ಕಾಂಗ್ರೆಸ್ ಯಾವಾಗಲೂ ಸತ್ಯ ಹೇಳುತ್ತದೆ ಹಾಗಾಗಿ ಮೋದಿಗೆ ಭಯ: ರಾಹುಲ್
ನವದೆಹಲಿ, ಫೆಬ್ರವರಿ 9: ''ಕಾಂಗ್ರೆಸ್ ಯಾವಾಗಲೂ ಸತ್ಯವನ್ನೇ ಹೇಳುತ್ತದೆ, ಹೀಗಾಗಿ ಪ್ರಧಾನಿ ಮೋದಿ ಕಾಂಗ್ರೆಸ್‌ಗೆ ಹೆದರಿದ್ದಾರೆ'' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಪ್ರಧಾನಿ ಮೋದಿ ಕಾಂಗ್ರೆಸ್, ಜವಾಹರ್ ಲಾಲ್ ನೆಹರು ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರ ಬಗ್ಗೆಯೂ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದು, ನನ್ನ ಅಜ್ಜ ನೆಹರು ಅವರಿಗೆ ಯಾರೂ ಪ್ರಮಾಣಪತ್ರ ನೀಡುವುದು ಬೇಕಾಗಿಲ್ಲ. ಅವರ ಬಗ್ಗೆ ಯಾರು ಏನು ಹೇಳುತ್ತಾರೆ ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ರಾಹುಲ್ ತಿಳಿಸಿದ್ದಾರೆ.
ಇತಿಹಾಸವನ್ನು ಬದಲಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಅರ್ಬನ್ ನಕ್ಸಲ್ ಬಲೆಗೆ ಸಿಲುಕಿದೆ. ನಗರ ನಕ್ಸಲರು ಅವರ ಸಂಪೂರ್ಣ ಆಲೋಚನಾ ವಿಧಾನವನ್ನು ಸೆರೆಹಿಡಿದಿದ್ದಾರೆ. ನಗರ ನಕ್ಸಲರು ಅವರ ದುಃಸ್ಥಿತಿಯ ಲಾಭವನ್ನು ಪಡೆದುಕೊಂಡಿದ್ದಾರೆ. ಭಾರತದ ಉಜ್ವಲ ಭವಿಷ್ಯದಲ್ಲಿ ನಂಬಿಕೆ ಇಡುವಂತೆ ನಾನು ಎಲ್ಲರನ್ನು ವಿನಂತಿಸುತ್ತೇನೆ ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದರು.

'ಭಾರತವೇ ಇಂದಿರಾ, ಇಂದಿರಾ ಅವರೇ ಭಾರತ' ಎಂಬ ಚಿಂತನೆಯ ಫಲವನ್ನು ನಾವು ಈಗ ಅನುಭವಿಸುತ್ತಿದ್ದೇವೆ. ಕಾಂಗ್ರೆಸ್ ಇಲ್ಲದಿದ್ದರೆ, ತುರ್ತು ಪರಿಸ್ಥಿತಿ, ಸಿಖ್ ದಂಗೆಗಳು, ಕಾಶ್ಮೀರಿ ಪಂಡಿತರ ವಲಸೆ ನಡೆಯುತ್ತಿರಲಿಲ್ಲ ಎಂಬುದು ನನ್ನ ಅಭಿಪ್ರಾಯ. ಕಾಂಗ್ರೆಸ್ ಕೇವಲ ವಂಶ ಪಾರಂಪರಿಕ ರಾಜಕಾರಣದತ್ತ ಕೇಂದ್ರೀಕರಿಸಿತೇ ವಿನಃ ದೇಶದ ಅಭಿವೃದ್ಧಿಯತ್ತ ಹೆಚ್ಚು ಗಮನ ನೀಡಲಿಲ್ಲ ಎಂದು ಮೋದಿ ಟೀಕಿಸಿದ್ದರು.
ರಾಜ್ಯಸಭೆಯಲ್ಲಿ ಭಾಷಣ ಮಾಡುವಾಗ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಕುಟುಂಬದ ವಿರುದ್ಧ ಬಿರುಸಿನ ವಾಗ್ದಾಳಿ ನಡೆಸಿದ ಬೆನ್ನಲ್ಲೇ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಇರದಿದ್ದರೆ ತುರ್ತು ಪರಿಸ್ಥಿತಿ, ಕುಟುಂಬ ರಾಜಕಾರಣ, ಸಿಖ್ ದಂಗೆ, ಕಾಶ್ಮೀರಿ ಪಂಡಿತರ ವಲಸೆ ಆಗುತ್ತಿರಲಿಲ್ಲ. ಕಾಂಗ್ರೆಸ್‌ಗೆ ವಂಶಾಡಳಿತದ ರಾಜಕೀಯವನ್ನು ಮೀರಿ ಯೋಚಿಸಲು ಸಾಧ್ಯವಾಗಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದರು.
