ನರೇಂದ್ರ ಮೋದಿ ವಿರುದ್ಧ ಅಯ್ಯರ್ ಪರೋಕ್ಷ ವಾಕ್ಸಮರ
ದೆಹಲಿ, ಆಗಸ್ಟ್ 11: "ಮುಸ್ಲಿಮರನ್ನು ನಾಯಿಮರಿಗೆ ಹೋಲಿಸಿದ್ದ ಮುಖ್ಯಮಂತ್ರಿಯೊಬ್ಬರು ಪ್ರಧಾನಿಯಾಗುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ" ಎಂದು ಕಾಂಗ್ರೆಸ್ಸಿನ ಉಚ್ಛಾಟಿತ ನಾಯಕ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.
ದೆಹಲಿಯಲ್ಲಿ 'ಎನಫ್ ವಿತ್ ಇಂಟಾಲರೆನ್ಸ್ ನ್ಯಾಶ್ನಲ್ ಕ್ಯಾಂಪೇನ್'ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅಯ್ಯರ್, '2014 ಕ್ಕೂ ಮೊದಲು ಮುಸ್ಲಿಮರನ್ನು ನಾಯಿಮರಿ ಎಂದಿದ್ದ ಮುಖ್ಯಮಂತ್ರಿಯೊಬ್ಬರು ಭಾರತದ ಪ್ರಧಾನಿಯಾಗುತ್ತಾರೆ ಎಂದು ನಾನು ಭಾವಿಸಿರಲಿಲ್ಲ. 2002 ರ ಗಲಭೆಯಲ್ಲಿ ಹಲವು ಮುಸ್ಲಿಮರು ತಮ್ಮ ಪ್ರಾಣ ಕಳೆದುಕೊಂಡಿದ್ದಕ್ಕೆ ನಿಮಗೆ ಪಶ್ಚಾತ್ತಾಪವಿಲ್ಲವೇ ಎಂದು ಪ್ರಶ್ನಿಸಿದಾಗ, 'ನನ್ನ ಕಾರ ಹತ್ತಿರ ಒಂದು ನಾಯಿಮರಿ ಸಿಲುಕಿಕೊಂಡರೂ ನನಗೆ ನೋವಾಗುತ್ತದೆ' ಎಂದು ಒಬ್ಬರು ಉತ್ತರಿಸಿದ್ದರು. ಆದರೆ ಅವರು ಈ ಗಲಭೆಯಾದ ಎಷ್ಟೋ ದಿನದವರೆಗೆ ಮುಸ್ಲಿಂ ಸಂತ್ರಸ್ಥ ಕೇಂದ್ರಗಳಿಗೆ ಭೇಟಿ ನೀಡಿರಲಿಲ್ಲ. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂತ್ರಸ್ಥ ಕೇಂದ್ರಗಳಿಗೆ ಭೇಟಿ ನೀಡಿದಾಗ ಶಿಷ್ಟಾಚಾರ ಪಾಲಿಸುವುದಕ್ಕಾಗಿ ಇವರೂ ಅಲ್ಲಿಗೆ ಬಂದಿದ್ದರು' ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ಅವರಿಗೆ ಮಾತಿನ ಚಾಟಿ ನೀಡಿದ್ದಾರೆ.
'ನನಗೆ ಈ ಸಮಯದಲ್ಲಿ ನಮ್ಮ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ನೆನಪಾಗುತ್ತಾರೆ. ಅವರು ಜಾತ್ಯತೀತ ತತ್ತ್ವದಲ್ಲಿ ನಂಬಿಕೆ ಇಟ್ಟವರಾಗಿದ್ದರು. ಅಲ್ಪಸಂಖ್ಯಾತರ ಕೋಮುವಾದಕ್ಕಿಂತ, ಬಹುಸಂಖ್ಯಾತ ಕೋಮುವಾದ ಹೆಚ್ಚು ಅಪಾಯಕಾರಿ ಎಂದು ಅವರು ಹೇಳುತ್ತಿದ್ದರು. ಅವರ ಮಾತು ನನಗೆ ಈಗ ಅರ್ಥವಾಗುತ್ತಿದೆ. ನನಗೆ ಹಿಂದುಗಳ, ಬೌದ್ಧರ, ಜೈನರ, ಕ್ರೈಸ್ತರ ಮೇಲೆ ಹೆಮ್ಮೆ ಇದೆ. ಹಾಗೆಯೇ ಮುಸ್ಲಿಮರ ಮೇಲೆ ಮತ್ತಷ್ಟು ಹೆಮ್ಮೆ ಇದೆ. ಅವರು 666 ವರ್ಷಗಳಿಂದ ದೆಹಲಿಯಲ್ಲಿ ಕೂತು ಈ ದೇಶವನ್ನು ಆಳಿದ್ದಾರೆ. ಮುಸ್ಲಿಮರು ಭಾರತವನ್ನು ಆಳಿದರೂ ನಾವು ದೊಡ್ಡ ದೇಶವಾಗಿಯೇ ಉಳಿದಿದ್ದೇವೆ' ಎಂದು ಅವರು ಮುಸ್ಲಿಂ ದೊರೆಗಳನ್ನು ಶ್ಲಾಘಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ 'ನೀಚ' ಎಂಬ ಪದಬಳಕೆ ಮಾಡಿದ್ದರಿಂದ ಮಾಜಿ ಕೇಂದ್ರ ಸಚಿವ ಅಯ್ಯರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಾಗಿತ್ತು.












Click it and Unblock the Notifications