ನಮಗಾಗಿ ಪ್ರಾಣತೆತ್ತ ನಿಮಗಿದೋ ನಮ್ಮ ಸಾವಿರ ನಮನ...
ನವದೆಹಲಿ, ಫೆಬ್ರವರಿ 06: 'ಏ ಮೇರೆ ವತನ್ ಕೆ ಲೋಗೋ, ಜರಾ ಆಂಖಮೆ ಭರಲೋ ಪಾನಿ, ಜೋ ಶಹೀದ ಹುವೇ ಹೈ ಉನಕೀ ಜರಾ ಯಾದ್ ಕರೋ ಕುರ್ಬಾನಿ... ' ಹಿನ್ನೆಲೆಯಲ್ಲಿ ಯಾರೂ ಹಾಡದಿದ್ದರೂ ಮನಸ್ಸಲ್ಲಿ ತನ್ನಷ್ಟಕ್ಕೇ ಗುನುಗುವ ಆ ಸಾಲು. ಕಣ್ಣಂಚಲ್ಲಿ ಬೇಡವೆಂದರೂ ಹರಿವ ಕಣ್ಣೀರು. ಈ ಅಶ್ರುಧಾರೆಯನ್ನಲ್ಲದೆ ನಿಮಗಾಗಿ ಕೊಡುವುದಕ್ಕೆ ನಮ್ಮ ಬಳಿ ಇನ್ನೇನಿದೆ ಎಂಬ ಅಸಹಾಯಕ ಭಾವ. ನಮಗಾಗಿ ಪ್ರಾಣತೆತ್ತ ನಿಮಗಿದೋ ನಮ್ಮ ಸಾವಿರ ನಮನ...
ಫೆ.4 ರಂದು ಹೇಡಿ ಪಾಕಿಸ್ತಾನದ ಹೀನ ಕೃತ್ಯದಿಂದಾಗಿ ಹುತಾತ್ಮರಾದ ನಾಲ್ವರು ಭಾರತೀಯ ಸೈನಿಕರ ಕಳೇಬರವನ್ನು ಕಂಡಾಗ ಅಕ್ಷರಗಳು ಸೋಲುತ್ತವೆ. ನಮಗಾಗಿ, ದೇಶದ ಭದ್ರತೆಗಾಗಿ ಚಿಕ್ಕ ವಯಸ್ಸಿನಲ್ಲೇ ತಮ್ಮ ಪ್ರಾಣ ಅರ್ಪಿಸುವ ಅವರಿಗೆ ಏನನ್ನೂ ನೀಡಲಾಗದ ಅಸಹಾಯಕರು ನಾವು ಎಂದು ನಮ್ಮನ್ನೇ ನಾವು ಹಳಿದುಕೊಳ್ಳುವ ಮನಸ್ಸಾಗುತ್ತದೆ.
ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಹರ್ಯಾಣದ ಕ್ಯಾ.ಕಪಿಲ್ ಕುಂಡು(23), ಸಾಂಬಾ ಜಿಲ್ಲೆಯ ಹವಿಲ್ದಾರ್ ರೋಷನ್ ಲಾಲ್(42), ಗ್ವಾಲಿಯರ್ ನ ರಾಮಾವತಾರ್(27), ಜಮ್ಮು ಕಾಶ್ಮೀರದ ಕಟುನಾ ಜಿಲ್ಲೆಯ ಸುಭಂ ಸಿಂಗ್(23) ಹುತಾತ್ಮರಾಗಿದ್ದರು. ನಿನ್ನೆ(ಫೆ.5) ಅವರ ಕಳೇಬರಗಳನ್ನು ದೆಹಲಿಗೆ ತಂದಾಗ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಗಣ್ಯರು ಅವರಿಗೆ ಅಂತಿಮ ನಮನ ಸಲ್ಲಿಸಿದರು.

ನಿರ್ಮಲಾ ಸೀತಾರಾಮನ್ ನಮನ
ಕಪಿಲ್ ಕುಂಡು ಅವರ ಪಾರ್ಥಿವ ಶರೀರಕ್ಕೆ ಭಾವುಕರಾಗಿ ಅಂತಿಮ ನಮನ ಸಲ್ಲಿಸುತ್ತಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್. 23 ವರ್ಷದ ಕಪಿಲ್ ಕುಂಡು ಫೆಬ್ರವರಿ 10 ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವುದರಲ್ಲಿದ್ದರು. ಆದರೆ ಅದಕ್ಕೂ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದಾರೆ.