'ನನ್ನ ಪ್ರಶ್ನೆಗಳಿಗೆ ನರೇಂದ್ರ ಮೋದಿ ಕೊನೆಗೂ ಉತ್ತರಿಸಲಿಲ್ಲ. ನಾವು ಚೀನಾ ಮತ್ತು ಪಾಕಿಸ್ತಾನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ನನ್ನ ಮುತ್ತಜ್ಜ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ ಎಂಬುದು ನಮಗೆಲ್ಲರಿಗೂ ಗೊತ್ತಿರುವ ಸತ್ಯ. ಅದಕ್ಕೆ ನನಗೆ ಯಾರ ಪ್ರಮಾಣಪತ್ರವೂ ಬೇಕಾಗಿಲ್ಲ. ನಾವು ಸತ್ಯವನ್ನು ಹೇಳುವುದರಿಂದ ಬಿಜೆಪಿಗೆ ಕಾಂಗ್ರೆಸ್ ಕುರಿತು ಭಯವಿದೆ' ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಮಾತನಾಡಿದ್ದ ಪ್ರಧಾನಿ ಮೋದಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ ಮಹಾತ್ಮಾ ಗಾಂಧಿ ಕಾಂಗ್ರೆಸ್ ನ್ನು ವಿಸರ್ಜಿಸಬೇಕು ಎಂಬ ಸಂಕಲ್ಪ ಹೊಂದಿದ್ದರು. ಕಾಂಗ್ರೆಸ್ ಇರದೇ ಇದ್ದಿದ್ದರೆ ಏನು ಎಂಬ ಪ್ರಶ್ನೆ ಕೇಳಲಾಗುತ್ತದೆ. ಕಾಂಗ್ರೆಸ್ ಇರದೇ ಇದ್ದಿದ್ದರೆ ತುರ್ತು ಪರಿಸ್ಥಿತಿ ಇರುತ್ತಿರಲಿಲ್ಲ. ಸಿಖ್ ನರಮೇಧ ನಡೆಯುತ್ತಿರಲಿಲ್ಲ. ಕಾಶ್ಮೀರದಿಂದ ಪಂಡಿತರು ಓಡಿ ಹೋಗುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ಛಾಟಿ ಬೀಸಿದ್ದರು.
ಕುಟುಂಬ ರಾಜಕಾರಣ ಹೊಂದಿರುವ ಪಕ್ಷಗಳು ಭಾರತದ ಪ್ರಜಾಪ್ರಭುತ್ವಕ್ಕೆ ಮಾರಕ ಎಂದಿದ್ದ ಪ್ರಧಾನಿ ಮೋದಿ ನೆಹರು ತಮ್ಮ ಜಾಗತಿಕ ಮಟ್ಟದ ಇಮೇಜ್ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದರು. ಗೋವಾ ವಿಮೋಚನೆಗಾಗಿ ಕೆಲಸ ಮಾಡುತ್ತಿದ್ದ ರಾಮ್ ಮನೋಹರ್ ಲೋಹಿಯಾ ನೇತೃತ್ವದ ಸತ್ಯಾಗ್ರಹಿಗಳ ನೆರವಿಗೆ ಸೇನೆ ಕಳಿಸಲು ನಿರಾಕರಿಸಿದ್ದರು ಎಂದು ವಾಗ್ದಾಳಿ ನಡೆಸಿದ್ದರು.
ನಮ್ಮ ದೇಶದ ಉದ್ಯಮಿಗಳು ಕೊರೊನಾ ವೈರಸ್‌ನ ರೂಪಾಂತರಗಳೇ? ನಾವು ಯಾರಿಗಾಗಿ ಮಾತನಾಡುತ್ತಿದ್ದೇವೆ? ನಿಮಗೆ ಏನಾಗಿದೆ ಎಂದು ನಮಗೆ ತಿಳಿಸಿ ಎಂದು ಪ್ರಧಾನಿ ಮೋದಿ ಹೇಳಿದರು. ಇಂತಹ ಹೇಳಿಕೆಗಳಿಂದ ಕಾಂಗ್ರೆಸ್ ತನ್ನದೇ ಹಾನಿ ಮಾಡಿಕೊಳ್ಳುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಯಾರು ಇತಿಹಾಸದಿಂದ ಪಾಠ ಕಲಿಯುವುದಿಲ್ಲವೋ ಅವರು ಇತಿಹಾಸದಲ್ಲಿ ಕಳೆದು ಹೋಗುತ್ತಾರೆ ಎಂದು ಪ್ರಧಾನಿ ಹೇಳಿದ್ದರು.












Click it and Unblock the Notifications