8: ರಾಷ್ಟ್ರ ರಾಜಧಾನಿಯಲ್ಲಿ ಇತ್ತೀಚಿಗೆ ಮರುನಾಮಕರಣ ಮಾಡಿದ ಕರ್ತವ್ಯಪಥ ರಸ್ತೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಉದ್ಘಾಟನೆ ಮಾಡಿದ್ದಾರೆ. ಇದಕ್ಕೂ ಮೊದಲು ಇಂಡಿಯಾ ಗೇಟ್ ಬಳಿಯ ಮೇಲಾವರಣದ ಕೆಳಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದರು.
ಕಳೆದ ಜನವರಿ 26 ರ ಗಣರಾಜ್ಯೋತ್ಸವ ಪರೇಡ್‌ಗೆ ಸೆಂಟ್ರಲ್ ವಿಸ್ಟಾದ ಪುನರಾಭಿವೃದ್ಧಿ ಯೋಜನೆಯಲ್ಲಿ ಕೆಲಸ ಮಾಡಿದ ಎಲ್ಲರನ್ನೂ ಆಹ್ವಾನಿಸುವುದಾಗಿ ಪ್ರಧಾನಿ ಮೋದಿ ತಿಳಿಸಿದರು. ದೆಹಲಿಯಲ್ಲಿ ಸೆಂಟ್ರಲ್ ವಿಸ್ಟಾದ ಪುನರಾಭಿವೃದ್ಧಿ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು.

ನವದೆಹಲಿಯಲ್ಲಿನ ಈ ಮಾರ್ಗವು ರಾಷ್ಟ್ರಪತಿ ಭವನದಿಂದ ರೈಸಿನಾ ಹಿಲ್ಸ್, ವಿಜಯ್ ಚೌಕ್, ಇಂಡಿಯಾ ಗೇಟ್ ಮೂಲಕ ನ್ಯಾಷನಲ್ ಸ್ಟೇಡಿಯಂಗೆ ತಲುಪುತ್ತದೆ. 3.2 ಕಿಲೋ ಮೀಟರ್ ದೂರದ ರಾಜಪಥ್ ಮತ್ತು ಸೆಂಟ್ರಲ್ ವಿಸ್ತಾ ಮಾರ್ಗವನ್ನು ಸೆಪ್ಟೆಂಬರ್ 5ರಂದು ಕರ್ತವ್ಯ ಪಥ ಎಂದು ಮರುನಾಮಕರಣ ಮಾಡುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಕಟಿಸಿತ್ತು.
ನವದೆಹಲಿಯಲ್ಲಿ ಕರ್ತವ್ಯ ಪಥ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಸಾಹತುಶಾಹಿ ಗುರುತುಗಳನ್ನು ಶಾಶ್ವತವಾಗಿ ಅಳಿಸಿಹಾಕಲಾಗಿದೆ ಎಂದರು. ವಸಾಹತುಶಾಹಿಯ ಮತ್ತೊಂದು ಸಂಕೇತದಿಂದ ಹೊರಬಂದಂತೆ ದೇಶದ ಎಲ್ಲ ಜನರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಕಳೆದ 8 ವರ್ಷಗಳಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಛಾಪು ಹೊಂದಿರುವ ಹಲವಾರು ನಿರ್ಧಾರಗಳನ್ನು ನಾವು ತೆಗೆದುಕೊಂಡಿದ್ದೇವೆ. ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ 'ಅಖಂಡ ಭಾರತ'ದ ಮೊದಲ ಮುಖ್ಯಸ್ಥರಾಗಿದ್ದರು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ಮರಿಸಿಕೊಂಡರು.












Click it and Unblock the Notifications