ಸಂಸತ್‌ನಲ್ಲಿ ಪ್ರತಿಪಕ್ಷಗಳ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದ ಅಧಿಕಾರಿಯ ಪತ್ತೆ ಮಾಡಿದ ಖರ್ಗೆ
Recommended Video

ನವದೆಹಲಿ, ಜುಲೈ 23: ಸಂಸತ್ ಅಧಿವೇಶನ ನಡೆಯಬೇಕಾದರೆ ಅಧಿಕಾರಿಗಳ ಗ್ಯಾಲರಿಯಲ್ಲಿ ಕೂತ ಅಧಿಕಾರಿಯೊಬ್ಬರು ಪ್ರತಿಪಕ್ಷ ಸದಸ್ಯರ ಮೇಲೆ ಕಣ್ಗಾವಲು ನಡೆಸುತ್ತಿದ್ದುದನ್ನು ಪತ್ತೆ ಹಚ್ಚಿದ ಖರ್ಗೆ ಈ ಬಗ್ಗೆ ತೀವ್ರವಾಗಿ ಟೀಕೆ ಮಾಡಿದರು.
ಸಂಸತ್ ಅಧಿವೇಶನ ನಡೆಯುವ ಸಮಯದಲ್ಲಿ ಅಧಿಕಾರಿಗಳ ಗ್ಯಾಲರಿಯಲ್ಲಿ ಕೂತಿದ್ದ ಒಬ್ಬ ಅಧಿಕಾರಿ ಪ್ರತಿಪಕ್ಷಗಳ ಪ್ರಶ್ನೆಗಳನ್ನು ನೋಟ್ ಮಾಡಿಕೊಳ್ಳುತ್ತಿದ್ದುದು ಹಾಗೂ ಪ್ರತಿಪಕ್ಷಗಳ ಸದಸ್ಯರನ್ನು ಲೆಕ್ಕಾ ಮಾಡುತ್ತಿದುದನ್ನು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪತ್ತೆ ಮಾಡಿದರು.

ಈ ಬಗ್ಗೆ ಮೊದಲಿಗೆ ಧನಿ ಎತ್ತಿದ ಖರ್ಗೆ ವಿಷಯವನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಗಮನಕ್ಕೆ ತಂದರು. ಆ ನಂತರ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಖರ್ಗೆ ಅವರು ವಿಷಯ ಪ್ರಸ್ತಾಪ ಮಾಡಿದ ಕೂಡಲೇ ಆ ಅಧಿಕಾರಿ ಗ್ಯಾಲರಿ ಬಿಟ್ಟು ಹೊರಗೆ ಹೋಗಿಬಿಟ್ಟರು ಇದು ಇನ್ನಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತು.
ಖರ್ಗೆ ಅವರ ಅಸಮಾಧಾನಕ್ಕೆ ಪ್ರತಿಕ್ರಿಯಿಸಿದ ಸುಮಿತ್ರಾ ಮಹಾಜನ್, 'ನಾನು ಕೂತಿರುವ ಜಾಗದಿಂದ ಅಧಿಕಾರಿಗಳ ಗ್ಯಾಲರಿ ಕಾಣುವುದಿಲ್ಲ, ಈ ಬಗ್ಗೆ ತನಿಖೆ ನಡೆಸಿ ಅಗತ್ಯ ಕ್ರಮ ಜರುಗಿಸುತ್ತೇನೆ' ಎಂದು ಭರವಸೆ ನೀಡಿದರು.
ಖರ್ಗೆ ಅವರ ಆರೋಪವನ್ನು ತಳ್ಳಿ ಹಾಕಿದ ಬಿಜೆಪಿಯ ಸಹಾಯಕ ಸಂಸದೀಯ ವ್ಯವಹಾರಗಳ ಸಚಿವ ಅರ್ಜುನ ರಾಮ ಮೇಘವಾಲ, ಆ ಅಧಿಕಾರಿ ತಮ್ಮ ಕಾರ್ಯಾಲಯದವರೇ, ಅವರು ತಮ್ಮ ಕೆಲಸ ಮಾಡುತ್ತಿದ್ದಾರಷ್ಟೆ' ಎಂದರು.
ಇದೇ ವಿಷಯದ ಬಗ್ಗೆ ಮಾತನಾಡಿದ ಪ್ರಕಾಶ್ ಜಾವಡೇಕರ್ ಅವರು, ಸಂಸತ್‌ನಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಯಾರು ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಾಗಿ ಬಿಡುತ್ತದೆ, ರಾಹುಲ್ ಅವರು ಕಣ್ಣು ಹೊಡೆದಿದ್ದನ್ನೂ ದೇಶವೇ ನೋಡಿದೆ ಎಂದು ಕಾಲೆಳೆದರು.












Click it and Unblock the Notifications