ಮುಂಗಾರು ಅಧಿವೇಶನ: ಗದ್ದಲದ ಮಧ್ಯೆ ಭಾರತೀಯ ಅಂಟಾರ್ಕ್ಟಿಕ್ ಮಸೂದೆ 2022 ಅಂಗೀಕಾರ
ಹೊಸದಿಲ್ಲಿ, ಜುಲೈ 22: ಬೆಲೆ ಏರಿಕೆ, ದಿನನಿತ್ಯದ ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಮತ್ತು ಹಣದುಬ್ಬರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಪ್ರತಿಭಟನೆಯಿಂದ ಮುಂಗಾರು ಅಧಿವೇಶನದ ಐದನೇ ದಿನದ ಕಲಾಪಗಳು ವ್ಯರ್ಥವಾದವು. ಕಲಾಪ ಆರಂಭವಾದ ಕೆಲವೇ ನಿಮಿಷಗಳಲ್ಲಿ ಉಭಯ ಸದನಗಳಲ್ಲಿ ಮುಂದೂಡಲಾಯಿತು. ಅಧಿವೇಶನದ 5ನೇ ದಿನವೂ ಜಿಎಸ್‌ಟಿ, ಬೆಲೆ ಏರಿಕೆಗಳ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದವು. ಗಲಭೆಯ ಮಧ್ಯೆಯೇ ಲೋಕಸಭೆಯಲ್ಲಿ ಮಸೂದೆಯೊಂದು ಅಂಗೀಕಾರವಾಗಿದೆ.
ಅಂಟಾರ್ಕ್ಟಿಕ್ ಪ್ರದೇಶದಲ್ಲಿ ಭಾರತವು ಸ್ಥಾಪಿಸಿದ ಸಂಶೋಧನಾ ಕೇಂದ್ರಗಳಿಗೆ ದೇಶೀಯ ಕಾನೂನುಗಳ ಅನ್ವಯವನ್ನು ವಿಸ್ತರಿಸಲು ಪ್ರಯತ್ನಿಸುವ ಭಾರತೀಯ ಅಂಟಾರ್ಕ್ಟಿಕ್ ಬಿಲ್, 2022 ಅನ್ನು ಲೋಕಸಭೆ ಶುಕ್ರವಾರ ಅಂಗೀಕರಿಸಿತು. ಮಸೂದೆ ಅಂಗೀಕಾರವಾದ ಕೂಡಲೇ ಸೋಮವಾರ ಮಧ್ಯಾಹ್ನ 2 ಗಂಟೆಗೆ ಮತ್ತೆ ಸಭೆ ಸೇರಲು ಸದನವನ್ನು ಮುಂದೂಡಲಾಯಿತು.
ಅಂಟಾರ್ಕ್ಟಿಕ್ ಪ್ರದೇಶದಲ್ಲಿ ಭಾರತವು ಸ್ಥಾಪಿಸಿದ ಸಂಶೋಧನಾ ಕೇಂದ್ರಗಳಿಗೆ ದೇಶೀಯ ಕಾನೂನುಗಳ ಅನ್ವಯವನ್ನು ವಿಸ್ತರಿಸಲು ಮಸೂದೆ ಜಾರಿ ಮಾಡುತ್ತಿದೆ. ಭಾರತವು ಅಂಟಾರ್ಕ್ಟಿಕ್‌ನಲ್ಲಿ ಮೈತ್ರಿ ಮತ್ತು ಭಾರ್ತಿ ಎನ್ನುವ ಎರಡು ಸಕ್ರಿಯ ಸಂಶೋಧನಾ ಕೇಂದ್ರಗಳನ್ನು ಹೊಂದಿದೆ. ಅಂಟಾರ್ಕ್ಟಿಕ್ ಪ್ರದೇಶದಲ್ಲಿ ಭಾರತೀಯ ವಿಜ್ಞಾನಿಗಳು ಹಲವು ಸಂಶೋಧನೆಗಳ್ಲಿ ತೊಡಗಿಸಿಕೊಂಡಿದ್ದಾರೆ.

ಏನಿದು ಅಂಟಾರ್ಕ್ಟಿಕಾ ಮಸೂದೆ?
ಅಂಟಾರ್ಕ್ಟಿಕಾ ಒಪ್ಪಂದಕ್ಕೆ ಮತ್ತೊಂದು ಪಕ್ಷದ ಅನುಮತಿ ಅಥವಾ ಲಿಖಿತ ಅನುಮತಿಯಿಲ್ಲದೆ ಅಂಟಾರ್ಕ್ಟಿಕಾಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲು ಮಸೂದೆಯು ಪ್ರಸ್ತಾಪಿಸುತ್ತದೆ, ಸರ್ಕಾರವು ನೇಮಿಸಿದ ಅಧಿಕಾರಿಯಿಂದ ತಪಾಸಣೆಗೆ ಮತ್ತು ಶಾಸನದ ಕೆಲವು ನಿಬಂಧನೆಗಳ ಉಲ್ಲಂಘನೆಗಾಗಿ ದಂಡವನ್ನು ವಿಧಿಸುವ ಅಧಿಕಾರ ಇರುತ್ತದೆ. ಅಂಟಾರ್ಕ್ಟಿಕ್ ಸಂಶೋಧನಾ ಕಾರ್ಯದ ಕಲ್ಯಾಣ ಮತ್ತು ಹಿಮಾವೃತ ಖಂಡದ ಪರಿಸರದ ರಕ್ಷಣೆಗಾಗಿ ನಿಧಿಯನ್ನು ರೂಪಿಸಲು ಮಸೂದೆ ಪ್ರಯತ್ನಿಸುತ್ತದೆ.

