ಲೋಕಸಭೆ ಚುನಾವಣೆ: ಅಡ್ವಾಣಿ, ಜೋಶಿ ಸ್ಪರ್ಧಿಸುತ್ತಾರಾ?
ನವದೆಹಲಿ, ಜನವರಿ 25: ಹೊಸ ಮುಖಗಳಿಗೆ ಅವಕಾಶ ನೀಡುವ ಸಲುವಾಗಿ 75 ವರ್ಷ ದಾಟಿದ ಮುಖಂಡರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬ ಬಿಜೆಪಿಯ ನಿಲುವು ಈ ಬಾರಿಯ ಚುನಾವಣೆಯಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ವಯಸ್ಸಿನ ಮಿತಿಯ ಗಡಿ ದಾಟಿರುವ ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಯೇ?
ಇದು ಅಡ್ವಾಣಿ ಹಾಗೂ ಜೋಶಿ ಅವರಿಗೆ ಬಿಟ್ಟಿದ್ದು ಎಂದು ಬಿಜೆಪಿ ತಿಳಿಸಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಅಡ್ವಾಣಿ ಅವರು ಗಾಂಧಿನಗರ ಕ್ಷೇತ್ರದಿಂದ ಜಯಗಳಿಸಿದ್ದರು. ವಾರಣಾಸಿ ಕ್ಷೇತ್ರವನ್ನು ನರೇಂದ್ರ ಮೋದಿ ಅವರಿಗೆ ಬಿಟ್ಟುಕೊಟ್ಟಿದ್ದ ಮುರಳಿ ಮನೋಹರ ಜೋಶಿ ಕಾನ್ಪುರದಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು.

ಚುನಾವಣೆಗಳಲ್ಲಿ ಸ್ಪರ್ಧಿಸಲು 75 ವರ್ಷ ವಯಸ್ಸಿನ ಮಿತಿ ಹೇರಿಲ್ಲ. ಈ ವಯೋಮಿತಿ ಸಚಿವ ಹುದ್ದೆಗೆ ಮಾತ್ರ ಅನ್ವಯಿಸುತ್ತದೆ ಎಂದು ಬಿಜೆಪಿ ತಿಳಿಸಿದೆ.
ಈಗಾಗಲೇ ಆರೋಗ್ಯದ ಕಾರಣವೊಡ್ಡಿ ಸುಷ್ಮಾ ಸ್ವರಾಜ್ ಮತ್ತು ಉಮಾ ಭಾರತಿ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪ್ರಕಟಿಸಿದ್ದಾರೆ. ಆದರೆ, ಈ ಬಗ್ಗೆ ಇನ್ನೂ ಬಿಜೆಪಿ ನಿರ್ಧರಿಸಿಲ್ಲ.
ಅಡ್ವಾಣಿ (91) ಮತ್ತು ಜೋಶಿ (84) ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಖಚಿತವಾಗಿಲ್ಲ. ಈ ನಿರ್ಧಾರವನ್ನು ಅವರಿಗೇ ಬಿಡಲು ಪಕ್ಷ ನಿರ್ಧರಿಸಿದ್ದಾರೆ. ಪಕ್ಷ ಬಯಸಿದ್ದನ್ನು ತಾವು ಮಾಡಲು ಸಿದ್ಧರಿರುವುದಾಗಿ ಜೋಶಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications