ಪಾಕಿಸ್ತಾನದ ಯುದ್ಧ ವಿಮಾನ ಪತನ ಖಚಿತ: ವಿದೇಶಾಂಗ ಸಚಿವಾಲಯ
ಪಾಕಿಸ್ತಾನದ ಎಲ್ಲಾ ವೈಮಾನಿಕ ದಾಳಿ ಪ್ರಯತ್ನಗಳನ್ನು ಭಾರತೀಯ ವಾಯುಸೇನೆ ವಿಫಲಗೊಳಿಸಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರರು ಬುಧವಾರ ಮಧ್ಯಾಹ್ನ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿದೇಶಾಂಗ ಸಚಿವಾಲಯದ ವಕ್ತಾರರಾದ ರವೀಶ್ ಕುಮಾರ್ ಹಾಗೂ ಏರ್ ವೈಸ್ ಮಾರ್ಷಲ್ ಆರ್ ಜಿಕೆ ಕಪೂರ್ ಅವರು ಉಪಸ್ಥಿತರಿದ್ದರು.

ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ದಾರ್ ಎಂಬ ಆತ್ಮಾಹುತಿ ದಾಳಿಕೋರ ಕಾರ್ ಬಾಂಬ್ ಸ್ಫೋಟಿಸಿ 44 ಯೋಧರ ಬಲಿದಾನಕ್ಕೆ ಕಾರಣವಾಗಿದ್ದ. ಅದರ ಪ್ರತೀಕಾರ ಎಂಬಂತೆ ಭಾರತದ ವಾಯುಸೇನೆಯು ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ನೆಲೆ ಮೇಲೆ ದಾಳಿ ನಡೆಸಿ, ನಾಶ ಪಡಿಸಿತ್ತು.

ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ನಡೆಸಿದ ವಿಧ್ವಂಸಕ ಕೃತ್ಯಕ್ಕೆ ಪ್ರತೀಕಾರವಾಗಿ ಜೈಷ್ ಎ ಮೊಹಮ್ಮದ್ ಸಂಘಟನೆಯ ನೆಲೆ ಮೇಲೆ ಮಾತ್ರ ದಾಳಿ ನಡೆಸಲಾಗಿದೆ. ಸಾಕ್ಷ್ಯಗಳ ಆಧಾರ ಮೇಲೆ ನಾವು ವೈಮಾನಿಕ ದಾಳಿ ನಡೆಸಿದ್ದೇವೆ. ಬುಧವಾರದಂದು ಪಾಕಿಸ್ತಾನದ ಒಂದು ಯುದ್ಧ ವಿಮಾನವನ್ನು ಹೊಡೆದುರುಳಿಸಲಾಗಿದೆ. ವೈಮಾನಿಕ ಘರ್ಷಣೆಯಲ್ಲಿ ಪಾಕಿಸ್ತಾನ ಯುದ್ಧ ವಿಮಾನವನ್ನು ಭಾರತದ ವಾಯುಸೇನೆಯ ಮಿಗ್ 21 ಬೈಸನ್ ಹೊಡೆದು ಹಾಕಿದ್ದು, ಪಾಕಿಸ್ತಾನದ ನೆಲದಲ್ಲಿ ಉರುಳಿದ್ದು ಖಚಿತವಾಗಿದೆ.
#WATCH Raveesh Kumar, MEA: One Pakistan Air Force fighter aircraft was shot down by Indian Air Force. In this engagement, we have lost one MiG 21. Pilot is missing in action. Pakistan claims he is in their custody. We are ascertaining the facts. pic.twitter.com/Bm0nVChuzF
— ANI (@ANI) February 27, 2019
ಈ ಸಂದರ್ಭದಲ್ಲಿ ನಮ್ಮ ಒಂದು ಮಿಗ್ 21 ಯುದ್ಧ ವಿಮಾನ ಪತನಗೊಂಡಿದ್ದು, ಪೈಲಟ್ ನಾಪತ್ತೆಯಾಗಿದ್ದಾರೆ. ಆದರೆ, ಪಾಕಿಸ್ತಾನವು ಪೈಲಟ್ ತಮ್ಮ ವಶದಲ್ಲಿದ್ದಾರೆ ಎಂದು ಹೇಳಿಕೊಳ್ಳುತ್ತಿದೆ.ಆದರೆ, ಈ ಬಗ್ಗೆ ನಮಗೆ ಅಧಿಕೃತವಾಗಿ ಸಂದೇಶ ಕಳಿಸಿಲ್ಲ. ಈ ಬಗ್ಗೆ ಪರಿಶೀಲನೆ ಜಾರಿಯಲ್ಲಿದೆ ಎಂದು ರವೀಶ್ ಕುಮಾರ್ ಹೇಳಿದರು.
ಐಎಎಫ್ ಪೈಲಟ್ ಈಗ ಪಾಕಿಸ್ತಾನದ ವಶದಲ್ಲಿರುವುದರ ಬಗ್ಗೆ ಅಧಿಕೃತವಾಗಿ ಮಾಹಿತಿ ಸಿಕ್ಕ ಬಳಿಕ ಭಾರತ ಯಾವ ರೀತಿ ರಾಜತಾಂತ್ರಿಕ ನಡೆ ಇಡಲಿದೆ ಕಾದುನೋಡಬೇಕಿದೆ. ವಿಶ್ವಸಂಸ್ಥೆಗೆ ಈ ಬಗ್ಗೆ ತಿಳಿಸಿ, ಪೈಲಟ್ ಬಿಡುಗಡೆಗೆ ಮನವಿ ಸಲ್ಲಿಸಬಹುದು ಎಂದು ರಕ್ಷಣಾ ತಂತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications