ದೆಹಲಿ: ಶಾಲೆಯ ಶೌಚಾಲಯದಲ್ಲಿ ವಿದ್ಯಾರ್ಥಿ ಮೃತದೇಹ ಪತ್ತೆ
ನವದೆಹಲಿ, ಫೆಬ್ರವರಿ 02: ಹರ್ಯಾಣದ ಗುರ್ಗಾಂವ್ ನಲ್ಲಿ ಹತ್ಯೆಗೊಳಗಾದ ಪ್ರದ್ಯಮ್ನ ಪ್ರಕರಣ ಇನ್ನೂ ಇತ್ಯರ್ಥವಾಗೆ ಉಳಿದಿರುವಾಗ ಅಂಥದೇ ಹತ್ಯೆಯ ಸುದ್ದಿಯೊಂದು ದೆಹಲಿಯ ಶಾಲೆಯೊಂದರಿಂದ ಹೊರಬಿದ್ದಿದೆ.
ದೆಹಲಿಯ ಕರವಾಲ್ ನಗರದ ಜೀವನ ಜ್ಯೋತಿ ಸೀನಿಯರ್ ಸೆಕೆಂಡರಿ ಶಾಲೆಯ 14 ವರ್ಷದ ತುಷಾರ್ ಎಂಬ ಬಾಲಕನ ಮೃತದೇಹ ಶಾಲೆಯ ಶೌಚಾಲಯದಲ್ಲಿ ಪತ್ತೆಯಾಗಿದ್ದು ಹಲವು ಅನುಮಾನಗಳನ್ನು ಹುಟ್ಟಿಸಿದೆ.
9 ನೇ ತರಗತಿ ಓದುತ್ತಿದ್ದ ತುಷಾರ್ ಮೇಲೆ ಶೌಚಾಲಯದೊಳಗೆ ಮಾರಣಾಂತಿಕ ಹಲ್ಲೆ ನಡೆದಿತ್ತು. ನಂತರ ಆತನನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತಾದರೂ ಆತನ ಸಾವಿಗೀಡಾಗಿದ್ದಾನೆಂದು ವೈದ್ಯರು ಘೋಷಿಸಿದ್ದರು ಎಂದು ತುಷಾರ್ ಕುಟುಂದಸ್ಥರು ತಿಳಿಸಿ, ಶಾಲೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ಡೈರಿಯಾ ದಿಂದ ಬಳಲುತ್ತಿದ್ದ ತುಷಾರ್ ಪ್ರಜ್ಞಾಹೀನ ಸ್ಥಿತಿ ತಲುಪಿದ್ದು, ನಂತರ ಸಾವಿಗೀಡಾಗಿರಬಹುದು ಎಂದಿರುವ ಶಾಲೆಯ ಆಡಳಿತ ಮಂಡಳಿ, ಆತನ ಮೇಲೆ ಹಲ್ಲೆಯಾಗಿದೆ ಎಂಬುದನ್ನು ಅಲ್ಲಗಳೆದಿದೆ.
ದೂರು ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ಕ್ಯಾಮರಾ ಫೂಟೇಜ್ ಅನ್ನು ಪರಿಶೀಲಿಸುತ್ತಿದ್ದಾರೆ. ತನುಖೆ ನಡೆಯುತ್ತಿದೆ. ಪ್ರಾಥಮಿಕ ತನಿಖೆಯ ಪ್ರಕಾರ ತುಷಾರ್ ದೇಹದ ಮೇಲೆ ಯಾವುದೇ ರೀತಿಯ ಗಾಯದ ಗುರುತುಗಳಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಆದರೆ ದುಃಖತಪ್ತ ಪಾಲಕರು ಶಾಲೆಯ ಗೇಟಿನ ಬಳಿ ಧರಣಿ ಆರಂಭಿಸಿದ್ದಾರೆ.
ಕಳೆದ ಸೆಪ್ಟೆಂಬರ್ 8 ರಂದು ಹರ್ಯಾಣದ ಗುರ್ಗಾಂವ್(ಗುರುಗ್ರಾಮ)ನಲ್ಲಿ ಇಲ್ಲಿನ ರಾಯನ್ ಸ್ಕೂಲಿನಲ್ಲಿ ಪ್ರದ್ಯುಮ್ನ ಠಾಕೂರ್ ಎಂಬ 2 ನೇ ತರಗತಿಯ ವಿದ್ಯಾರ್ಥಿಯನ್ನು ಶಾಳೆಯ ಶೌಚಾಲಯದಲ್ಲೇ ಕತ್ತು ಸೀಳಿ ಕೊಲೆಗೈಯ್ಯಲಾಗಿತ್ತು. ಇದೇ ಶಾಲೆಯಲ್ಲಿ 11ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೇ ಈ ಕೊಲೆ ಮಾಡಿದ್ದ ಎಂಬ ಅನುಮಾನದ ಮೇರೆಗೆ ಪೊಲೀಸರು ಆತನನ್ನು ಬಂಧಿಸಿದ್ದರು. ಈ ಪ್ರಕರಣದ ವಿಚಾರಣೆ ಈಗಲೂ ನಡೆಯುತ್ತಿದೆ.












Click it and Unblock the Notifications