ದಾಳಿ ನಡೆದ ಬಳಿಕವೂ ಸಿನಿಮಾ ಚಿತ್ರೀಕರಣದಲ್ಲಿ ಬಿಜಿಯಾಗಿದ್ದ ಮೋದಿ: ಕಾಂಗ್ರೆಸ್ ಆರೋಪ
ನವದೆಹಲಿ, ಫೆಬ್ರವರಿ 21: ಪುಲ್ವಾಮಾ ಉಗ್ರರ ದಾಳಿ ನಡೆಯುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಿನಿಮಾವೊಂದರ ಚಿತ್ರೀಕರಣದಲ್ಲಿ ಬಿಜಿಯಾಗಿದ್ದರು ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿ ನಡೆದ ಫೆಬ್ರವರಿ 14ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿದ್ದರು. ಇದು ಅವರು ಸೈನಿಕರಿಗೆ ತೋರಿದ ಅವಮಾನ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಪ್ರಧಾನಿ ಮೋದಿ ಅವರ ಭೇಟಿಯ ಫೋಟೊಗಳನ್ನು ಪ್ರದರ್ಶಿಸಿ ಆರೋಪಿಸಿದರು.
ಯೋಧರನ್ನು ಕಳೆದುಕೊಂಡ ಇಡೀ ದೇಶ ಶೋಕಾಚರಣೆ ನಡೆಸುತ್ತಿದ್ದರೆ ಪ್ರಧಾನಿ ಮೋದಿ ಅವರು ಸಿನಿಮಾ ಚಿತ್ರೀಕರಣದಲ್ಲಿ ಬಿಜಿಯಾಗಿದ್ದರು. ಮೋದಿ ಅವರು ಸೈನಿಕರಿಗೆ ಅವಮಾನ ಮಾಡಿರುವುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಇಲ್ಲ. ಮಧ್ಯಾಹ್ನ 3.10ರ ವೇಳೆಗೆ ಪುಲ್ವಾಮಾದಲ್ಲಿ ದಾಳಿ ನಡೆದಿದೆ. ಇದು ಕೂಡಲೇ ಸುದ್ದಿಯಾಗಿದೆ. ಆದರೆ, ಮೋದಿ ಅವರು ಸಂಜೆ 6.45ರವರೆಗೂ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಮಗ್ನರಾಗಿದ್ದರು ಎಂದು ದೂರಿದರು.

ಜಗತ್ತಿನಲ್ಲಿ ಈ ರೀತಿಯ ಯಾರಾದರೂ ಪ್ರಧಾನಿ ಇದ್ದಾರೆಯೇ? ಅಷ್ಟು ದೊಡ್ಡ ಭೀಕರ ದಾಳಿ ನಡೆದು ನಾಲ್ಕು ಗಂಟೆಯಾದರೂ ಅವರು ಸಿನಿಮಾ ಚಿತ್ರೀಕರಣದಲ್ಲಿಯೇ ತೊಡಗಿಕೊಂಡಿದ್ದರು. ಈ ವರ್ತನೆಯನ್ನು ಖಂಡಿಸಲು ನನ್ನ ಬಳಿ ಪದಗಳಿಲ್ಲ ಎಂದರು.
ಫೆಬ್ರವರಿ 17ರಂದು ನಮ್ಮ ಯೋಧರ ಪಾರ್ಥಿವ ಶರೀರಗಳನ್ನು ದೆಹಲಿ ವಿಮಾನ ನಿಲ್ದಾಣಕ್ಕೆ ತಂದಾಗ ಮೋದಿ ಅವರು ಒಂದು ಗಂಟೆ ತಡವಾಗಿ ಝಾನ್ಸಿಯಿಂದ ಬಂದಿದ್ದರು. ಏಕೆಂದರೆ ಅವರು ರಾಜಕೀಯ ಪ್ರಚಾರದಲ್ಲಿ ಬಿಜಿಯಾಗಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸಚಿವ ಕೆಜೆ ಆಲ್ಫೋನ್ಸ್, ಸೈನಿಕನ ಪಾರ್ಥಿವ ಶರೀರದ ಶವಪೆಟ್ಟಿಗೆ ಮುಂದೆ ಸೆಲ್ಫಿ ತೆಗೆದುಕೊಂಡಿದ್ದು ಮತ್ತೊಂದು ನಾಚಿಕೆಗೇಡಿನ ನಿದರ್ಶನ ಎಂದು ಕಿಡಿಕಾರಿದರು.












Click it and Unblock the Notifications