ದೆಹಲಿಯಲ್ಲಿ ದಟ್ಟ ಮಂಜು, ಅಮಿತ್ ಶಾ ಆಗಮನ 3 ಗಂಟೆ ವಿಳಂಬ
ದೆಹಲಿ, ಡಿಸೆಂಬರ್ 31: ದೆಹಲಿಯಲ್ಲಿ ದಟ್ಟ ಮಂಜು ಆವರಿಸಿದ್ದು ವಿಮಾನ ಸಂಚಾರದಲ್ಲಿ ಭಾರೀ ವ್ಯತ್ಯಯವಾಗಿದೆ. ಈ ಹಿನ್ನಲೆಯಲ್ಲಿ ಇಂದು ಬೆಂಗಳೂರಿಗೆ ಆಗಮಿಸಬೇಕಾಗಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿಯಲ್ಲಿ ವಿಳಂಬವಾಗಿದೆ.
ಇಂದು ಮುಂಜಾನೆ ಒಟ್ಟು 90 ವಿಮಾನಗಳ ಪ್ರಯಾಣದಲ್ಲಿ ವ್ಯತ್ಯಯವಾಗಿದೆ. ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಸಿಬಿಲಿಟಿ 50 ಮೀಟರ್ ಗೆ ಇಳಿಕೆಯಾಗಿದ್ದು ವಿಮಾನ ಪ್ರಯಾಣ ದುಸ್ತರವಾಗಿದೆ.

ಒಟ್ಟಾರೆ ಮಂಜಿನಿಂದಾಗಿ 54 ನಾಗರೀಕ ವಿಮಾನಗಳು ತಡವಾದರೆ, 17 ವಿಮಾನಗಳನ್ನು ಹತ್ತಿರದ ವಿಮಾನ ನಿಲ್ದಾಣಗಳಿಗೆ ವರ್ಗಾಯಿಸಲಾಗಿದೆ. 11 ಅಂತರಾಷ್ಟ್ರೀಯ ವಿಮಾನಗಳ ಪ್ರಯಾಣದಲ್ಲಿ ವಿಳಂಬವಾಗಿದ್ದರೆ 8 ವಿಮಾನಗಳನ್ನು ಬೇರೆ ನಿಲ್ದಾಣಗಳಿಗೆ ವರ್ಗಾಯಿಸಲಾಗಿದೆ.
ಇನ್ನು 4 ವಿಮಾನಗಳ ಪ್ರಯಾಣ ರದ್ದಾಗಿವೆ. ಇದರಲ್ಲಿ 3 ದೇಶಿಯ ನಾಗರೀಕ ವಿಮಾನಗಳು ಮತ್ತು ಒಂದು ಅಂತರಾಷ್ಟ್ರೀಯ ವಿಮಾನವಾಗಿದೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಲೋ ವಿಸಬಿಲಿಟಿ ಲ್ಯಾಂಡಿಂಗ್ ತಂತ್ರಜ್ಞಾನವಿದೆ. ಇದರ ಪ್ರಕಾರ 50 ಮೀಟರ್ ವಿಸಿಬಿಲಿಟಿವರೆಗೂ ವಿಮಾನಗಳು ಲ್ಯಾಂಡ್ ಆಗಬಹುದಾಗಿದೆ. ಆದರೆ ಟೇಕ್ ಆಫ್ ಆಗಲು 125 ಮೀಟರ್ ವಿಸಿಬಿಲಿಟಿ ಅಗತ್ಯವಾಗಿದೆ.












Click it and Unblock the Notifications