ಬಿಪಿನ್ ರಾವತ್ ರಿಂದ ಅಂತಿಮ ಗೌರವ
ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಹ ಕಪಿಲ್ ಕುಂಡು ಅವರಿಗೆ ಅಂತಿಮ ಗೌರವ ಸಲ್ಲಿಸಿದರು. ಪಾಕಿಸ್ತಾನದ ಅಪ್ರಚೋದಿತ ದಾಳಿಯನ್ನು ಹಿಮ್ಮೆಟ್ಟಿಸಲು ಭಾರತ ಸಮರ್ಥವಾಗಿದೆ. ನಾವಿನ್ನು ಮಾತನಾಡುವುದಿಲ್ಲ, ನಡೆದು ತೋರಿಸುತ್ತೇವೆ ಎಂದು ದಾಳಿಯ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಸಹೋದ್ಯೋಗಿಗೆ ಅಂತಿಮ ನಮನ
ಸಾಂಬಾ ಜಿಲ್ಲೆಯ ಹವಿಲ್ದಾರ್ ರೋಷನ್ ಲಾಲ್ ಅವರ ಅಂತ್ಯ ಸಂಸ್ಕಾರವನ್ನು ಸರ್ಕಾರಿ ಗೌರವದ ಮೂಲಕ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ತಮ್ಮ ಸಹೋದ್ಯೋಗಿಗೆ ಸೈನಿಕರು ಅಂತಿಮ ನಮನ ಸಲ್ಲಿಸಿದರು.

ಸಹೋದರಿಯ ಆಕ್ರಂದನ
ಅತ್ತು ಹಗುರಾಗೋಣ ಎಂದರೆ ಹನಿಯೂ ಬಾರದ ಕಣ್ಣನ್ನು ಎವೆಯಿಕ್ಕದೆ ತೆರೆದು ಸಹೋದರನ ದೇಹವನ್ನು ಹೊತ್ತ ಶವಪೆಟ್ಟಿಗೆಯನ್ನೇ ಅಪ್ಪಿ ನಿಂತ ಕಪಿಲ್ ಕುಂಡು ಅವರ ಸಹೋದರಿ. ನನಗೆ ಇನ್ನೊಬ್ಬ ಮಗ ಇದ್ದಿದ್ದರೆ ಅವನನ್ನೂ ಸೇನೆಗೆ ಕಳಿಸುತ್ತಿದ್ದೆ ಎಂದು ಕುಂಡು ತಾಯಿ ನಿನ್ನೆ ತಾನೇ ನೀಡಿದ್ದ ಹೇಳಿಕೆಯನ್ನು ನೆನೆದರೆ ಆ ಮಹಾತಾಯಿಯ ಬಗ್ಗೆ ಹೆಮ್ಮೆ ಎನ್ನಿಸುತ್ತದೆ.

ನಮಗಿನ್ನ್ಯಾರು ಗತಿ?
ಜಮ್ಮುವಿನಿಂದ 60 ಕಿ.ಮೀ. ದೂರದಲ್ಲಿರುವ ಸಾಂಬಾ ಜಿಲ್ಲೆಯ ಹವಿಲ್ದಾರ್ ರೋಷನ್ ಲಾಲ್(42) ಪಾಕಿಸ್ತಾನದ ದಾಳಿಯಿಂದ ಹುತಾತ್ಮರಾದರು. ಅವರ ಕಳೇಬರದೆದುರು ತಂದೆ-ತಾಯಿ, ಮಡದಿ, ಪುಟ್ಟ ಮಗು ಬಿಕ್ಕಳಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಹುತಾತ್ಮರಾದ ನಾಲ್ವರು ಇವರೇ...
ಕದನ ವಿರಾಮ ಉಲ್ಲಂಘಿಸಿ, ಪಾಕಿಸ್ತಾನ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಿಂದ ಹುತಾತ್ಮರಾದ ಹರ್ಯಾಣದ ಕ್ಯಾ.ಕಪಿಲ್ ಕುಂಡು(23), ಸಾಂಬಾ ಜಿಲ್ಲೆಯ ಹವಿಲ್ದಾರ್ ರೋಷನ್ ಲಾಲ್(42), ಗ್ವಾಲಿಯರ್ ನ ರಾಮಾವತಾರ್(27), ಜಮ್ಮು ಕಾಶ್ಮೀರದ ಕಟುನಾ ಜಿಲ್ಲೆಯ ಸುಭಂ ಸಿಂಗ್(23) ಚಿತ್ರಗಳು.












Click it and Unblock the Notifications