ಪಶ್ಚಿಮ ಬಂಗಾಳ: 8 ಹಂತಗಳ ಚುನಾವಣೆ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ
ನವದೆಹಲಿ, ಮಾರ್ಚ್ 1: ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಸುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಸೋಮವಾರ ಅರ್ಜಿಯೊಂದು ದಾಖಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಸುವುದು ಸಂವಿಧಾನದ 21ನೇ ವಿಧಿ (ಕಾನೂನಿನ ಮುಂದೆ ಸಮಾನತೆ) ಮತ್ತು 14ನೇ ವಿಧಿ (ಜೀವಿಸುವ ಹಕ್ಕು) ಉಲ್ಲಂಘನೆಯಾಗಿದೆ. ಹಾಗಾಗಿ ಚುನಾವಣಾ ಆಯೋಗದ ಈ ನಿರ್ಧಾರಕ್ಕೆ ತಡೆ ನೀಡಬೇಕು ಎಂದು ವಕೀಲ ಎಂಎಲ್ ಶರ್ಮಾ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಈ ಅರ್ಜಿ ಕೆಲವು ದಿನಗಳಲ್ಲಿ ವಿಚಾರಣೆಗೆ ಬರುವ ನಿರೀಕ್ಷೆಯಿದೆ. ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದ ವೇಳೆ ಧಾರ್ಮಿಕ ಘೋಷಣೆಗಳ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ. 'ಜೈ ಶ್ರೀರಾಮ್ ಎಂದು ಘೋಷಣೆ ಕೂಗುವುದು ಹಾಗೂ ಇತರೆ ಧಾರ್ಮಿಕ ಘೋಷಣೆಗಳು, ಕೋಮು ಸಾಮರಸ್ಯವನ್ನು ಕದಡುತ್ತಿವೆ. ಇದು 1951ರ ಜನಪ್ರತಿನಿಧಿ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್‌ಗಳ ಅಡಿ ಅಪರಾಧವಾಗಿದೆ ಎಂದು ಆರೋಪಿಸಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27 ರಿಂದ ಏಪ್ರಿಲ್ 29ರವರೆಗೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೆರಿಗಳಲ್ಲಿ ಕೂಡ ಚುನಾವಣೆಯ ದಿನಾಂಕವನ್ನು ಪ್ರಕಟಿಸಲಾಗಿದೆ. ಸೂಕ್ಷ್ಮ ರಾಜ್ಯವಾದ ಅಸ್ಸಾಂನಲ್ಲಿ ಮೂರು ಹಂತದಲ್ಲಿ ಚುನಾವಣೆ ನಡೆಯಲಿದೆ. ಆದರೆ ಬೇರೆ ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.
ಈ ವೇಳಾಪಟ್ಟಿ ಘೋಷಣೆಯಾದ ಕೂಡಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಎಲ್ಲ ರಾಜ್ಯಗಳಲ್ಲಿ ಒಂದೇ ದಿನ ಚುನಾವಣೆ ನಡೆಯುವಾಗ ನಮ್ಮಲ್ಲಿ ಮಾತ್ರ ಏಕೆ ಎಂಟು ಹಂತಗಳಲ್ಲಿ ಚುನಾವಣೆ ನಡೆಸುವುದು? ಇದು ಬಿಜೆಪಿ ನಾಯಕರು ಪ್ರಚಾರ ನಡೆಸಲು ಅನುಕೂಲ ಮಾಡಿಕೊಡುವ ತಂತ್ರ ಎಂದು ಆರೋಪಿಸಿದ್ದರು.












Click it and Unblock the Notifications