ಕೋವಿಡ್ ಸೋಂಕಿತರಲ್ಲಿ ದೀರ್ಘಕಾಲೀನ ಸಮಸ್ಯೆ
ಕೋವಿಡ್-19 ಸೋಂಕಿನಿಂದ ಚೇತರಿಸಿಕೊಂಡ ಸುಮಾರು 10 ರಿಂದ 20 ಪ್ರತಿಶತದಷ್ಟು ಜನರು ವಿವಿಧ ಮಧ್ಯಮ ಮತ್ತು ದೀರ್ಘಾವಧಿಯ ಪರಿಣಾಮಗಳನ್ನು ಅನುಭವಿಸುತ್ತಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಲೋಕಸಭೆಗೆ ತಿಳಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯವು ಅಕ್ಟೋಬರ್ 21, 2021 ರಂದು ಕೋವಿಡ್ ನಂತರದ ಪರಿಣಾಮಗಳ ನಿರ್ವಹಣೆಗಾಗಿ ರಾಷ್ಟ್ರೀಯ ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ಆರೋಗ್ಯ ರಾಜ್ಯ ಸಚಿವ ಭಾರತಿ ಪ್ರವೀಣ್ ಪವಾರ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಆರಂಭಿಕ ಹಂತದಲ್ಲಿ ಸೋಂಕಿನಿಂದ ಚೇತರಿಸಿಕೊಂಡರು ಜಾಗತಿಕವಾಗಿ ನಡೆದ ಅಧ್ಯಯನದಲ್ಲಿ ಮಧ್ಯಮ, ದೀರ್ಘ ಕಾಲೀನ ಸಮಸ್ಯೆಗಳಿಂದ ಬಳಲುವುದು ಕಂಡುಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅಗ್ನಿಪಥ ಪ್ರತಿಭಟನೆ ವೇಳೆ 2,000ಕ್ಕೂ ಹೆಚ್ಚು ರೈಲು ರದ್ದು
ಜೂನ್ 15 ಜೂನ್ 23 ರ ನಡುವೆ ನಡೆದ ಅಗ್ನಿಪಥ್ ಪ್ರತಿಭಟನೆಯ ಸಂದರ್ಭದಲ್ಲಿ 2,000 ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ಸಂಸತ್ತಿಗೆ ತಿಳಿಸಿದರು. ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಅವರು ಜೂನ್ 15 ಮತ್ತು ಜೂನ್ 23 ರ ನಡುವೆ 2132 ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದರು.
ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ ಅಗ್ನಿಪಥ್ ಯೋಜನೆಯನ್ನು ಪ್ರಾರಂಭಿಸಿದ ನಂತರ ನಡೆದ ಆಂದೋಲನಗಳ ಪರಿಣಾಮವಾಗಿ ಸಾರ್ವಜನಿಕ ಅಸ್ವಸ್ಥತೆಯ ಕಾರಣದಿಂದಾಗಿ ರೈಲು ಸೇವೆಗಳ ಅಡಚಣೆಯಿಂದಾಗಿ ಪ್ರಯಾಣಿಕರಿಗೆ ನೀಡಲಾದ ಮರುಪಾವತಿ ಮೊತ್ತದ ಬಗ್ಗೆ ಪ್ರತ್ಯೇಕ ಡೇಟಾವನ್ನು ನಿರ್ವಹಿಸುವುದಿಲ್ಲ ಎಂದು ವೈಷ್ಣವ್ ಹೇಳಿದರು.

ಜಿಎಸ್‌ಟಿ, ಬೆಲೆ ಏರಿಕೆ ವಿರುದ್ಧ ಪ್ರತಿಪಕ್ಷಗಳ ಪ್ರತಿಭಟನೆ
ಅಗತ್ಯ ವಸ್ತುಗಳ ಮೇಲೆ ಇತ್ತೀಚೆಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹೆಚ್ಚಿಸಿರುವುದನ್ನು ವಿರೋಧಿಸಿ ವಿವಿಧ ವಿರೋಧ ಪಕ್ಷಗಳ ನಾಯಕರು ಶುಕ್ರವಾರ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿದರು, ಜಿಎಸ್‌ಟಿ ಹಿಂಪಡೆಯುವಂತೆ ಒತ್ತಾಯಿಸಿದರು. ಸಂಸತ್ತಿನ ಉಭಯ ಸದನಗಳಲ್ಲಿ ಬೆಲೆ ಏರಿಕೆ ವಿಷಯದ ಬಗ್ಗೆ ಚರ್ಚೆಗೆ ಪ್ರತಿಪಕ್ಷದ ಸದಸ್ಯರು ಒತ್ತಾಯಿಸಿದರು.
ಭಿತ್ತಿಪತ್ರಗಳು ಮತ್ತು ಬ್ಯಾನರ್‌ಗಳನ್ನು ಹಿಡಿದು, ಉಭಯ ಸದನಗಳಲ್ಲಿ ಚರ್ಚೆಯ ಸಂದರ್ಭದಲ್ಲಿ ಅವರು ಪ್ರಧಾನ ಮಂತ್ರಿಗಳು ಸಂಸತ್ತಿಗೆ ಬಂದು ಹೆಚ್ಚುತ್ತಿರುವ ಹಣದುಬ್ಬರ ಮತ್ತು ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಹೆಚ್ಚಳದ ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್, ಎನ್‌ಸಿಪಿ, ಸಿಪಿಐ, ಸಿಪಿಐ-ಎಂ, ಶಿವಸೇನೆ, ಡಿಎಂಕೆ, ಆರ್‌ಎಸ್‌ಪಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಮಹಾತ್ಮಾ ಗಾಂಧಿ ಪ್ರತಿಮೆಯ ಮುಂದೆ ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.












Click it and Unblock the Notifications