ನಿರ್ಭಯಾ ಜೀವಂತವಿದ್ದಿದ್ದರೆ ಮತ್ತಷ್ಟು ಖುಷಿಯಾಗುತ್ತಿತ್ತು: ವಕೀಲೆ ಸೀಮಾ
ನವದೆಹಲಿ, ಮಾರ್ಚ್ 20: 'ತಡವಾದರೂ ನ್ಯಾಯ ಸಿಕ್ಕಿದೆ, ನಿರ್ಭಯಾ ಜೀವಂತವಿದ್ದಿದ್ದರೆ ಮತ್ತಷ್ಟು ಖುಷಿಯಾಗುತ್ತಿತ್ತು' ಎಂದು ನಿರ್ಭಯಾ ಪರ ವಕೀಲೆ ಸೀಮಾ ಕುಷ್ವಾಹ ತಿಳಿಸಿದ್ದಾರೆ.
ನಾನು ಒಂದು ವಿಷಯ ಹೇಳಲು ಇಷ್ಟಪಡುತ್ತೇನೆ. ಅಪರಾಧಿಗಳು ನಿರ್ಭಯಾ ಮೇಲೆ ಕೇವಲ ಅತ್ಯಾಚಾರ ಮಾಡಿಲ್ಲ, ಹತ್ಯೆ ಮಾಡಿದ್ದಾರೆ. ನಿರ್ಭಯಾಳನ್ನು ಕೊಲೆ ಮಾಡಿ ಆಕೆಯ ದೇಹವನ್ನು ಸಂಪೂರ್ಣವಾಗಿ ನಾಶ ಮಾಡಿದ್ದರು.
ಯಾವ ರೀತಿ ನಿರ್ಭಯಾಯನ್ನು ಹತ್ಯೆ ಮಾಡಿದ್ದಾರೋ, ಪ್ರಾಣಿಗಳು ಕೂಡ ಆ ರೀತಿ ಮಾಡಲ್ಲ. ಆದರೆ ಇಂದು ನಾಲ್ವರು ಅಪರಾಧಿಗಳನ್ನು ಗಲ್ಲುಗೇರಿಸಲಾಗಿದೆ ಎಂದರು. ನಾಲ್ವರು ಹಂತಕರನ್ನು ಇಂದು ಮ್ಯಾಜಿಸ್ಟ್ರೇಟ್ ಎದುರು ಗಲ್ಲಿಗೇರಿಸಲಾಯಿತು.

ನಾವು ಆಕೆಯನ್ನು ಬದುಕಿಸಿಕೊಳ್ಳಲಾಗಲಿಲ್ಲ
ನಾವು ಆಕೆಯನ್ನು ಬದುಕಿಸಿಕೊಳ್ಳಲು ಆಗಲಿಲ್ಲ. ದೇಶದ ಕಾನೂನು ಸುವ್ಯವಸ್ಥೆ ಇದರಲ್ಲಿ ಫೇಲ್ ಆಗಿದೆ. ದೇಶದ ರಾಜಧಾನಿಯಲ್ಲಿ ಈ ಘಟನೆ ನಡೆದಿದೆ. ಆದರೆ ಹಂತಕರನ್ನು ಗಲ್ಲಿಗೇರಿಸುವ ಮೂಲಕ ನಿರ್ಭಯಾಗೆ ನ್ಯಾಯ ಸಿಕ್ಕಿದೆ.

ನಿರ್ಭಯಾ ವೈದ್ಯಕೀಯ ಶಿಕ್ಷಣ ಮುಗಿಸಿದ್ದಳು
ನಿರ್ಭಯಾ ವೈದ್ಯಕೀಯ ಶಿಕ್ಷಣ ಮುಗಿಸಿ ಇಂಟರ್ನ್‌ಶಿಪ್ ಮಾಡಲು ಇಲ್ಲಿಗೆ ಬಂದಿದ್ದಳು. ಈ ಘಟನೆ ನಡೆದ ಮರುದಿನ ನಿರ್ಭಯಾ ತನ್ನ ಇಂಟರ್ನ್‌ಶಿಪ್‌ಗೆ ಹೋಗಬೇಕಿತ್ತು. ಅದು ಆಕೆಯ ಕನಸ್ಸಾಗಿತ್ತು. ಆದರೆ ಈ ಘಟನೆ ನಡೆದ ನಂತರ ಆಕೆಯ ಕನಸು ನುಚ್ಚುನೂರಾಗಿ ಹೋಯಿತು. ಒಂದು ಕ್ಷಣದಲ್ಲಿ ಎಲ್ಲವೂ ಬದಲಾಯಿತು ಎಂದರು.

ಎಲ್ಲಾ ಹೆಣ್ಣುಮಕ್ಕಳಿಗೂ ನ್ಯಾಯ ದೊರೆಯಬೇಕು
ಇಂತಹ ಪ್ರಕರಣದಲ್ಲಿ ಬೇರೆ ಹೆಣ್ಣು ಮಕ್ಕಳಿಗೂ ನ್ಯಾಯ ಸಿಕ್ಕಿಲ್ಲ ಎಂಬುದು ನನಗೆ ಗೊತ್ತಿದೆ. ಇಂತಹ ಹಲವು ಪ್ರಕರಣಗಳು ಬಾಕಿ ಇದೆ ಎಂಬುದು ನನಗೆ ಗೊತ್ತಿದೆ. ನಿರ್ಲಕ್ಷ್ಯದಿಂದ ಈ ಪ್ರಕರಣ ಇಷ್ಟು ವರ್ಷ ನಡೆಯಿತು. ತಡವಾದರೂ ನಿರ್ಭಯಾಗೆ ನ್ಯಾಯ ಸಿಕ್ಕಿದೆ ಎಂದು ತಿಳಿಸಿದರು.

ಹೆಣ್ಣುಮಕ್ಕಳಿಗೆ ನ್ಯಾಯಕೊಡಿಸುವ ಕಲಸವಾಗಬೇಕು
ದೇಶದಲ್ಲಿ ಹಲವು ಹೆಣ್ಣು ಮಕ್ಕಳ ಜೊತೆ ನಿರ್ಭಯಾದಂತಹ ಪ್ರಕರಣ ನಡೆದಿದೆ. ಅವರು ಕೂಡ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ಮಾಧ್ಯಮದವರು ಅಂತಹ ಪ್ರಕರಣಗಳನ್ನು ಬೆಳಕಿಗೆ ತಂದು ಅವರಿಗೂ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.












Click it and Unblock the Notifications